ನಿಟ್ಟೂರು ಬಸ್‍ನಿಲ್ದಾಣ ಬೀದಿನಾಯಿಗಳ ತಂಗುದಾಣ..!!


ಗುಬ್ಬಿ: ತಾಲ್ಲೂಕಿನ ಹೃದಯಭಾಗದಂತಿರುವ ನಿಟ್ಟೂರಿನಲ್ಲಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣ ಬೀದಿನಾಯಿಗಳ ತಂಗುದಾಣವಾಗಿಬಿಟ್ಟಿದೆ. ಬೀದಿನಾಯಿಗಳ ದಂಡು ಕಂಡು ಪ್ರಯಾಣಿಕರು, ಮಕ್ಕಳು ಭಯಭೀತಗೊಂಡಿದ್ದಾರೆ.

ವ್ಯವಹಾರಿಕ ಕೇಂದ್ರವಾದ ನಿಟ್ಟೂರು ಈಗಾಗಲೇ ಎಚ್ಎಎಲ್ ಘಟಕ ಮೂಲಕ ದೇಶದ ಗಮನಸೆಳೆದಿದೆ. ಇಂತಹ ಹೋಬಳಿ ಕೇಂದ್ರದಲ್ಲಿ ಎಲ್ಲೆಲ್ಲೂ ಬೀದಿ ನಾಯಿಗಳ ಅಬ್ಬರ ಮಿತಿ ಮೀರಿದೆ. ಸಾರ್ವಜನಿಕ ಸ್ಥಳ, ಶಾಲಾ ಮೈದಾನ, ದೇವಾಲಯಗಳ ಸ್ಥಳಗಳಲ್ಲಿ ಗುಂಪು ಗುಂಪು ಕೂಡಿ ಕಚ್ಚಾಟ, ಕಿತ್ತಾಟದಲ್ಲಿ ವಾಹನಗಳ ಮುಂದೆ ನುಗ್ಗಿ ಸವಾರರು ನೆಲಕ್ಕುರುಳಿ ಪೆಟ್ಟುಗಳಾಗಿರುವ ದುರ್ಘಟನೆಗಳು ನಡೆದುಹೋಗಿವೆ. ಬೀದಿ ನಾಯಿಗಳ ಹಾವಳಿಗೆ ಬ್ರೇಕ್ ಹಾಕುವ ಕೆಲಸ ಸ್ಥಳೀಯ ಗ್ರಾಮ ಪಂಚಾಯಿತಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಹಾದು ಹೋಗಿದ್ದು ನಿತ್ಯ ಸಾವಿರಾರು ಮಂದಿ ನಿಟ್ಟೂರು ಮೂಲಕ ಹಾದು ಹೋಗುತ್ತಾರೆ. ಈ ಜೊತೆಗೆ ಗ್ರಾಮದಲ್ಲಿನ ಸಾರ್ವಜನಿಕ ಸಂಚಾರ ಹಾದಿಗಳಲ್ಲಿ ಸಾಲುಸಾಲಾಗಿ ಬೀದಿನಾಯಿಗಳು ಗುಂಪುಗಟ್ಟಲೆ ಓಡಾಟ ಆರ್ಭಟಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಿಟ್ಟೂರು ಬೀದಿ ಬೀದಿಯಲ್ಲೂ ಬೆಳಗಾದಾಕ್ಷಣ ಹಿಂಡು-ಹಿಂಡಾಗಿ ಬೀದಿನಾಯಿಗಳು ಕಚ್ಚಾಡುವುದು ಮಕ್ಕಳಿಗೆ ಪ್ರಾಣಾಪಾಯ ಕಟ್ಟಿಟ್ಟಬುತ್ತಿ ಎಂದು ಪೋಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಬಸ್ ನಿಲ್ದಾಣ ದಲ್ಲೇ ವಾಸ್ತವ್ಯ ಹೂಡುವ ಬೀದಿನಾಯಿಗಳು ಯಾವುದೇ ಸಮಯದಲ್ಲಿ ಪ್ರಯಾಣಿಕರ ಮೇಲೇರಗಲಿದೆ. ನಿತ್ಯ ಭಯದಲ್ಲೇ ಬಸ್ ಬರುವಿಕೆಗೆ ಕಾಯುತ್ತಿರುವ ಜನರನ್ನು ಪ್ರತ್ಯಕ್ಷವಾಗಿ ಕಂಡರೂ ನಿಟ್ಟೂರು ಗ್ರಾಮಪಂಚಾಯ್ತಿ ಅಧಿಕಾರಿಗಳು ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವ ಕಾರ್ಯ ಮಾಡಿಲ್ಲ. ಸ್ಥಳೀಯರ ಆತಂಕ ದೂರ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!