ಗುಬ್ಬಿ: ಮಣಿಕಂಠ ಕಲಾ ಸಂಘ ಹಾಗೂ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘದ ಸಹಯೋಗದಲ್ಲಿ ಆಯೋಜನೆಯಾದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುಸ್ವಾಮಿ ಜಿ.ಎಸ್.ರೇಣುಕಾ ಪ್ರಸಾದ್ ಅವರ ಧಾರ್ಮಿಕ ಸೇವೆ ಗುರುತಿಸಿ ಜನಸೇವಾ ಶಬರೀಶ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು.
ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ತೆವಡೇಹಳ್ಳಿ ಗದ್ದುಗೆಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಹಾಗೂ ಬಿ.ಕೋಡಿಹಳ್ಳಿ ಮಠದ ಶ್ರೀ ಬಸವ ಭೃಂಗೇಶ್ವರ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ತೆವಡೇಹಳ್ಳಿ ಗದ್ದುಗೆಮಠದ ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮೀಜಿ ಮಾತನಾಡಿ ಧಾರ್ಮಿಕಾಚರಣೆ ನಮ್ಮ ಶಾಂತಿ ಸಮಾಜ ನಿರ್ಮಾಣಕ್ಕೆ ಕಾರಣ. ಪ್ರತಿ ವರ್ಷ ಭಕ್ತಿಪೂರ್ವಕವಾಗಿ ಅಯ್ಯಪ್ಪಸ್ವಾಮಿ ಮಾಲೆ ಹಾಕಿ ಸಂಪ್ರದಾಯ ಬದ್ದವಾಗಿ ಆಚರಣೆ ನಡೆದಿದೆ. ಈ ಜೊತೆಗೆ ಜಾತ್ಯತೀತ ನಿಲುವು ಇಲ್ಲಿ ಕಂಡಿದೆ. ಬಸವಣ್ಣನವರ ಕನಸು ಜಾತಿ ಮೀರಿದ ಧಾರ್ಮಿಕ ಆಚರಣೆ ಅಯ್ಯಪ್ಪಸ್ವಾಮಿ ಗುಡಿಗಳಲ್ಲಿ ನಡೆದಿರುವುದು ಸಂತಸ ವಿಚಾರ. ಕಳೆದ 33 ವರ್ಷದಿಂದ ಗುರುಸ್ವಾಮಿಗಳಾಗಿ ಮಾಲೆ ಧರಿಸುವ ಭಕ್ತರಿಗೆ ದೀಕ್ಷೆ ನೀಡಿ ನಿಯಮ ನಿಷ್ಠೆ ಕಲಿಸಿ, ತಾವು ಸಹ 51 ಬಾರಿ ಶಬರಿಗಿರಿ ಯಾತ್ರೆ ಮಾಡಿರುವುದು ಸಾರ್ಥಕ ಬದುಕು. ಅವರ ಈ ಸೇವೆ ಗುರುತಿಸಿ ಸಾರ್ವಜನಿಕವಾಗಿ ಜನಸೇವಾ ಶಬರೀಶ ಪ್ರಶಸ್ತಿ ನೀಡಿದ್ದು ಅರ್ಥಪೂರ್ಣವಾಗಿದೆ ಎಂದರು.
ಬಿ.ಕೋಡಿಹಳ್ಳಿ ಮಠದ ಶ್ರೀ ಬಸವ ಭೃಂಗೇಶ್ವರ ಸ್ವಾಮೀಜಿ ಮಾತನಾಡಿ ಕಾಯಕದಲ್ಲಿ ಶಿವನನ್ನು ಕಾಣುವ ಶರಣರ ತತ್ವದಂತೆ ರೇಣುಕಾಪ್ರಸಾದ್ ಅವರು ತಮ್ಮ ನಿಸ್ವಾರ್ಥ ಸೇವೆ ಮಾಡಿದ್ದಾರೆ. ಅವರ ಈ ಕಾಯಕ ಮುಂದುವರೆದು ಶ್ರೀ ಅಯ್ಯಪ್ಪಸ್ವಾಮಿ ದೇಗುಲ ನಿರ್ಮಾಣಕ್ಕೂ ಮುಂದಾಗಿದ್ದು ಎಲ್ಲಾ ಭಕ್ತರ ಜೊತೆಗೂಡಿ ಧಾರ್ಮಿಕ ಕೆಲಸ ನಿರಂತರ ನಡೆಸಲಿ ಎಂದು ಹಾರೈಸಿದರು.
ಪ್ರಶಸ್ತಿ ಪುರಸ್ಕೃತ ಜಿ.ಎಸ್. ರೇಣುಕಾಪ್ರಸಾದ್ ಮಾತನಾಡಿ ಯಾವುದೇ ಪ್ರಶಸ್ತಿಗಾಗಿ ಸೇವೆ ಮಾಡದೆ ಜನಪರ ಕೆಲಸ ಜೊತೆಗೆ ಧಾರ್ಮಿಕ ಸೇವೆ ನಡೆಸಿದ್ದೇನೆ. ಈ ಜೊತೆಗೆ ಪಪಂ ಸದಸ್ಯನಾಗಿ ಸಹ ಜನರ ಸಮಸ್ಯೆ ಆಲಿಸುತ್ತಿದ್ದೇನೆ. ಈ ಪ್ರಶಸ್ತಿ ಗೌರವ ನನಗೆ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ಧಾರ್ಮಿಕ ಸೇವೆ ನಿರಂತರ ನಡೆಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಸತೀಶ್ ಶಿವಣ್ಣ, ಮಣಿಕಂಠ ಕಲಾ ಸಂಘದ ಅಧ್ಯಕ್ಷ ರಾಜಣ್ಣ, ಸದಸ್ಯರಾದ ಜಿ.ಎಚ್.ಜಗನ್ನಾಥ್, ಪ್ರಹ್ಲಾದ್, ಬ್ಯಾಟರಾಯಪ್ಪ, ಜಿ.ಡಿ.ಮೋಹನ್, ಜಗದೀಶ್, ಮಂಜುನಾಥ್, ದಿನಕರ್, ಮುರಳಿ, ನಾಗರಾಜ್, ಯಶ್ ಅಭಿಮಾನಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಶಶಿ, ಪ್ರಧಾನ ಕಾರ್ಯದರ್ಶಿ ಮಣಿಕಂಠ ಇತರರು ಇದ್ದರು.