ಓಡಿ ಹೋಗುವ ಜಾಯಮಾನ ನನ್ನದಲ್ಲ. ತಪ್ಪಾಗಿ ಬಿಂಬಿಸಿದ ಮಾಧ್ಯಮ : ಶಾಸಕ ಎಸ್.ಆರ್.ಶ್ರೀನಿವಾಸ್

ಗುಬ್ಬಿ: ಕಷ್ಟಗಳ ಆಲಿಸಲು ಬೈಕ್ ನಲ್ಲಿ ಗ್ರಾಮದೊಳಗೆ ತೆರಳಿದ ನನ್ನ ಬಗ್ಗೆ ತಪ್ಪಾಗಿ ಬಿಂಬಿಸಿ ಓಡಿ ಹೋಗಿರುವ ಹಾಗೆ ಬಿತ್ತರಿಸಿದ ಮಾಧ್ಯಮಗಳು ವಸ್ತು ಸ್ಥಿತಿ ಅವಲೋಕಿಸಬೇಕಿತ್ತು. ಯಾರೋ ಕೊಟ್ಟ ವಿಡಿಯೋ ಸಿಕ್ಕಿದಾಗ ನನ್ನ ಬಳಿ ಸ್ಪಷ್ಟನೆ ಕೇಳಬಹುದಿತ್ತು. ಸತ್ಯಾಸತ್ಯತೆ ತಿಳಿದು ಸುದ್ದಿ ಮಾಡುವುದು ನಿಮ್ಮಗಳ ಘನತೆ ಗೌರವ ಹೆಚ್ಚಿಸುತ್ತದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಕಸಬಾ ಹೋಬಳಿ ಅಡಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆಯಾದ ಮಂಗಳಮ್ಮ ಕರೇತಿಮ್ಮಯ್ಯ ಅವರನ್ನು ಅಭಿನಂದಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಚೆಗೆ ಮಾಧ್ಯಮ ದಿಕ್ಕು ಬದಲಿಸಿದೆ. ಬೈಕ್ ಹತ್ತಿ ಪರಾರಿ ಎಂದು ಬರೆಯುವ ಮುನ್ನ ನನ್ನ ಬಗ್ಗೆ ತಿಳಿಯಬೇಕಿತ್ತು. ಗನ್ ಎದೆಗಿಟ್ಟು ಗುಂಡು ಹೊಡೆಯುವ ಬೆದರಿಕೆಗೂ ಜಗ್ಗುವವ ನಾನಲ್ಲ. ಎದೆಗುಂದುವ ಜಾಯಮಾನ ನನ್ನದಲ್ಲ. ಜನರ ಕಷ್ಟ ಆಲಿಸುವ ಮನಸ್ಥಿತಿ ಇರುವ ನಿಟ್ಟಿನಲ್ಲಿ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಊರೊಳಗೆ ಇದ್ದ ಸಮಸ್ಯೆ ಆಲಿಸಲು ಹೋದರೆ ಇಲ್ಲಸಲ್ಲದ ಸುದ್ದಿ ಬಿತ್ತರಿಸುವ ಪ್ರವೃತ್ತಿ ಬಿಡಿ ವಾಸ್ತವತೆ ತಿಳಿಯಿರಿ ಎಂದು ಸಲಹೆ ನೀಡಿದರು.

ಯಕ್ಕಲಕಟ್ಟೆ ಗ್ರಾಮದ ಜನರನ್ನೇ ಕೇಳಿ ವಾಸ್ತವ ತಿಳಿಯುತ್ತದೆ. ಸಾಮಾಜಿಕ ಜಾಲತಾಣ ವಿಡಿಯೋಗಳನ್ನು ಬಿತ್ತರಿಸುವ ಮುನ್ನ ಸ್ಥಳೀಯರ ಹೇಳಿಕೆ ಪಡೆಯಿರಿ. ಈ ಜೊತೆಗೆ ಮಾಹಿತಿ ತಿಳಿಯದ ಇನ್ನೂ ಕೆಲವರು ಗುದ್ದಲಿಪೂಜೆ ನಡೆದಿದೆ. ಕೆಲಸ ಆರಂಭವಾಗಿಲ್ಲ ಎನ್ನುತ್ತಿದ್ದಾರೆ. ಎಲ್ಲಾ ತಾಂತ್ರಿಕ ಮಂಜೂರು ಪಡೆದ ನಂತರವೇ ಪೂಜೆ ನಡೆಸುವುದು. ಈ ಕನಿಷ್ಠ ತಿಳುವಳಿಕೆ ಇಲ್ಲದವರಿಗೆ ನಾನು ಉತ್ತರ ನೀಡುವ ಅಗತ್ಯವಿಲ್ಲ ಎಂದ ಅವರು ಬಾರಿ ಮಳೆ ಹಿನ್ನಲೆ ಒಳ್ಳೆಯ ರಸ್ತೆಗಳ ಡಾಂಬರ್ ಕಿತ್ತಿವೆ. ಮಳೆ ನಿಂತ ಬಳಿಕ ಡಾಂಬರ್ ರಸ್ತೆ ದುರಸ್ತಿ ನಡೆಯಲಿದೆ. ಪಟ್ಟಣದ ಎಂಜಿ ರಸ್ತೆಗೆ 1.30 ಕೋಟಿ ರೂಗಳು ಹಾಗೂ ರೈಲ್ವೇ ಅಂಡರ್ ಪಾಸ್ ರಸ್ತೆಗೆ ಒಂದು ಕೋಟಿ ಹಾಕಿದ್ದು, ಹದಿನೈದು ದಿನದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದರು.

ಚುನಾವಣಾ ಸಮಯ ಆರೋಪ ಪ್ರತ್ಯಾರೋಪ ಸಾಮಾನ್ಯ. ಕಾಂಗ್ರೆಸ್ ಸೇರುವ ಬಗ್ಗೆ ನಿರ್ಧಾರ ಕೈಗೊಂಡಿಲ್ಲ. ಹೋಗುವುದಾದರೆ ಎಲ್ಲರ ವಿಶ್ವಾಸ ತೆಗೆದುಕೊಂಡು ಹೋಗುತ್ತೇನೆ. ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡಲು ಮೂರು ಸಾವಿರ ರೂಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಮಾಡಲಾಗುವುದು ಎಂದ ಅವರು ಈಗಾಗಲೇ ಸಿಸಿ ರಸ್ತೆ ಕಾರ್ಯಗಳು ಕ್ಷೇತ್ರದಲ್ಲಿ ಬಹುತೇಕ ಗ್ರಾಮದಲ್ಲಿ ನಡೆದಿದೆ. ಡಾಂಬರ್ ರಸ್ತೆಗಳ ಪೈಕಿ ತೀರಾ ಹಾಳಾದ ಶಿರಾ ನೆಲ್ಲಿಗೆರೆ, ಬೆಲವತ್ತ ರಸ್ತೆ ದುರಸ್ಥಿ ಮಳೆ ನಿಂತ ತಕ್ಷಣ ನಡೆಯಲಿದೆ ಎಂದರು.

ನೂತನ ಅಧ್ಯಕ್ಷೆ ಮಂಗಳಮ್ಮ ಕರೇತಿಮ್ಮಯ್ಯ ಮಾತನಾಡಿ ಮೂಲಭೂತ ಸೌಕರ್ಯಗಳನ್ನು ಅಡಗೂರು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಒದಗಿಸಲಾಗುವುದು. ಶಾಸಕರ ಮಾರ್ಗದರ್ಶನದಲ್ಲಿ ಎಲ್ಲಾ ಸದಸ್ಯರ ಒಮ್ಮತದಲ್ಲಿ ಕೆಲಸಗಳು ನಡೆಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಚುನಾವಣಾ ಪ್ರಕ್ರಿಯೆ ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು.

ಗ್ರಾಪಂ ಉಪಾಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ರಂಗಪ್ಪ, ಚನ್ನಬಸವೇಗೌಡ, ಲೀಲಾವತಿ, ಮಂಜುನಾಥ್, ಜಗಣ್ಣ, ನಾಗಣ್ಣ, ರಾಧಮ್ಮ, ಜಯಮ್ಮ, ಮಹದೇವಯ್ಯ, ಸರಸ್ವತಿ, ಸಣ್ಣಯ್ಯ, ಮುಖಂಡರಾದ ಜಿಪಂ ಮಾಜಿ ಸದಸ್ಯ ಜಿ.ಎಚ್.ಜಗನ್ನಾಥ್, ತಾಪಂ ಮಾಜಿ ಸದಸ್ಯ ಕರೇತಿಮ್ಮಯ್ಯ, ಬಸವರಾಜು, ರಮೇಶ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!