ಗುಬ್ಬಿ: ತಾಲ್ಲೂಕಿನ ಕಲ್ಲೂರು ಕೆರೆ ಕೋಡಿಯಲ್ಲಿ ಕಾಲು ತೊಳೆಯಲು ಹೋದ ಇಬ್ಬರು ವ್ಯಕ್ತಿಗಳು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದು, ಶವ ಶೋಧ ಕಾರ್ಯವನ್ನು ಅಗ್ನಿಶಾಮಕ ದಳ ಹಾಗೂ ತಾಲ್ಲೂಕು ಆಡಳಿತ ಸತತ ಪ್ರಯತ್ನ ನಡೆಸಿದೆ. ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿದ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅಧಿಕಾರಿಗಳ ಜೊತೆ ಚರ್ಚಿಸಿ ಶವ ಪತ್ತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕಾರ್ಯಕ್ಕೆ ಎಲ್ಲಾ ಸಲಕರಣೆ ಬಳಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿ ಸರ್ಕಾರದ ಜೊತೆ ಚರ್ಚಿಸಿ ಅಧಿಕ ಮೊತ್ತದ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಶನಿವಾರ ಸಂಜೆ ವೇಳೆ ಕೋಡಿ ಬಳಿ ಕಾಲು ತೊಳೆಯಲು ಮುಂದಾದ ಹನುಮಂತರಾಜು (48) ಹಾಗೂ ನಟರಾಜು (30) ರಭಸಕ್ಕೆ ಕಾಲು ಜಾರಿ ನೀರಿನಲ್ಲಿ ಕೊಚ್ಚಿ ಹೋದರು. ನೀರಿನ ವೇಗಕ್ಕೆ ಕ್ಷಣಾರ್ಧದಲ್ಲಿ ಇಬ್ಬರು ಕಣ್ಮರೆಯಾದರು. ಕಲ್ಲೂರಿನ ನಿವಾಸಿಗಳಾದ ಈರ್ವರು ಕೂಲಿ ಕಾರ್ಮಿಕರು ಆಗಿದ್ದು, ಇಡೀ ಗ್ರಾಮವೇ ಕೋಡಿ ಬಳಿ ಹುಡುಕಾಟ ನಡೆಸಿದರೂ ಶವ ಪತ್ತೆಯಾಗಿಲ್ಲ. ನಂತರ ಸ್ಥಳಕ್ಕೆ ಧಾವಿಸಿದ ಅಗ್ನಶಾಮಕದಳ ನಿರಂತರವಾಗಿ ಶೋಧ ಕಾರ್ಯ ನಡೆಸಿದೆ. ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಬಿ.ಆರತಿ, ತಾಪಂ ಇಓ ಶಿವಪ್ರಕಾಶ್, ಸಿ.ಎಸ್.ಪುರ ಪೊಲೀಸರು ಶವ ಪತ್ತೆ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.

ನಂತರ ಸ್ಥಳಕ್ಕೆ ಆಗಮಿಸಿದ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಸ್ಥಳದಲ್ಲಿದ್ದ ಎಲ್ಲಾ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಿದರು. ಶವ ಪತ್ತೆಗೆ ಅಗತ್ಯ ಸಲಕರಣೆ ಬಳಸಲು ಅಗ್ನಶಾಮಕ ದಳಕ್ಕೆ ತಿಳಿಸಲಾಗಿದೆ. ಡ್ರೋನ್ ಕೆಮರಾ ಬಳಸಿ ಶವ ಪತ್ತೆ ನಡೆಸಲು ಸೂಚಿಸಿದ್ದು, ವಾರದಿಂದ ಬಿದ್ದ ಮಳೆಗೆ ನೀರು ಹೆಚ್ಚಾಗಿ ಹರಿದಿದೆ. ಕಲ್ಲೂರು ಕೆರೆ ಕೋಡಿ ಅತೀ ರಭಸದಲ್ಲಿ ಹರಿದಿದೆ. ಆಕಸ್ಮಿಕ ಈ ಘಟನೆ ಎಲ್ಲರಲ್ಲೂ ಬೇಸರ ತಂದಿದೆ ಎಂದರು.

ಕೋಡಿಯಿಂದ ಮುಂದೆ ಹರಿಯುವ ಹಳ್ಳ ಬಹಳ ಕಷ್ಟಕರವಾಗಿದೆ. ಹರಿಯುವ ನೀರಿನಲ್ಲಿ ಶವ ಶೋಧ ಸುಲಭದ ಮಾತಲ್ಲ. ಅಗ್ನಶಾಮಕ ದಳದ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು. ಈ ಜೊತೆಗೆ ತಾಲ್ಲೂಕಿನ ಎಲ್ಲಾ ಕೆರೆ ಕಟ್ಟೆಗಳ ಬಳಿ ನಿರ್ಬಂಧ ಹೇರಲಾಗಿದೆ. ಆದರೂ ಜನರು ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಕೆರೆಗಳ ಬಳಿ ಬ್ಯಾನರ್, ಬ್ಯಾರಿಗೇಟ್ ಅಳವಡಿಕೆ, ಕಾವಲುಗಾರರ ನೇಮಕ ಹೀಗೆ ಅನೇಕ ಕ್ರಮಕ್ಕೆ ಸೂಚಿಸಲಾಗಿದೆ ಎಂದ ಅವರು ತುರುವೇಕೆರೆ ತಾಲ್ಲೂಕಿನಲ್ಲಿ ಇದು ಮೂರನೇ ಪ್ರಕರಣ. ಮತ್ತೇ ಮರುಕಳಿಸದಂತೆ ಕ್ರಮ ವಹಿಸಿ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.