ಗುಬ್ಬಿ: ಗ್ರಾಮೀಣ ಭಾಗದಲ್ಲಿ ಎಲೆ ಮರೆಯ ಕಾಯಿಗಳಂತೆ ಇರುವ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಸರ್ಕಾರ ಗ್ರಾಮ ಪಂಚಾಯತಿ ಮೂಲಕ ಕ್ರೀಡಾಕೂಟ ಆಯೋಜನೆ ಮಾಡಿ ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡೆ ಆಯೋಜನೆ ಮಾಡುತ್ತಿರುವುದು ಸರ್ಕಾರದ ಮೆಚ್ಚುವಂತಹ ಕೆಲಸ ಎಂದು ಹಿಂಡಿಸ್ಗೆರೆ ಗ್ರಾಪಂ ಅಧ್ಯಕ್ಷ ಕೆ.ಎಚ್.ಲೋಕೇಶ್ ತಿಳಿಸಿದರು.
ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ಹಿಂಡಿಸ್ಗೆರೆ ಗ್ರಾಮದ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಮಟ್ಟದ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ರೈತರ ಮಕ್ಕಳು ಸದೃಢತೆಯಲ್ಲಿರುತ್ತಾರೆ. ಅವರಿಗೆ ಸೂಕ್ತ ತರಬೇತಿ ನೀಡಿದ್ದಲ್ಲಿ ಉತ್ತಮ ಕ್ರೀಡಾಪಟುಗಳು ಉತ್ಪತ್ತಿ ಆಗಲಿದೆ ಎಂದರು.
14 ವರ್ಷ ಮೇಲ್ಪಟ್ಟವರು ಆಡುವ ಈ ಕ್ರೀಡಾಕೂಟ ಅಪ್ಪಟ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಲಿದೆ. ಗ್ರಾಮೀಣ ಸೊಗಡಿನ ಆಟಗಳನ್ನು ಮೈಗೂಡಿಸಿಕೊಂಡು ಯಾವುದೇ ತರಬೇತಿ ಇಲ್ಲದೆ ಆಡುವ ಅವರ ಕಲೆಗೆ ಸೂಕ್ತ ತರಬೇತಿ ನೀಡಿದ್ದಲ್ಲಿ ದೇಶದ ಉತ್ತಮ ಕ್ರೀಡಾಪಟುಗಳಾಗಿ ಮಾರ್ಪಾಡು ಆಗಲಿದ್ದಾರೆ ಎಂದ ಅವರು ಸರ್ಕಾರ ನಡೆಸುವ ಈ ಕ್ರೀಡಾಕೂಟ ನಿರಂತರ ನಡೆಸಬೇಕು. ಇದು ಮೇಲ್ಪಂಕ್ತಿಗೆ ತಂದಲ್ಲಿ ಮತ್ತಷ್ಟು ಪ್ರತಿಭೆಗಳ ಆವಿಷ್ಕಾರ ಆಗಲಿದೆ. ಜೊತೆಗೆ ಗ್ರಾಮೀಣ ಭಾಗದಲ್ಲಿ ಕ್ರೀಡಾ ಶಾಲೆಗಳು, ಹಾಸ್ಟೆಲ್ ಗಳು ತೆರೆಯುವುದು ಸಹ ಸೂಕ್ತ ಎಂದರು.
ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ರೀದೇವಿ ಬೀ ಬಳ್ಳುಳ್ಳಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕ್ರೀಡಾಕೂಟಕ್ಕೆ ಸೂಕ್ತ ಮೈದಾನ ಇರುವುದಿಲ್ಲ. ಶಾಲೆಗಳ ಮೈದಾನ ಬಳಸಿಕೊಂಡು ಈ ಕ್ರೀಡೆ ನಡೆಸಲಾಗಿದೆ. ಹಳ್ಳಿಗಾಡಿನ ಪ್ರತಿಭೆಗೆ ತಕ್ಕಂತೆ ಗ್ರಾಮೀಣ ಆಟ ಗಳಾದ ಕಬಡ್ಡಿ ಹಾಗೂ ಖೋಖೋ ಕ್ರೀಡೆ ಮಾತ್ರ ಆಯೋಜಿಸಲಾಗಿದೆ. ಹಲವು ತಂಡಗಳು ಇಲ್ಲಿ ಭಾಗವಹಿಸಿದೆ. ಮುಂದಿನ ತಾಲ್ಲೂಕು ಮಟ್ಟಕ್ಕೆ ತೆರಳಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಬಡ್ಡಿ ಆಟವನ್ನು ಆಡುವ ಮೂಲಕ ಅಧ್ಯಕ್ಷ ಕೆ.ಎಚ್.ಲೋಕೇಶ್ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ಬಿ.ಟಿ.ಭಾರತಿ, ಸದಸ್ಯರಾದ ಗುರುಪ್ರಕಾಶ್, ಕೆಂಪಣ್ಣ, ನಾಗರಾಜು, ಗಂಗಾಧರ್, ಶ್ವೇತಾ, ಮಮತಾ, ಪ್ರಕಾಶ್, ಅನ್ನುಪೂರ್ಣ, ಸೀತಾರಾಂ ಸಿಂಗ್, ನಯಾಜ್ ಅಹಮದ್, ಜಯರಾಮ್, ಪ್ರೇಮಾ, ದೈಹಿಕ ಶಿಕ್ಷಕರಾದ ಜಯಕುಮಾರ್, ಸಂಪತ್, ಜ್ಞಾನ ಜ್ಯೋತಿ, ಸುಜಾತಾ, ರಾಮಾಂಜನೇಯ ಇತರರು ಇದ್ದರು.