ರೈಲ್ವೆ ಅಂಡರ್ ಪಾಸ್ ಅವ್ಯವಸ್ಥೆ ಸರಿಪಡಿಸುವಂತೆ ಒತ್ತಾಯ

ತುಮಕೂರು: ನಗರದ 6ನೇ ವಾರ್ಡ್‌ಗೆ ಸೇರಿದ ಭೀಮಸಂದ್ರ ಹಳೇ ಗ್ರಾಮದ ರೈಲ್ವೆ ಅಂಡರ್ ಪಾಸ್ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಈ ಭಾಗದ ಪಾಲಿಕೆ ಸದಸ್ಯೆ ವೀಣಾ ಮನೋಹರ್ ಗೌಡ ಅವರು ಗ್ರಾಮಸ್ಥರೊಂದಿಗೆ ಸೇರಿ ಸಂಸದರಾದ ಜಿ.ಎಸ್. ಬಸವರಾಜು ಅವರಿಗೆ ಮನವಿ ಮಾಡಿದ್ದರ ಮೇರೆಗೆ ಸಂಸದರು ರೈಲ್ವೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು, ಭೀಮಸಂದ್ರದ ರೈಲ್ವೆ ಅಂಡರ್‌ಪಾಸ್‌ನಲ್ಲಿ ಕಸ ಕಡ್ಡಿಯಿಂದ ಕೂಡಿ ದುರ್ವಾಸನೆ ಬರುತ್ತಿದ್ದು, ಜೊತೆಗೆ ಕೆರೆಯ ನೀರು ಅಂಡರ್‌ಪಾಸ್‌ನಲ್ಲಿ ಹರಿಯುವುದರಿಂದ ವಾಹನ ಸಂಚಾರ ಹಾಗೂ ಜನ ಸಂಚಾರಕ್ಕೂ ತೀವ್ರ ತೊಂದರೆಯಾಗಿತ್ತು. ಮಳೆ ಬಂದರೆ ಮಳೆ ನೀರು ಸರಾಗವಾಗಿ ಅಂಡರ್ ಪಾಸ್‌ನಲ್ಲಿ ಹರಿಯಲು ಸಾಧ್ಯವಿಲ್ಲದೆ ವಾಹನ ಸವಾರರು, ನಾಗರೀಕರು ಓಡಾಡಲು ತುಂಬಾ ಸಮಸ್ಯೆ ಎದುರಿಸುತ್ತಿದ್ದ ಹಿನ್ನಲೆಯಲ್ಲಿ ಈ ಭಾಗದ ನಾಗರೀಕರು ರೈಲ್ವೆ ಅಂಡರ್‌ಪಾಸ್ ದುರಸ್ಥಿಗೆ ಮನವಿ ಮಾಡಿದ್ದರ ಮೇರೆಗೆ ಇಂದು ರೈಲ್ವೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದರು.

ರೈಲ್ವೆ ಅಂಡರ್ ಪಾಸ್‌ನಿಂದ ಉಂಟಾದ ಅವ್ಯವಸ್ಥೆಯನ್ನು ವೀಕ್ಷಿಸಲು ರೈಲ್ವೆ ಇಂಜಿನಿಯರುಗಳು, ತಾಂತ್ರಿಕ ಸಹಾಯಕರು ಬಂದಿದ್ದು, ಈ ಅಂಡರ್‌ಪಾಸ್‌ನಲ್ಲಿ ಕಾರು, ಬೈಕ್, ಟ್ರಾಕ್ಟರ್ ಸಂಚರಿಸಲು ಅಂಡರ್ ಪಾಸ್‌ನ್ನು ವಿಸ್ತರಿಸಿ ದುರಸ್ಥಿಪಡಿಸಲು ಸೂಚಿಸಿದ್ದರ ಮೇರೆಗೆ ರೈಲ್ವೆ ಅಧಿಕಾರಿಗಳು ಒಪ್ಪಿದ್ದು, ಶೀಘ್ರವಾಗಿ ಅಂದಾಜು ಪಟ್ಟಿ ಸಿದ್ಧಪಡಿಸಿ ಇನ್ನಾರು ತಿಂಗಳಲ್ಲಿ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮುಖಂಡ ಮನೋಹರ್‌ಗೌಡ ಮಾತನಾಡಿ, ನಗರದ 6ನೇ ವಾರ್ಡ್ ಭೀಮಸಂದ್ರ ಹಳೇ ಗ್ರಾಮದಲ್ಲಿ ನಿರ್ಮಾಣವಾಗಿರುವ ರೈಲ್ವೆ ಅಂಡರ್ ಪಾಸ್ ಅವೈಜ್ಞಾನಿಕವಾಗಿದ್ದು, ಅಂಡರ್‌ಪಾಸ್ ಕೆರೆ ಸಮೀಪವಿರುವುದರಿಂದ ಸೀಬೇಜ್ ನೀರು ಪ್ರತಿನಿತ್ಯ ಮೂರ್‍ನಾಲ್ಕು ಅಡಿ ಹರಿಯುತ್ತಿರುತ್ತದೆ. ಮಳೆ ಬಂದರೆ ಅಂಡರ್‌ಪಾಸ್‌ನಲ್ಲಿ ನೀರು ನಿಂತು ವಾಹನ ಸಂಚಾರ ಹಾಗೂ ಸಾರ್ವಜನಿಕರು ಓಡಾಡುವುದು ತುಂಬಾ ಕಷ್ಟಸಾಧ್ಯ. ಭೀಮಸಂದ್ರಕ್ಕೆ ಬರುವವರು ಮತ್ತು ಹೋಗುವವರು ಅರ್ಧ ಕಿ.ಮೀ. ಹೆಚ್ಚುವರಿ ಸುತ್ತು ಬಳಸಿ ಬರಬೇಕಾದ ಅನಿವಾರ್ಯ ಉಂಟಾಗಲಿದೆ. ಅಂಡರ್ ಪಾಸ್‌ಗಿಂತ ಕೆರೆಯ ಎತ್ತರವೇ ಹೆಚ್ಚಾಗಿದೆ. ಆದ್ದರಿಂದ ಈ ಅಂಡರ್‌ಪಾಸ್‌ನ್ನು ದುರಸ್ಥಿಪಡಿಸಿ ವಾಹನ ಹಾಗೂ ಜನ ಸಂಚಾರಕ್ಕೆ ಯೋಗ್ಯ ರೀತಿ ಮಾಡಿಕೊಡಬೇಕೆಂದು ಭೀಮಸಂದ್ರ ಗ್ರಾಮಸ್ಥರೆಲ್ಲಾ ಸೇರಿ ಸಂಸದರಿಗೆ ಮನವಿ ಮಾಡಿದ್ದರ ಮೇರೆಗೆ ಸಂಸದರು ರೈಲ್ವೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆದೊಯ್ದು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದಾರೆ ಎಂದರು.

ನಂತರ ಗುಬ್ಬಿ ತಾಲ್ಲೂಕಿಗೆ ರೈಲ್ವೆ ಅಧಿಕಾರಿಗಳನ್ನು ಕರೆದೊಯ್ದ ಸಂಸದರು, ಗುಬ್ಬಿ ರೈಲ್ವೆ ಸ್ಟೇಷನ್ ಬಳಿ ನಿರ್ಮಾಣವಾಗಿರುವ ಪ್ಲೈ ಓವರ್ ಕಾಮಗಾರಿ ಅವೈಜ್ಞಾನಿಕವಾಗಿದೆ. ಎತ್ತರ ಕಡಿಮೆ ಇರುವುದರಿಂದ ತೀವ್ರ ಸಮಸ್ಯೆ ತಲೆದೋರಲಿದೆ. ಕೂಡಲೇ ಇದನ್ನೂ ಸರಿಪಡಿಸಬೇಕೆಂದು ಒತ್ತಾಯಿಸಿದ ಪರಿಣಾಮ ಅಧಿಕಾರಿಗಳು ಸರಿಪಡಿಸುವ ಭರವಸೆ ನೀಡಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಹೆಚ್ಚುವರಿ ರೈಲ್ವೆ ಪ್ರಾದೇಶಿಕ ಇಂಜಿನಿಯರ್ ರಜತ್, ಇಂಜಿನಿಯರ್ ಸಾಯಿ ಭಾಸ್ಕರ್, ಪಾರ್ಥಿವನ್, ಸೇರಿದಂತೆ ಇತರೆ ರೈಲ್ವೆ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯೆ ವೀಣಾ ಮನೋಹರ್ ಗೌಡ, ಮುಖಂಡರಾದ ಹೊನ್ನುಡಿಕೆ ಲೋಕೇಶ್, ರಘೋತ್ತಮ್ ರಾವ್ ಮುಂತಾದವರು ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!