ತುಮಕೂರು: ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವೈದ್ಯ ಹಾಗೂ ಸುಳ್ಳು ಪ್ರಕರಣ ದಾಖಲಿಸಿದ ಪಿಎಸ್‌ಐ ನಾಗರಾಜ್ ವಿರುದ್ಧ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಪ್ಪುಪಟ್ಟಿ ಧರಿಸಿ ಪತ್ರಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಕೊರಟಗೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪಘಾತಕ್ಕೊಳಗಾಗಿದ್ದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ವೈದ್ಯರ ನಡೆಗೆ ಪತ್ರಕರ್ತರು ಆಸ್ಪತ್ರೆಗೆ ತೆರಳಿ ವರದಿ ಮಾಡಲು ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯ ಡಾ. ನವೀನ್ ಎಂಬುವವರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದು, ಪತ್ರಕರ್ತರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ ವೈದ್ಯರನ್ನು ಕೂಡಲೇ ಅಮಾನತುಗೊಳಿಸಿ ಬಂಧಿಸಬೇಕೆಂದು ಪತ್ರಕರ್ತರು ಆಗ್ರಹಿಸಿದರು.
ನೂರಾರು ಸಂಖ್ಯೆಯಲ್ಲಿ ಸೇರಿದ ಪತ್ರಕರ್ತರು ವೈದ್ಯ ಡಾ. ನವೀನ್ ಹಾಗೂ ಸುಳ್ಳು ಪ್ರಕರಣ ದಾಖಲಿಸಿದ ಪಿ.ಎಸ್.ಐ. ನಾಗರಾಜು ಅವರನ್ನು ಕೂಡಲೇ ಅಮಾನತ್ತುಗೊಳಿಸಿ ಬಂಧಿಸಬೇಕೆಂದು ಒಕ್ಕೊರೊಲಿನಿಂದ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ಅಪಘಾತಕ್ಕೊಳಗಾಗಿ ಸರಿಯಾಗಿ ಚಿಕಿತ್ಸೆ ಸಿಗದೆ ವ್ಯಕ್ತಿಗಳು ಪರದಾಡುತ್ತಿದ್ದ ವೇಳೆ ಸರಿಯಾಗಿ ಚಿಕಿತ್ಸೆ ನೀಡಿದ ಕೊರಟಗೆರೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನವೀನ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಜೊತೆಗೆ ಪತ್ರಕರ್ತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಕಾರ್ಯನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವೈದ್ಯ ಡಾ.ನವೀನ್ ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಕರಣದ ಬಗ್ಗೆ ಯಾವುದೇ ವಿಚಾರಣೆ ನಡೆಸದೆ ಎಫ್‌ಐಆರ್ ದಾಖಲಿಸಿದ ಪಿಎಸ್‌ಐ ನಾಗರಾಜು ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಕೆಯುಡಬ್ಲ್ಯೂಜೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್ ಮಾತನಾಡಿ, ಪತ್ರಕರ್ತರ ಮೇಲೆ ಸಕಾರಣವಿಲ್ಲದೆ ಹಲ್ಲೆ ನಡೆಸಿರುವ ಕೊರಟಗೆರೆ ವೈದ್ಯ ಡಾ.ನವೀನ್ ಹಾಗೂ ಸುಳ್ಳು ಪ್ರಕರಣ ದಾಖಲಿಸಿರುವ ಪಿಎಸ್‌ಐ ನಾಗರಾಜ್ ಅವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಈ ಬಗ್ಗೆ ಪರಿಶೀಲನೆ ನಡೆಸಿ, ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವುದಾಗಿ ಭರವಸೆ ನೀಡಿದರು.
ನಂತರ ಜಿಲ್ಲಾ ಪಂಚಾಯತ್ ಸಿಇಒ ಡಾ.ಕೆ.ವಿದ್ಯಾಕುಮಾರಿ ಅವರಿಗೂ ಮನವಿ ಸಲ್ಲಿಸಲಾಯಿತು. ತದನಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ಪತ್ರಕರ್ತರು ಪ್ರತಿಭಟನೆ ನಡೆಸಿ ವೈದ್ಯ ಡಾ.ನವೀನ್ ಮತ್ತು ಪಿಎಸ್‌ಐ ನಾಗರಾಜ್ ಅವರ ಅಮಾನತ್ತಿಗೆ ಆಗ್ರಹಿಸಿದರು. ಈ ಸಂಬಂಧ ಮನವಿಯನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ಮತ್ತು ಡಿಹೆಚ್‌ಒ ಕಚೇರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಹೋರಾಟ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ,, ರಾಷ್ಟ್ರೀಯ ಮಂಡಳಿ ಸದಸ್ಯರಾದ ಶಾಂತರಾಜು, ರಾಜ್ಯ ಸಮಿತಿ ಸದಸ್ಯರಾದ ಸಿದ್ದಲಿಂಗ ಸ್ವಾಮಿ,ಸಂಘದ ಜಿಲ್ಲಾ ನಿರ್ದೇಶಕರುಗಳಾದ ತೋ.ಸಿ.ಕೃಷ್ಣಮೂರ್ತಿ, , ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ್ ನಾಯಕ್, ಯಶಸ್. ಕೆ. ಪದ್ಮನಾಥ್, ಚಿಕ್ಕಣ್ಣ, ಬೈರೇಶ್, ಪ್ರಗತಿ ನಾಗರಾಜು, ಸಿ ಜಯಣ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಸಿರಾ ದಶರಥ,ಸತೀಶ್ ಹಾರೋಗೆರೆ, ಎನ್.ಡಿ. ರಂಗರಾಜು, ಹಿರಿಯ ಪತ್ರಕರ್ತರಾದ ಪುರುಷೋತ್ತಮ್, ಸಿ ಎನ್ ರಾಜು ಹಿರಿಯ ಪತ್ರಕರ್ತ ಕುಚ್ಚಂಗಿ ಪ್ರಸನ್ನ , ತುರುವೇಕೆರೆ ತಾಲೂಕು ಅಧ್ಯಕ್ಷರಾದ,ಮಲ್ಲಿಕಾರ್ಜುನ್ ದುಂಡ ಕುಣಿಗಲ್ ತಾಲೂಕು ಅಧ್ಯಕ್ಷರಾದ ರಂಗನಾಥ್ , ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷರಾದ ಯೋಗೀಶ್, ಸಿರಾ ತಾಲೂಕು ಘಟಕದ ಅಧ್ಯಕ್ಷರಾದ ಜಯಪಾಲ್ , ಮಧುಗಿರಿ ತಾಲೂಕಿನ ಪದಾಧಿಕಾರಿಗಳಾದ ಕಣಿಮಯ್ಯ, ಪತ್ರಕರ್ತರಾದ ಹರೀಶ್ ಆಚಾರ್ಯ, ಟಿವಿ9 ಮಹೇಶ್,ರಘು, ಪತ್ರಿಕಾ ಛಾಯಾಗ್ರಕರಾದ ರೇಣುಕಾ ಪ್ರಸಾದ್, ಸುರೇಶ್, ಜೆಪಿ, ನೃಪತುಂಗ, ಮಂಜುನಾಥ್ ಗೌಡ, ಪ್ರಗತಿ ಗುರುಪ್ರಸಾದ್, ಜಟ್ಟಿ ಅಗ್ರಹಾರ ನಾಗರಾಜು,ಹಾಗೂ ವಿಶೇಷವಾಗಿ ಕೊರಟಗೆರೆ, ತಾಲೂಕು ಘಟಕದ ಎಲ್ಲಾ ಪತ್ರಕರ್ತ ಬಂಧುಗಳು,ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ತುಮಕೂರು ನಗರದ ಎಲ್ಲಾ ಪತ್ರಕರ್ತರು ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮದವರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.