ಮಧುಗಿರಿ: ತಾಲೂಕು ಕಸಬಾ ಹೋಬಳಿ ಕಂಬದಹಳ್ಳಿ ಗ್ರಾಮದಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ಮತ್ತು ತುಮುಲ್ ನಿರ್ದೇಶಕರಾದ ಕೊಂಡವಾಡಿ ಚಂದ್ರಶೇಖರ್ ಟೇಪ್ ಕತ್ತರಿಸುವ ಮೂಲಕ ಹಾಲು ಉತ್ಪಾದಕರ ನೂತನ ಸಂಘದ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ವಿ.ವೀರಭದ್ರಯ್ಯ, ರೈತರು ಆರ್ಥಿಕವಾಗಿ ಮುಂದುವರಿಯಲು ಹಾಲು ಉತ್ಪಾದನೆ ಬಹಳ ಮುಖ್ಯವಾಗಿದ್ದು, ಬೇಸಾಯ ಕೈಕೊಟ್ಟ ಸಂದರ್ಭದಲ್ಲಿ ಉಪಕಸುಬುಗಳಿಂದ ಹಳ್ಳಿಗಳಲ್ಲಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಮಳೆಯನ್ನೇ ನಂಬಿಕೊಂಡು ವ್ಯವಸಾಯ ಮಾಡುವವರ ಪರಿಸ್ಥಿತಿ ಕಷ್ಟಕರವಾಗಿದೆ. ಹೈನುಗಾರಿಕೆಯು ಬಹಳ ದೊಡ್ಡ ಉದ್ಯಮವಾಗಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ಕಲ್ಪಿಸಿ ಕೊಟ್ಟಿದೆ. ರೈತರಿಗೆ ವ್ಯವಸಾಯ ಕೈ ಕೊಟ್ಟಾಗ ಹಾಲು ಉತ್ಪಾದನೆಯು ಸಹಕಾರಿಯಾಗಿದೆ. ಕೊಂಡವಾಡಿ ಚಂದ್ರಶೇಖರ್ ರವರು ತುಮುಲ್ ಅಧ್ಯಕ್ಷರಾಗಿದ್ದ ಸಂಧರ್ಭದಲ್ಲಿ ಹಾಲು ಉತ್ಪಾದಕರಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಹಾಲು ಉತ್ಪಾದಕರು ಗುಣಮಟ್ಟದ ಹಾಲು ಉತ್ಪಾದನೆ ಮಾಡುವುದರ ಮೂಲಕ ಹೆಚ್ಚಿನ ಆರ್ಥಿಕ ಲಾಭ ಪಡೆಯಬೇಕು ಹಾಗೂ ರೈತರು ಸಹಕಾರ ಸಂಘದ ಮೂಲಕ ವಹಿವಾಟು ಮಾಡಿದಲ್ಲಿ ಸಂಘ ಹಾಗೂ ಹಾಲು ಉತ್ಪಾದಕರಿಬ್ಬರೂ ಉತ್ತಮ ಲಾಭಾಂಶ ಪಡೆಯಬಹುದು. ಮನೆಗೊಂದು ಹಸುವನ್ನು ಸಾಕುವ ಮೂಲಕ ಆರ್ಥಿಕ ಅಭಿವೃದ್ಧಿ ಹೊಂದುವುದು ಸೇರಿದಂತೆ ಸಂಘ ಹಾಗೂ ಸರ್ಕಾರ ದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ತುಂಗೋಟಿ ರಾಮಣ್ಣ, ಎಂ.ಆರ್.ಜಗನ್ನಾಥ್ ಕೆ.ಎಂ.ಎಫ್.ಗಿರೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.