ಶಾಲಾ ದತ್ತು ಯೋಜನೆ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸಹಕಾರಿ : ಜಿಲ್ಲಾಧಿಕಾರಿ

ತುಮಕೂರು: ಶಾಲಾ ದತ್ತು ಕಾರ್ಯಕ್ರಮ ಯೋಜನೆಯಡಿ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮೀಣ ಭಾಗದ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಗಳಲ್ಲಿನ ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿ ಶಿಕ್ಷಣ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಎಲ್ಲ ಇಲಾಖೆಗಳ ಎಲ್ಲ ಹಂತದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಕಾರ್ಯಕ್ರಮವನ್ನು ರೂಪಿಸಿದ್ದು, ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಗೆ ಸೇರಿದ ಯಾವುದಾದರೂ ಒಂದು ಶಾಲೆಯನ್ನು ದತ್ತು ಪಡೆದು ನಿರಂತರ ಸಂಪರ್ಕದಲ್ಲಿದ್ದು, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಕಾರ್ಯಕ್ರಮ ಇದಾಗಿದ್ದು, ಎಲ್ಲ ಅಧಿಕಾರಿಗಳು ಶಾಲೆಗಳನ್ನು ದತ್ತು ಪಡೆಯಬೇಕು ಎಂದು ಸೂಚಿಸಿದರು.

ಈ ಸಂಬಂಧ ತಹಶೀಲ್ದಾರ್‌ಗಳು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು, ತಾಲ್ಲೂಕು ಮಟ್ಟದ ಅಧಿಕಾರಿಗಳ ನಂತರ ಬಿಆರ್‌ಸಿ ಮತ್ತು ಸಿಆರ್‌ಸಿ ಅಧಿಕಾರಿಗಳು ತಮ್ಮ ನಿತ್ಯದ ಶಾಲಾ ಚಟುವಟಿಕೆಗಳ ಜೊತೆಗೆ ಶಾಲಾದತ್ತು ಕಾರ್ಯಕ್ರಮದಲ್ಲಿಯೂ ಸಹ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಸೂಚಿಸಿದರು.

ಮನೆಹಾನಿ ಪ್ರಕರಣಗಳಿಗೆ ಪರಿಹಾರ ಮತ್ತು ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರ ಪೋರ್ಟಲ್‌ನಲ್ಲಿ ಅಗತ್ಯ ಮಾಹಿತಿಯನ್ನು ನಮೂದಿಸುವುದು ಸೇರಿದಂತೆ ಯಾವುದೇ ಕೆಲಸಗಳು ಬಾಕಿಯಿರಬಾರದು ಎಂದು ತಹಶೀಲ್ದಾರ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸೂಚಿಸಿದರು.

ತಮ್ಮ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿಂದು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಎಬಿ1ಬಿ2ಸಿ ಕೆಟಗೆರಿಗಳಾಗಿ ವಿಂಗಡಿಸಿ ಜಿಪಿಎಸ್ ಮಾಡಿಸಿ ನಿಗಧಿಪಡಿಸಿರುವಂತೆ ಪರಿಹಾರ ನೀಡುವುದು ಜೊತೆಗೆ ಬೆಳೆಹಾನಿ ಮಾಹಿತಿಯನ್ನು ಪರಿಹಾರ ಪೋರ್ಟಲ್ ನಮೂದಿಸುವ ಕೆಲಸ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ನಮ್ಮ ಕ್ಲಿನಿಕ್ ತೆರೆಯಲು ಮೂಲ ಸೌಕರ್ಯಗಳಿರುವ ಕಟ್ಟಡಗಳನ್ನು ಬಾಡಿಗೆ ಪಡೆಯಲು ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಸಾರ್ವಜನಿಕರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಆಭಾ ಕಾರ್ಡುಗಳನ್ನು ತ್ವರಿತಗತಿಯಲ್ಲಿ ನೀಡುವ ಕೆಲಸವಾಗಬೇಕು ಎಂದು ತಿಳಿಸಿದರು.

ವಿಕಲಚೇತನರಿಗೆ ನೀಡುವ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ಕಾರ್ಡುಗಳನ್ನು ನೀಡಲು ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವತ್ತ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದು ತಿಳಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಿವೇಶನಗಳನ್ನು ನೀಡುವ ಸಲುವಾಗಿ ಮುಖ್ಯಾಧಿಕಾರಿಗಳು, ಪೌರಾಯುಕ್ತರು, ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮವಹಿಸಬೇಕು. ಶಾಲಾವರಣದಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಅಗತ್ಯ ನಿವೇಶನ ನೀಡಲು ಸಂಬಂಧಿಸಿದ ಬಿಇಓ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಡಿಡಿಪಿಐ ಸಿ.ನಂಜಯ್ಯ ಅವರಿಗೆ ಸೂಚಿಸಿದರು.

ಸರ್ಕಾರಿ ಹಾಗೂ ಗ್ರಾಮ ಠಾಣದಲ್ಲಿರುವ ಶಾಲೆಗಳನ್ನು ಶಿಕ್ಷಣ ಇಲಾಖೆ ಸುಪರ್ದಿಗೆ ಖಾತೆ ಮಾಡಿಕೊಡಲು ಆಯಾ ತಾಲ್ಲೂಕು ಬಿಇಓ ಅಧಿಕಾರಿಗಳು ಮುಖ್ಯ ಶಿಕ್ಷಕರ ಮೂಲಕ ಸಂಬಂಧಿಸಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಶೀಘ್ರ ಖಾತೆ ಮಾಡಿಸಿಕೊಳ್ಳುವಂತೆ ತಿಳಿಸಬೇಕು ಎಂದು ಹೇಳಿದರು.

ಅಲೆಮಾರಿ, ಅರೆ ಅಲೆಮಾರಿಗಳಿಗೆ ನಿವೇಶನಗಳನ್ನು ಕಲ್ಪಿಸುವುದಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕಲ್ಲದೇ ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಧಾನಮಂತ್ರಿ ಪಿಎಂ ಕಿಸಾನ್ ಯೋಜನೆಯಡಿ ಲಾಭ ಪಡೆಯಲು ರೈತರು ಕಡ್ಡಾಯವಾಗಿ ಇ-ಕೆವೈಸಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದ್ದು, ಶೀಘ್ರ ಇ-ಕೆವೈಸಿ ಮಾಡಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ ಎಂದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ವಿ. ಅಜಯ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!