ಗುಬ್ಬಿ: ಕೈಕಾಲು ತೊಳೆಯಲು ಕಲ್ಲೂರು ಕೆರೆ ಕೋಡಿಗೆ ಹೋಗಿ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಇಬ್ಬರು ವ್ಯಕ್ತಿಗಳ ಶವಗಳು ಎರಡು ದಿನದ ಬಳಿಕ ತಾಲ್ಲೂಕಿನ ಕಲ್ಲೂರು ಸಮೀಪದ ಬಿಳಿನಂದಿ ಗ್ರಾಮದ ಬಳಿ ತೊರೆಯಲ್ಲಿ ಪತ್ತೆಯಾಗಿದೆ.
ಕಳೆದ ಶನಿವಾರ ಸಂಜೆ ಕೈಕಾಲು ತೊಳೆಯಲು ಹೋದ ನಟರಾಜು(30) ಹಾಗೂ ಹನುಮಂತರಾಜು(48) ಕಾಲು ಜಾರಿ ನೀರಿಗೆ ಬಿದ್ದು ನೀರಿನ ರಭಸಕ್ಕೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿ ಕಣ್ಮರೆಯಾದರು. ಸ್ಥಳೀಯರು ಕತ್ತಲಲ್ಲೇ ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಲಿಲ್ಲ. ನಂತರ ಅಗ್ನಶಾಮಕದಳದ ಉಪ ನಿರೀಕ್ಷಕ ಮಹಾಲಿಂಗಪ್ಪ ನೇತೃತ್ವದ ಸಿಬ್ಬಂದಿ ವರ್ಗ ಸತತ ಪ್ರಯತ್ನ ಪಟ್ಟು ಶವಗಳ ಶೋಧ ನಡೆಸಿದ್ದರು. ಕೆಮರಾ ಬಳಕೆ ಮಾಡಿದರು. ಎಲ್ಲಾ ರೀತಿಯ ಕಾರ್ಯಾಚರಣೆ ನಡೆದರೂ ಯಾವುದೇ ಸುಳಿವು ಸಿಗದೆ ಪ್ರಯತ್ನ ಮುಂದುವರೆಸಿದ್ದರು.
ಎರಡು ದಿನದ ಬಳಿಕ ಸೋಮವಾರ ಬೆಳಿಗ್ಗೆ ಸಮೀಪದ ಬಿಳಿನಂದಿ ತೊರೆ ಬಳಿ ನಟರಾಜು ಶವ ಪತ್ತೆಯಾಯಿತು. ಮತ್ತೇ ಹುಡುಕಾಟ ನಡೆದು ಮಂಗಳವಾರ ಬೆಳಿಗ್ಗೆ ಅದೇ ಸ್ಥಳದಲ್ಲೇ ಹನುಮಂತರಾಜು ಅವರ ಶವ ಕೂಡಾ ಪತ್ತೆಯಾಗಿದೆ. ನಂತರ ಸಿ.ಎಸ್.ಪುರ ಪೊಲೀಸರು ಶವ ಪರೀಕ್ಷೆ ನಡೆಸಿ ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು. ನೀರಿನ ರಭಸದ ನಡುವೆ ಅಗ್ನಶಾಮಕದಳದ ಸತತ ಎರಡು ದಿನದ ಪ್ರಯತ್ನ ಕೊನೆಗೊಂಡಿತು.