ಪಾವಗಡ: ಇದೂವರೆಗೆ ವಿದ್ಯುತ್ ಕಾಣದ 18 ಮನೆಗಳಿಗೆ ವಿದ್ಯುತ್ ಭಾಗ್ಯ,..ಅಕ್ರಮವಾಗಿ ಮುಚ್ಚಿ ಹೋದ ನಕಾಶೆ ರಸ್ತೆಗಳು ಮುಕ್ತ…ಹೀಗೆ ಸಾರ್ವಜನಿಕರ ಹತ್ತು ಹಲವು ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸ್ಥಳದಲ್ಲಿಯೇ ಪರಿಹಾರ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಜಿಲ್ಲೆಯ ಪಾವಗಡದ ಕಸಬಾ ಹೋಬಳಿ ಗುಮ್ಮಗಟ್ಟ ಗ್ರಾಮದಲ್ಲಿ “ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ” ಕಾರ್ಯಕ್ರಮದಲ್ಲಿ ಭಾಗವಹಿಸಿದ ತುಮಕೂರು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್,ಸ್ಥಳೀಯರ ಕುಂದುಕೊರತೆಗಳನ್ನು ಸಮಾಧಾನದಿಂದ ಆಲಿಸುತ್ತಾ ಸ್ಥಳದಲ್ಲಿಯೇ ಬಗೆಹರಿಯಬಹುದಾದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಿದರು.
18 ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲ ಎಂಬ ಅರ್ಜಿ ನೀಡಿದ ಮೂರ್ನಾಲ್ಕು ದಿನಗಳಲ್ಲಿ ಆ 18 ಮನೆಗಳಿಗೂ ವಿದ್ಯುತ್ ಸಂಪರ್ಕ ಒದಗಿಸುವಂತೆ ಬೆಸ್ಕಾಂ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು,ನಕಾಶೆ ರಸ್ತೆ ಒತ್ತುವರಿ ಬಗ್ಗೆ ಬಂದಿದ್ದ 4 ಪ್ರಕರಣಗಳನ್ನೂ ಒಂದು ವಾರದಲ್ಲಿ ಬಗೆಹರಿಸಲು ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.
ಈ ವೇಳೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್,ಇತ್ತೀಚೆಗೆ ಒಂದೂವರರ ವರ್ಷದಲ್ಲಿ ಸುಮಾರು ಎರಡು ಲಕ್ಷದಷ್ಟು ಪೈಕಿ ಪಹಣಿಗಳಿದ್ದವು,ಅವುಗಳನ್ನು ಕಡಿಮೆಗೊಳಿಸಿ ಈಗ ಕೇವಲ 200 ರಷ್ಟು ಮಾತ್ರ ಉಳಿದಿವೆ.,ಪಾವಗಡದಲ್ಲಿ ಒಂದು ಮಾತ್ರ ಉಳಿದಿದೆ ಎಂದು ವಿವರಿಸಿದರು.
ಆರ್ ಆರ್ ಟಿ 3 ನೇ ಕಲಂನಲ್ಲಿ ಭೂಮಿ ವಿಸ್ತೀರ್ಣ,9 ನೇ ಕಲಂನಲ್ಲಿ ಅನುಭವದಾರ,ಮಾಲೀಕರ ಹೆಸರು ಹಾಗೂ ವಿಸ್ತೀರ್ಣ ಹೊಂದಾಣಿಕೆ ಇರುತ್ತಿರಲಿಲ್ಲ ಅಂತಹ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜಿಲ್ಲೆಯಲ್ಲಿದ್ದವು ಅಂತಹ ಪ್ರಕರಣಗಳನ್ನು ಬಗೆಹರಿಸುವ ಕಾರ್ಯ ಭರದಿಂದ ಸಾಗಿದ್ದು ಈಗ ಅಂತಹ ಪ್ರಕರಣಗಳು 6 ಸಾವಿರಕ್ಕಿಳಿದಿದೆ,ಕಾಲ ಕಾಲಕ್ಕೆ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯ ನಡೆಯಲಿದೆ ಎಂದು ಪಾಟೀಲ್ ತಿಳಿಸಿದರು.
ಪಿಂಚಣಿಗೆ ಅರ್ಹರಿದ್ದಲ್ಲಿ 72 ಗಂಟೆಗಳಲ್ಲಿ ಮಂಜೂರು ಮಾಡಲಾಗುತ್ತಿದೆ,ಯೋಜನೆ ಆರಂಭವಾಗಿ ಮೂರ್ನಾಲ್ಕು ತಿಂಗಳಾಗಿದೆ,ಆಗಿನಿಂದ ಇದೂವರೆಗೆ 7000 ಗಳಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ ಎಂದ ಜಿಲ್ಲಾಧಿಕಾರಿಗಳು,ಸ್ಮಶಾನಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿರುವ 2500 ಕ್ಕೂ ಹೆಚ್ಚು ಗ್ರಾಮಗಳಿವೆ ಅದರಲ್ಲಿ ಎಲ್ಲಾ ಗ್ರಾಮಗಳಿಗೂ ಸ್ಮಶಾನಗಳನ್ನು ಒದಗಿಸುವ ಕೆಲಸವಾಗಿದೆ ಎಂದರು.
ಪಾವಗಡ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳಲ್ಲಿ 33 ಗ್ರಾಮ ಪಂಚಾಯಿತಿಗಳಿಗೆ ಎಫ್ ಡಬ್ಲ್ಯೂ ಎಂ ಸೈಟ್ (ಒಣ ಕಸ ಸಂಗ್ರಹಕ್ಕೆ ಜಾಗ) ನೀಡಲಾಗಿದೆ.ಸಾರ್ವಜನಿಕರು ಹಾಗೂ ಚುನಾಯಿತ ಪ್ರತಿನಿಧಿಗಳ ಸಹಕಾರದೊಂದಿಗೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.