ಸಮಾಜದ ಹಿತ ಕಾಯುವ ಪೊಲೀಸರ ತನಿಖೆ ಕಾನೂನಿನ ಚೌಕಟ್ಟಿನಲ್ಲಿರಲಿ

ತುಮಕೂರು: ಸದಾ ಸಮಾಜದ ಹಿತ ಕಾಯುವ ಪೊಲೀಸರ ತನಿಖೆ ಕಾನೂನಿನ ಚೌಕಟ್ಟಿನಲ್ಲಿರಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾ ಕೆ.ಜಿ. ಇಂದಿಲ್ಲಿ ಕಿವಿಮಾತು ಹೇಳಿದರು.

ಆರಕ್ಷಕರು ತಮ್ಮ ಜೀವವನ್ನೇ ಪಣಕ್ಕಿಟ್ಟು ಹಲವು ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುತ್ತೀರಾ, ಆದರೆ ಕೆಲವು ತನಿಖೆಗಳು ಕಾನೂನಿನ ಚೌಕಟ್ಟಿನಲ್ಲಿರುವುದಿಲ್ಲ. ಆದರೂ ಸುಮ್ಮನೆ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತೀರಾ. ಆದರೆ ಇದರಿಂದ ಏನು ಪ್ರಯೋಜನವಾಗುವುದಿಲ್ಲ. ಹಾಗಾಗಿ ತನಿಖೆ ಕಾನೂನಿನ ಚೌಕಟ್ಟಿನಲ್ಲಿ ಇರಲಿ ಎಂದು ಸಲಹೆ ಮಾಡಿದರು.

ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕದ ಪುತ್ಥಳಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು.

ಪೊಲೀಸರು ಕಷ್ಟಪಟ್ಟು ಆರೋಪಿಗಳು ಪತ್ತೆಹಚ್ಚುವುದು, ಅಕ್ರಮ ಚಟುವಟಿಕೆಗಳ ಮೇಲೆ ದಾಳಿ ಮಾಡುವ ಕೆಲಸ ಮಾಡುತ್ತೀರಾ. ಇದಾದ ನಂತರ ಎನ್‌ಡಿಪಿಎಸ್ ಕಾಯ್ದೆಯಡಿ ಯಾವ ರೀತಿಯ ತನಿಖೆ ಮಾಡಬೇಕೋ ಆ ರೀತಿಯ ತನಿಖೆಯಾಗಿರುವುದಿಲ್ಲ. ಹಾಗಾಗಿ ಇದನ್ನು ಅರ್ಥೈಸಿಕೊಂಡು ಅಪರಾಧ ಪ್ರಕರಣಗಳ ತನಿಖೆ ಕಾನೂನಿನ ಚೌಕಟ್ಟಿನಲ್ಲಿರುವಂತೆ ನೋಡಿಕೊಳ್ಳಿ ಎಂದರು. ಹುತಾತ್ಮ ಪೊಲೀಸರಿಗೆ ಅಭಿನಂದನೆ ಸಲ್ಲಿಸಬೇಕಾದರೆ ಸಾಕಷ್ಟು ದುಃಖ, ಸಂಕಟ ಆಗುತ್ತದೆ. ಇದು ಅತ್ಯಂತ ಸಂಕಟಕರವಾದ ಸಂದರ್ಭ ಎಂದ ಅವರು, ಆರಕ್ಷಕರು ದೇಶ ಮತ್ತು ನಮ್ಮೆಲ್ಲರನ್ನು ರಕ್ಷಣೆ ಮಾಡುತ್ತಿರುವುದರಿಂದ ನಾವೆಲ್ಲರೂ ಅತ್ಯಂತ ಸುಖಮಯವಾದ ಜೀವನ ನಡೆಸಲು ಸಾಧ್ಯವಾಗಿದೆ ಎಂದರು.

ನಮ್ಮ ದೇಶಕ್ಕಾಗಿ ಯಾರು ಪ್ರಾಣ ಅರ್ಪಿಸಿದ್ದಾರೆ ಅವರೆಲ್ಲರಿಗೂ ಅಂತಿಮ ನಮನ ಸಲ್ಲಿಸೋಣ. ಪೊಲೀಸರು ನಮ್ಮ ದೇಶದ ಹೀರೋಗಳು ಎಂಬುದನ್ನು ಯಾರು ಮರೆಯುವಂತಿಲ್ಲ ಎಂದು ಅವರು ತಿಳಿಸಿದರು.

ಸಮಾಜದಲ್ಲಿ ಆರಕ್ಷಕರಿಂದಲೇ ಎಲ್ಲರ ಜನಜೀವನ ಸುಗಮವಾಗಿ ನಡೆಯುತ್ತಿದೆ. ಅಹಿತಕರ ಘಟನೆಗಳು ನಡೆದರೆ ಪ್ರತಿಯೊಬ್ಬರೂ ಕರೆ ಮಾಡುವುದು ಪೊಲೀಸರಿಗೆ. ಅಷ್ಟರ ಮಟ್ಟಿಗೆ ಎಲ್ಲರಿಗೂ ನಂಬಿಕೆ, ವಿಶ್ವಾಸ ಪೊಲೀಸ್ ಇಲಾಖೆ ಮೇಲಿದೆ. ಈ ನಂಬಿಕೆ ವಿಶ್ವಾಸವನ್ನು ಹೀಗೆಯೇ ಉಳಿಸಿಕೊಂಡು ಹೋಗಬೇಕಾದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್‌ವಾಡ್, ಪ್ರತಿ ವರ್ಷದಂತೆ ಈ ವರ್ಷವೂ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ನಮ್ಮ ದೇಶದ ಉತ್ತರದ ಗಡಿ ಭಾಗವು ವರ್ಷವಿಡೀ ಹಿಮದಿಂದ ಆವೃತವಾಗಿರುವ ದುರ್ಗಮ ಪ್ರದೇಶವಾಗಿದೆ. ಇಂತಹ ಸಂದರ್ಭದಲ್ಲಿ 1959 ರ ಅ. 21 ರಂದು ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕರಣ್‌ಸಿಂಗ್ ಎಂಬ ಡಿವೈಎಸ್ಪಿ ರವರ ನಾಯಕತ್ವದಲ್ಲಿ ಸಿಆರ್‌ಪಿ ತಂಡದವರು ನಮ್ಮ ದೇಶದ ಗಡಿ ಭಾಗದ ಲಡಾಕ್ ಎಂಬಲ್ಲಿ ಕಾವಲು ಕಾಯುತ್ತಿರುವಾಗ ಚೀನಾ ದೇಶದ ಅಸಂಖ್ಯಾತ ಸೈನಿಕರು ನಮ್ಮ ದೇಶದ ಗಡಿ ಭಾಗದಲ್ಲಿ ಒಳನುಗ್ಗಿದರು. ಅಲ್ಲಿದ್ದ ನಮ್ಮ ಸೈನಿಕರು ದೇಶದ ರಕ್ಷಣೆಗಾಗಿ ಕೊನೆಯ ಹನಿ ರಕ್ತ ಇರುವವರೆಗೂ ಅಪ್ರತಿಮವಾಗಿ ಹೋರಾಡಿ ವೀರ ಮರಣ ಹೊಂದಿದರು ಎಂದು ಸ್ಮರಿಸಿದರು.

ಅದೇ ರೀತಿಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಾ ಸಾವನ್ನಪ್ಪುತ್ತಿರುವ ವೀರ ಯೋಧರ ನೆನಪಿಗೋಸ್ಕರ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ನಮ್ಮ ಇಲಾಖೆ ವತಿಯಿಂದ ಪ್ರತಿ ವರ್ಷ ಅ. 21 ರಂದು ಆಚರಿಸುತ್ತಾ ಬಂದಿದ್ದೇವೆ ಎಂದರು.

ಈ ಬಾರಿ ಕರ್ನಾಟಕದಲ್ಲಿ 11ಮಂದಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ ಎಂದು ಸ್ಮರಿಸಿದರು.

ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಪ್ರಾಣ ತೆತ್ತಿರುವ 264ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗದವರ ಹೆಸರು ಅವರು ಪಠಿಸಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ತಿಪಟೂರು ಉಪವಿಭಾಗದ ಪ್ರೊಭೆಷನರಿ ಅಡಿಷನಲ್ ಎಸ್ಪಿ ಸಿದ್ದಾರ್ಥ ಗೋಯಲ್, ಹೋಂಗಾರ್ಡ್ ಕಮಾಂಡೆಂಟ್ ಪಾತಣ್ಣ, ನಿವೃತ್ತ ಡಿವೈಎಸ್ಪಿ ಜಗದೀಶ್, ಕೆಎಸ್‌ಆರ್‌ಪಿ ಎಸ್ಪಿ ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!