ಗುಬ್ಬಿ: ಅಡಕೆ ಆಮದು ಬಗ್ಗೆ ಸಲ್ಲದ ವದಂತಿಗೆ ಬ್ರೇಕ್ ಬಿದ್ದಿದೆ. ಸರ್ಕಾರ ಅಡಕೆ ಖರೀದಿ ಸ್ಥಳೀಯವಾಗಿ ಅಷ್ಟೇ ನಡೆಯಲು ಸಮ್ಮತಿ ಸಿಕ್ಕಿದೆ. ಸ್ಥಳೀಯ ರೈತರು ನಿರಾಂತಕವಾಗಿ ಇರಬಹುದು ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಕ್ಷೇತ್ರದ ರೈತರಿಗೆ ತಿಳಿಸಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದ ಕುಣಾಘಟ್ಟ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿ ಮತ್ತು ಸಿಸಿ ರಸ್ತೆಗಳ ವಿವಿಧ ಗ್ರಾಮದ ಒಟ್ಟು 5 ಕೋಟಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಬಾರಿ ಮಳೆಗೆ ಈಗಾಗಲೇ ರೈತರ ಬೆಳೆ ಹಾನಿ ಆಗಿದೆ. ಕಂದಾಯ ಸಚಿವರ ಬಳಿ ಈ ಬಗ್ಗೆ ಮಾತನಾಡಲಾಗಿದೆ. ಕಿಸಾನ್ ಯೋಜನೆಯ ಕೇಂದ್ರದ ಹಣದ ಜೊತೆ ನಮ್ಮ ಸರ್ಕಾರ ಬೆಳೆ ಪರಿಹಾರ ಸಹ ನೀಡಲಿದೆ. ಜೊತೆಗೆ ಹಾಳಾದ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಅನುದಾನ ನೀಡಲಿದೆ ಎಂದರು.
ತುರುವೇಕೆರೆ ಕ್ಷೇತ್ರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈಗಾಗಲೇ ರೈತರ ಜಾನುವಾರುಗಳ ಮೇಲೆ ಅಟ್ಯಾಕ್ ಮಾಡಲಿದೆ. ಕುಣಾಘಟ್ಟ ಗೊಲ್ಲರಹಟ್ಟಿ ಗ್ರಾಮದಲ್ಲಿ ಚಿರತೆ ದಾಳಿ ಮಾಡಿ ಆರು ಮೇಕೆಗಳ ಮೇಲೆರಗಿ ಮೂರು ಮೇಕೆಗಳು ಸ್ಥಳದಲ್ಲೇ ಮೃತಪಟ್ಟಿವೆ. ಎರಡು ಮೇಕೆಗಳನ್ನು ಹೊತ್ತೊಯ್ದು ಆತಂಕ ಸೃಷ್ಟಿಸಿದೆ. ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಚಿರತೆ ಸೆರೆಗೆ ಬೋನ್ ಅಳವಡಿಸಲು ಸೂಚಿಸಲಾಗಿದೆ. ಅರಣ್ಯ ಸಚಿವರ ಜೊತೆ ಮಾತನಾಡಿ ಮೃತ ಮೇಕೆಗೆ ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ ನೀಡಿ, ಚಿರತೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಮಳೆಯ ಕಾರಣ ಡಾಂಬರ್ ರಸ್ತೆಗಳ ಕೆಲಸಕ್ಕೆ ವಿಳಂಬವಾಗಿದೆ. ಗುಣಮಟ್ಟದ ರಸ್ತೆಗೆ ಆದ್ಯತೆ ನೀಡಿದ್ದು ನಿಟ್ಟೂರು ಟಿಬಿ ಕ್ರಾಸ್ ರಸ್ತೆ ಉತ್ತಮ ನಿದರ್ಶನವಾಗಿದೆ. ಈಗಾಗಲೇ ಸಿಸಿ ರಸ್ತೆಗಳು ಬಹತೇಕ ಗ್ರಾಮದಲ್ಲಿ ನಿರ್ಮಾಣವಾಗಿದೆ. ಎಲ್ಲಾ ಗೊಲ್ಲರಹಟ್ಟಿಯಲ್ಲಿ ಸಿಸಿ ರಸ್ತೆ ಅಭಿವೃದ್ದಿಯಾಗಿದೆ. ಬಾಕಿ ಇರುವ ಬಸವಣ್ಣನಗುಡ್ಡ ಬಾರೆ ರಸ್ತೆ, ಕಲ್ಲೂರು ಕ್ರಾಸ್ ನಿಂದ ಬಾಣಸಂದ್ರ ತಲುಪುವ 25 ಕೋಟಿ ರೂಗಳ ರಸ್ತೆ ಶೀಘ್ರದಲ್ಲಿ ಪೂಜೆ ಆಗಲಿದೆ ಎಂದ ಅವರು ಶಾಸಕನಾಗುವ ಸಮಯದಲ್ಲಿ ಕೊಟ್ಟ ಮಾತಿನಂತೆ ಹಳ್ಳಿಗಳಲ್ಲಿ ಕೆಲಸ ಮಾಡಿದ್ದೇನೆ. ಇನ್ನೂ ಕೆಲಸ ಆಗಲಿದೆ. ಮುಂದಿನ ಚುನಾವಣೆಯಲ್ಲಿ ಮತ್ತೇ ಕೈ ಹಿಡಿಯುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ ಅವರು ಯಾರೇ ಪ್ರತಿಸ್ಪರ್ಧಿ ಬಂದರೂ ನಾನು ನನ್ನ ಚುನಾವಣೆ ನನ್ನ ಮತದಾರರು, ಕಾರ್ಯಕರ್ತರನ್ನು ನಂಬಿ ನಡೆಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬಾನಿಹಟ್ಟಿ ಗ್ರಾಮದಲ್ಲಿ ಬಣವೆ ಸುಟ್ಟು ಹತಾಶರಾದ ಸಂತ್ರಸ್ತ ಕುಟುಂಬಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ಹಣ ನೀಡಿದರು. ಈ ವೇಳೆ ಗ್ರಾಪಂ ಅಧ್ಯಕ್ಷ ನಾಗರಾಜು, ಸದಸ್ಯ ಇರ್ಫಾನ್, ವಸಂತ್, ನಾಗಣ್ಣ, ಚಂದ್ರಣ್ಣ, ಗುತ್ತಿಗೆದಾರರಾದ ಚನ್ನಿಗಪ್ಪ, ಕೆ.ಆರ್.ಯೋಗೀಶ್, ಜಗ್ಗನಹಳ್ಳಿ ಬಾಬು, ಕುಮಾರ್, ನರಸೇಗೌಡ, ಕೃಷ್ಣಪ್ಪ, ಮೋಹನ್ ಕುಮಾರ್, ಸುರೇಶ್, ಪಾಂಡುರಂಗ ಇತರರು ಇದ್ದರು.