ಕನ್ನಡದಲ್ಲಿ ನಾಮಫಲಕ ಕಡ್ಡಾಯ ಇಲ್ಲದಿದ್ದರೆ ಪರವಾನಗಿ ರದ್ದು: ಜಿಲ್ಲಾಧಿಕಾರಿ

ತುಮಕೂರು : ಜಿಲ್ಲೆಯ ಎಲ್ಲಾ ಅಂಗಡಿ ಮುಂಗಟ್ಟುಗಳು, ಕಾರ್ಖಾನೆಗಳು, ಕಂಪನಿಗಳು ಅಕ್ಟೋಬರ್ ಅಂತ್ಯದೊಳಗಾಗಿ ಕನ್ನಡದಲ್ಲಿ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.ತಪ್ಪಿದಲ್ಲಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಸೂಚಿಸಿದರು.

ತಮ್ಮ ಕಚೇರಿಯ ನ್ಯಾಯಾಲಯದ ಸಭಾಂಗಣದಲ್ಲಿಂದು ಕನ್ನಡ ರಾಜ್ಯೋತ್ಸವ ಸಮಿತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಕಚೇರಿಗಳು, ಕಂಪನಿಗಳು, ಕಾರ್ಖಾನೆಗಳು, ಸೇರಿದಂತೆ ಎಲ್ಲೆಡೆ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಹಾಗೂ ಪಾಲಿಕೆ ಆಯುಕ್ತೆ ಆರ್ ರೇಣುಕಾ ಅವರಿಗೆ ಸಮನ್ವಯದಿಂದ ಕೆಲಸ ನಿರ್ವಹಿಸುವಂತೆ ತಿಳಿಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದಿಂದ ಸಡಗರದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು ಎಂದು ಹಾಜರಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅವರು ನಿರ್ದೇಶಿಸಿದರು.

ನವೆಂಬರ್ ೧ರಂದು ಬೆಳಿಗ್ಗೆ ೮ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಕನ್ನಡಾಂಬೆ ದೇವಿಯ ಪ್ರತಿಮೆಯನ್ನು ಅಲಂಕೃತ ಬೆಳ್ಳಿರಥದ ವಾಹನದಲ್ಲಿರಿಸಿ ಸಾಂಸ್ಕೃತಿಕ ಕಲಾ ತಂಡಗಳು, ಸ್ತಭ್ದಚಿತ್ರಗಳ ಮೆರವಣಿಗೆಯೊಂದಿಗೆ ಆಶೋಕ ರಸ್ತೆ, ಟೌನ್ ಹಾಲ್ ವೃತ್ತ, ಬಿ.ಹೆಚ್ ರಸ್ತೆ, ಭದ್ರಮ್ಮ ವೃತ್ತದ ಮೂಲಕ ಕಾಲೇಜು ಮೈದಾನದ ವೇದಿಕೆಗೆ ಕರೆತರಲಾಗುವುದು.ಇದರ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಮಹಾನಗರ ಪಾಲಿಕೆಯ ಅಧಿಕಾರಿ ಡಾ.ರಕ್ಷಿತ್ ಅವರಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಎಪಿಎಂಸಿ, ಕೆ ಎಸ್ ಆರ್ ಟಿ ಸಿ, ಶಿಕ್ಷಣ ಇಲಾಖೆ, ಪಶು ವೈದ್ಯಕೀಯ, ಬೆಸ್ಕಾಂ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಗಳು ಸರ್ಕಾರದ ಪ್ರಸ್ತುತ ಯೋಜನೆಗಳ/ ಸಾಧನೆಗಳ ಕುರಿತಂತೆ ಮಾಹಿತಿಯುಳ್ಳ ಸ್ತಭ್ದಚಿತ್ರಗಳನ್ನು ವಿಶೇಷವಾಗಿ ರೂಪಿಸಿ ಪ್ರದರ್ಶನ ಮಾಡಬೇಕು ಎಂದು ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶಿಸಿದರು.

ಕಾರ್ಯಕ್ರಮಕ್ಕೆ ಅಗತ್ಯವಾದ ವೇದಿಕೆ ಸಜ್ಜು, ಧ್ವಜಸ್ತಂಭದ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಕಚೇರಿ ಮುಂಭಾಗದಲ್ಲಿ ಹೂವಿನಿಂದ ಅಲಂಕರಿಸಿದ ಕಮಾನು, ವಿದ್ಯುತ್ ದೀಪಾಲಂಕಾರ, ಟೌನ್ ಹಾಲ್ ವೃತ್ತ, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ, ಭದ್ರಮ್ಮ ವೃತ್ತ, ಡೀಸಿ ಕಚೇರಿಯ ಮುಂಭಾಗದ ವೃತ್ತ ಮತ್ತು ಹೊರಪೇಟೆ ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಬೇಕು ಎಂದು ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ಸೂಚಿಸಿದರು.

ಕಾರ್ಯಕ್ರಮ ಆಯೋಜನೆ, ನಿರೂಪಣೆ, ನಾಡಗೀತೆ ಗಾಯನ ಕಾರ್ಯಕ್ರಮವನ್ನು ಏರ್ಪಡಿಸಲು ಶಿಕ್ಷಣ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ವಿ.ಅಜಯ್, ಸೋಮಪ್ಪ ಕಡಕೋಳ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!