ಗುಬ್ಬಿ: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಮ್ಮ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಆಯ್ಕೆಗೆ ಗುಬ್ಬಿ ಕಾಂಗ್ರೆಸ್ ಘಟಕ ಸಂಭ್ರಮಾಚಣೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಬಸ್ ನಿಲ್ದಾಣದ ಬಳಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪರ ಘೋಷಣೆ ಕೂಗುತ್ತಾ ಕಾಂಗ್ರೆಸ್ ಬಾವುಟ ಹಾರಿಸಿ ಜೊತೆಗೆ ಪಟಾಕಿ ಸಿಡಿಸಿ ಸಿಹಿ ಹಂಚಿ ಖುಷಿ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಗುಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್.ನರಸಿಂಹಯ್ಯ ಮಾತನಾಡಿ ಕುಟುಂಬ ರಾಜಕಾರಣ ಎಂಬ ಸಲ್ಲದ ಹೇಳಿಕೆಗಳಿಗೆ ಇಂದು ಕಾಂಗ್ರೆಸ್ ತಕ್ಕ ಉತ್ತರ ನೀಡಿದೆ. ಖರ್ಗೆ ಅವರ ಪಕ್ಷ ನಿಷ್ಠೆ ಹಾಗೂ ಪ್ರಾಮಾಣಿಕತೆ ಇಂದು ಉತ್ತಮ ಸ್ಥಾನಕ್ಕೆ ತಂದಿದೆ. ಬಡ ಕಾರ್ಮಿಕ ಕುಟುಂಬದ ಖರ್ಗೆ ಅವರ ನಿರಂತರ ಹೋರಾಟದ ಫಲ ನಮ್ಮ ರಾಜ್ಯಕ್ಕೆ ತಂದ ಹೆಮ್ಮೆಯಾಗಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಮತ್ತಷ್ಟು ಬಲವರ್ಧನೆ ಆಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ಮಾತನಾಡಿ ಖರ್ಗೆ ಅವರ ಪ್ರಾಮಾಣಿಕತೆಗೆ ಸಂದ ಗೌರವವಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಂಡು ಕಾಂಗ್ರೆಸ್ ಬೆಳವಣಿಗೆಗೆ ಸಹಕಾರಿಯಾಗಿದ್ದು, ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಇನ್ನು ಮುಂದೆ ಬಲಿಷ್ಠಗೊಳ್ಳಲಿದೆ. ನಮ್ಮ ರಾಜ್ಯದಲ್ಲಿ ಬಹುತೇಕ ಕಾಂಗ್ರೆಸ್ ಆಡಳಿತ ಬರುವ ಮುನ್ಸೂಚನೆಗೆ ಈ ಅಧ್ಯಕ್ಷ ಗಾದಿ ಕನ್ನಡಿಯಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ಕಾಂಗ್ರೆಸ್ ಪಕ್ಷ ಜಾತಿ ಮೀರಿ ನಡೆಯಲಿದೆ ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮತ್ತಷ್ಟು ಅಹಿಂದ ಸಂಘಟನೆ ಬಲಗೊಳ್ಳಲಿದೆ. ಖರ್ಗೆ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಮರಳಿ ಕಾಂಗ್ರೆಸ್ ಆಡಳಿತಕ್ಕೆ ಬರಲಿದೆ ಎಂದರು.
ಮುಖಂಡರಾದ ಎಂ.ವಿ.ಶ್ರೀನಿವಾಸ್, ಸಲೀಂಪಾಷ, ಜಿ.ವಿ.ಮಂಜುನಾಥ್, ಜಿ.ಎಂ.ಶಿವಾನಂದ್, ಜಿ.ಎಸ್.ಮಂಜುನಾಥ್, ರಾಜಣ್ಣ, ಜಿ.ಎಲ್.ರಂಗನಾಥ್, ಸಿದ್ದೇಶ್, ಹೇಮಂತ್, ಸೌಭಾಗ್ಯಮ್ಮ, ರೂಪಾ ಇತರರು ಇದ್ದರು.