ಗುಬ್ಬಿ: ತುಮಕೂರು ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಬೋರ್ ವೆಲ್ ಕೊರೆಸುವ ಯೋಜನೆಯಲ್ಲಿ ವಂಚನೆ ಮಾಡಿರುವುದಾಗಿ ನನ್ನ ಮೇಲೆ ಮುಗ್ದ ಫಲಾನುಭವಿಗಳಿಂದ ಆರೋಪ ಮಾಡಲಾಗಿದೆ. ನನ್ನ ಮೇಲೆ ಷಡ್ಯಂತ್ರ ಮಾಡಿದ ವಂಚಕರು ಹಣ ಕಳೆದುಕೊಂಡ ಮುಗ್ದರಿಗೆ ದಿಕ್ಕು ತಪ್ಪಿಸಿ ವಂಚನೆ ಆರೋಪ ನನ್ನ ಮೇಲೆ ಬರುವಂತೆ ಮಾಡಿದ್ದಾರೆ. ಕುಮುದಾ ಎಂಬಾಕೆ ನನಗೆ ವಂಚನೆ ಮಾಡಿ ಮಧ್ಯಸ್ಥಿಕೆ ವಹಿಸಿದ್ದ ತಪ್ಪಿಗೆ ನನ್ನನ್ನೇ ಬಲಿ ಕೊಡುವ ಕುತಂತ್ರ ಮಾಡಿದ್ದಾರೆ ಎಂದು ತಾಲ್ಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ.ಆರ್.ಗುರುಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಆವರಣದಲ್ಲಿ ಆಯೋಜಿಸಿದ್ದ ಮದಕರಿ ನಾಯಕರ ಜಯಂತಿ ಕಾರ್ಯಕ್ರಮ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ಖಾಯಂ ನೌಕರರು ಎಂದು ನಂಬಿಸಿ 5 ಲಕ್ಷ ರೂಗಳಲ್ಲಿ ಕೊಳವೆ ಬಾವಿ ಕೊರೆಸುವ ಯೋಜನೆಗೆ ಕೇವಲ 50 ಸಾವಿರ ಕಟ್ಟಿದರೆ ಉಳಿದ ನಾಲ್ಕೂವರೆ ಲಕ್ಷ ಸಬ್ಸಿಡಿ ಆಗಲಿದೆ ಎಂದು ಹೇಳಿ ನನಗೂ ನಂಬಿಸಿದ್ದರು. ನಾನು ತಾಲ್ಲೂಕಿನ ವಾಲ್ಮೀಕಿ ಸಮಾಜದ ಬಡ ರೈತರಿಗೆ ಅನುವು ಮಾಡಲು ಮಧ್ಯಸ್ಥಿಕೆ ವಹಿಸಿ ಸುಮಾರು 40 ಲಕ್ಷ ರೂಗಳನ್ನು ಪಂಗನಾಮ ಹಾಕಿರುವ ಕುಮುದಾ ಎಂಬಾಕೆ ಈಗ ನಾಪತ್ತೆ ಆಗಿದ್ದಾರೆ ಎಂದು ವಿವರಿಸಿದರು.
ಸಬ್ಸಿಡಿ ಆಸೆಯೂ ಎಲ್ಲರನ್ನೂ ನಂಬಿಸಿತ್ತು. ತಾಲ್ಲೂಕಿನ ಹಲವಾರು ಬಡ ರೈತರು ಸಾಲ ಮಾಡಿದ್ದಾರೆ. ಕೆಲವರು ತಮ್ಮ ಹಸುಕರುಗಳು, ಒಡವೆಗಳನ್ನು ಮಾರಿದ್ದಾರೆ. ನಿಗಮದಲ್ಲಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿಯನ್ನು ಸಿದ್ದಪಡಿಸಿ ಮಹಾವಂಚನೆ ಮಾಡಿದ್ದಾರೆ. ಇವರ ಈ ವಂಚನೆ ಕೆಲಸಕ್ಕೆ ಮಾರಪ್ಪ ನಾಯಕ ಹಾಗೂ ಶ್ರೀಧರ ನಾಯಕ ಎಂಬ ಇಬ್ಬರು ಮಧ್ಯವರ್ತಿಗಳ ಸಾಥ್ ಕೂಡಾ ಇದೆ. ವಾಲ್ಮೀಕಿ ಸಮಾಜದ ಅಧ್ಯಕ್ಷನಾಗಿ ನನ್ನ ಮೇಲೆ ಸಲ್ಲದ ಆರೋಪ ಮಾಡಿ ಕೋತಿ ಮೇಕೆ ಬಾಯಿಗೆ ಮೊಸರು ಬಳಿದಂತೆ ಎನ್ನುವ ಗಾದೆ ರುಜುವಾತು ಮಾಡಿದ ಕುಮುದಾ ಎಂಬಾಕೆ ಇನ್ನೂ ಸಾಕಷ್ಟು ಮಂದಿಗೆ ಹೀಗೆ ವಂಚಿಸಿರುವ ಆರೋಪವಿದೆ. ಈಕೆಯನ್ನು ನಿಗಮ ಕೆಲಸದಿಂದ ತೆಗೆದದ್ದೆ ತಡ ನಾಪತ್ತೆಯಾಗಿದ್ದು, ಈಗ ರೈತ ಪರ ನಿಂತ ನನ್ನ ಮೇಲೆಯೇ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ. ಮರ್ಯಾದೆಗೆ ಅಂಜಿ ನನ್ನ ಮನೆ, ಜಮೀನು ಮಾರಿ ಹಣ ನೀಡಿದ್ದ ರೈತರಿಗೆ ಮರಳಿ ಹಣ ನೀಡುತ್ತಿದ್ದೇನೆ. ಶೇಕಡಾ 70 ರಷ್ಟು ಮಂದಿಗೆ ಈಗಾಗಲೇ ಹಣ ನೀಡಿದ್ದೇನೆ. ಉಳಿದ ಶೇಕಡಾ 30 ರಷ್ಟು ಮಂದಿಗೆ ತಿಂಗಳಲ್ಲಿ ವ್ಯವಸ್ಥೆ ಮಾಡುತ್ತಿದ್ದೇನೆ ಎಂದು ತಮ್ಮ ಅಳಲು ತೋಡಿಕೊಂಡರು.
ನನ್ನ ಮೂಲಕ ಕೊಟ್ಟ ಹಣ ವಾಪಸ್ ಕೇಳಿದರೆ ರೌಡಿಗಳಿಂದ ಬೆದರಿಕೆ ಸಹ ಹಾಕಿಸಿರುವ ಕುಮುದಾ ಅವರು ಸುಪಾರಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. ನನಗೆ ಜೀವ ಬೆದರಿಕೆಯೊಡ್ಡಿದ ಆಕೆ ಮತ್ತು ಸಹಚರರ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡುತ್ತೇನೆ. ಲಕ್ಷಾಂತರ ರೂಗಳನ್ನು ವಂಚನೆ ಮಾಡಿ ನನ್ನ ಮೇಲೆ ಆರೋಪ ಮಾಡುವ ಒಂದು ಗುಂಪು ತಯಾರಿಸಿಕೊಂಡು ಈಗ ನನ್ನ ನಂಬಿದ್ದ ಮುಗ್ದ ರೈತರನ್ನು ನನ್ನ ವಿರುದ್ಧವೇ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ಜೊತೆಗೆ ಎಸ್ಪಿ ಕಚೇರಿಗೆ ದೂರು ಸಲ್ಲಿಸಿರುವುದಾಗಿ ಹೇಳಿ ಮಾಧ್ಯಮದಲ್ಲಿ ಸುದ್ದಿ ಮಾಡಿಸಿದ್ದು, ವಾಸ್ತವದಲ್ಲಿ ನನ್ನ ವಿರುದ್ಧ ದೂರು ನೀಡಿರುವುದಿಲ್ಲ. ಈ ಬಗ್ಗೆ ರೈತರೇ ಹೇಳಿಕೆ ನೀಡಿದ್ದಾರೆ. ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ನನ್ನ ಮೇಲೆ ಅಸೂಯೆ ಹೊಂದಿರುವ ಕೆಲವರು ಸಹ ಕುಮುದಾ ಅವರ ಪರ ಮಾತನಾಡುತ್ತಾ ನನ್ನ ಮೇಲೆ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಾನು ನಾಪತ್ತೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ನಾನು ಗುಬ್ಬಿ ನಗರದಲ್ಲೇ ಬಾಡಿಗೆ ಮನೆಯಲ್ಲಿ ಕುಟುಂಬ ಸಮೇತ ವಾಸವಿದ್ದೇನೆ. ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದುದು. ವಂಚನೆಗೆ ಒಳಗಾದ ರೈತರಿಗೆ ನಾನೇ ಹಣ ವಾಪಸ್ ನೀಡುವ ಕೆಲಸ ಮಾಡುತ್ತಿದ್ದೇನೆ. ನಂಬಿಸಿ ಮೋಸ ಮಾಡಿದಾಕೆ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಂಚನೆಗೆ ಒಳಗಾದ ರೈತರಾದ ಶ್ರೀನಿವಾಸ್, ಬಸವರಾಜ್, ಶಂಕರಪ್ಪ, ನಟರಾಜ್, ಕೃಷ್ಣಪ್ಪ, ಸೋಮಶೇಖರ್, ರವಿಕುಮಾರ್ ಇತರರು ಇದ್ದರು.