ಗುಬ್ಬಿ: ಸ್ಥಳೀಯ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ರಸ್ತೆ ವ್ಯವಸ್ಥೆ ಇಲ್ಲ. ಮೊದಲು ಮೂಲ ಸವಲತ್ತು ಒದಗಿಸಿ ಎಂದು ತಾಲ್ಲೂಕಿನ ಕಸಬಾ ಹೋಬಳಿ ಬಿಸಲಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ನಡೆಯಿತು.
ವೇದಿಕೆ ಕಾರ್ಯಕ್ರಮ ನಂತರ ತಹಶೀಲ್ದಾರ್ ಬಿ.ಆರತಿ ಅವರನ್ನು ಸುತ್ತುವರಿದ ಸ್ಥಳೀಯ ಗ್ರಾಮಸ್ಥರು ನೀರು ಮತ್ತು ರಸ್ತೆ ಒದಗಿಸಲು ಒತ್ತಾಯಿಸಿ ನಮ್ಮ ಗ್ರಾಮದಲ್ಲಿ ಒಮ್ಮೆ ಸಂಚಾರ ಮಾಡಿ ಎಂದು ಅಧಿಕಾರಿಗಳನ್ನು ಆಹ್ವಾನಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ನಡೆಯುವ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೂಲಿ ಮಾಡುವ ರೈತರ ಕುಟುಂಬ ಈ ಅಕ್ರಮ ಮದ್ಯದಿಂದ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ಕಳಕಳ ವ್ಯಕ್ತಪಡಿಸಿದರು. ಈ ಸಂಬಂಧ ಉತ್ತರ ನೀಡಿದ ಅಬಕಾರಿ ನಿರೀಕ್ಷಕರಾದ ವನಜಾಕ್ಷಿ ಅಕ್ರಮ ತಡೆಗೆ ನಿರಂತರ ಕರ್ತವ್ಯ ಮಾಡುತ್ತಿದ್ದೇವೆ. ಅಕ್ರಮ ಕಂಡಲ್ಲಿ ದೂರು ನೀಡಿದ ತಕ್ಷಣ ಕ್ರಮ ವಹಿಸುವ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರೈತ ಸಂಘ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಸಮಸ್ಯೆಗಳ ಪಟ್ಟಿ ಹೇಳಿದರು. ಬೆಸ್ಕಾಂ ರೈತರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ಹಳೇ ಕಂಬ, ತಂತಿಗಳ ಬದಲಾವಣೆಗೆ ಆಗ್ರಹಿಸಿ ಕೃಷಿ ಚಟುವಟಿಕೆಗೆ ಬೆಸ್ಕಾಂ ಸಹಕಾರ ನೀಡುತ್ತಿಲ್ಲ ಎಂದು ದೂರಿದರು.
ವೇದಿಕೆಯ ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಬಿ.ಆರತಿ ಮಾತನಾಡಿ ಸಾರ್ವಜನಿಕರ ಕಷ್ಟ ಆಲಿಸಲು ತಾಲ್ಲೂಕು ಆಡಳಿತ ವರ್ಗವೇ ಜನರ ಮನೆ ಬಾಗಿಲಿಗೆ ಬರುವ ಈ ಕಾರ್ಯಕ್ರಮ ಸಮಸ್ಯೆಗಳನ್ನು ಸ್ಥಳದಲ್ಲೇ ನಿವಾರಿಸಲು ಸೂಕ್ತ ವೇದಿಕೆ ನಿರ್ಮಿಸಲಾಗಿದೆ. ಎಲ್ಲಾ ಇಲಾಖಾಧಿಕಾರಿಗಳ ನೇತೃತ್ವದಲ್ಲಿ ಕಚೇರಿಯೇ ತೆರೆದು ಅಗತ್ಯ ಸೇವೆ ನೀಡಲಾಗುತ್ತಿದೆ. ನಮ್ಮ ತಾಲ್ಲೂಕಿನಲ್ಲಿ ಇದು ನಾಲ್ಕನೇ ಕಾರ್ಯಕ್ರಮವಾಗಿದೆ. ಇಲ್ಲಿ ಬರುವ ದೂರು ಅರ್ಜಿಗಳಿಗೆ ಸೂಕ್ತ ಉತ್ತರ ನೀಡಲಾಗುತ್ತಿದೆ. ಸಮಸ್ಯೆಗಳಿಗೆ ಉತ್ತರ ನೀಡಲಾಗಿದೆ ಎಂದರು.
ತಾಪಂ ಇಓ ಶಿವಪ್ರಕಾಶ್ ಮಾತನಾಡಿ ತಾಲ್ಲೂಕಿನ ಎಲ್ಲಾ ಇಲಾಖೆಯ ಸಿಬ್ಬಂದಿಗಳು ಗ್ರಾಮದಲ್ಲಿ ಸಂಜೆವರೆಗೆ ವಾಸ್ತವ್ಯ ಹೂಡಿದ್ದಾರೆ. ಗ್ರಾಮಸ್ಥರ ಅಹವಾಲು ಅರ್ಜಿ ಸ್ವೀಕರಿಸಲು ಸಿದ್ಧರಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.
ನಂತರ ಗ್ರಾಮ ಪಂಚಾಯಿತಿ ಮೂಲಕ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುನೀತಾ, ಸದಸ್ಯರಾದ ಚಂದ್ರಶೇಖರ್, ಬೋರಯ್ಯ, ಗೀತಾ ನಂದೀಶ್, ಸಣ್ಣತಾಯಮ್ಮ, ಕೃಷ್ಣಮೂರ್ತಿ, ಮುಖಂಡ ಬಿ.ಎಸ್.ದಯಾನಂದ್, ತಾಲ್ಲೂಕು ವೈದ್ಯಾಧಿಕಾರಿ ಡಾ. ಬಿಂದುಮಾಧವ, ತೋಟಗಾರಿಕೆ ಸಹಾಯಕ ನಿರ್ದೇಶಕ ರಾಜಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ಮಹೇಶ್, ಸಮಾಜ ಕಲ್ಯಾಣಾಧಿಕಾರಿ ರಾಮಣ್ಣ, ವಲಯ ಅರಣ್ಯಾಧಿಕಾರಿ ದುಗ್ಗಪ್ಪ, ಕೃಷಿ ಅಧಿಕಾರಿ ಪ್ರಕಾಶ್, ಪಿಡಿಒ ಸಿದ್ದರಾಮಯ್ಯ ಇತರರು ಇದ್ದರು.