ಗುಬ್ಬಿ: ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದ ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಶಿಥಿಲಾವಸ್ಥೆ ಕಾಣುತ್ತಿರುವ ಕಟ್ಟಡ ದುರಸ್ಥಿ ಹಾಗೂ ಹೊಸ ಕಟ್ಟಡ ನಿರ್ಮಾಣದ ಭರವಸೆ ನೀಡಿದರು.
ಸಂಜೆ ವೇಳೆ ಈ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಅಲ್ಲಿನ ಹೊರ ರೋಗಿಗಳ ಜೊತೆ ಚರ್ಚಿಸಿದರು. ಈಚೆಗೆ ಬಿದ್ದ ಮಳೆಯಿಂದ ಕಟ್ಟಡ ಸಂಪೂರ್ಣ ಹಾಳಾಗುತ್ತಿದ್ದ ಬಗ್ಗೆ ಅವಲೋಕಿಸಿ ಕೂಡಲೇ ಡಿ ಎಚ್ ಓ ಜೊತೆ ದೂರವಾಣಿ ಮೂಲಕ ಚರ್ಚಿಸಿದರು. ನಂತರ ಆರೋಗ್ಯ ಸಚಿವರ ಕಚೇರಿಯ ವಿಶೇಷಾಧಿಕಾರಿ ಜೊತೆ ಮಾತನಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಒತ್ತಡ ಹಾಕಿದರು.
45 ವರ್ಷದ ಹಳೇ ಕಟ್ಟಡ ಇದಾಗಿದೆ. ಮಳೆ ನೀರು ಕಟ್ಟಡದಲ್ಲಿ ಕೆರೆಯಂತೆ ಶೇಖರಣೆ ಆಗಿದೆ. 8 ಕೋಟಿ ಮಂಜೂರು ಮಾಡಿದ್ದಾರೆ. ಆದರೆ ಹೊಸ ಕಟ್ಟಡ ನಿರ್ಮಾಣಕ್ಕೆ ಸಚಿವರನ್ನು ಒತ್ತಾಯಿಸಿ ಇನ್ನೂ ಮೂರು ಕೋಟಿ ಹೆಚ್ಚುವರಿ ಹಣ ಬಿಡುಗಡೆ ಭರವಸೆ ನೀಡಿದ್ದಾರೆ. 5 ಸಾವಿರ ಜನಸಂಖ್ಯೆ ಇರುವ ಈ ಗ್ರಾಮ ಪಂಚಾಯತಿಗೆ ಅತ್ಯವಶ್ಯ ಆಸ್ಪತ್ರೆ ಆಧುನಿಕತೆಗೆ ಒಳಪಡಬೇಕು. ಈ ಕಾರ್ಯ ತುರ್ತು ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ಮುಖಂಡರಾದ ಸುರೇಶ್, ಭಾಗ್ಯಮ್ಮ, ಪಿಡಿಒ ಗಂಗಮಹದೇವಯ್ಯ ಇತರರು ಇದ್ದರು.