ಪಿಂಚಣಿ ರಹಿತ ನೌಕರರ ಬದುಕು ಬೀದಿಗೆ ತರಲಿರುವ ಸರ್ಕಾರ : ಎನ್ ಪಿ ಎಸ್ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಆಕ್ರೋಶ

ಗುಬ್ಬಿ: ಯುವಶಕ್ತಿ ಬಳಸಿಕೊಂಡು ಆಡಳಿತ ನಡೆಸುವ ಸರ್ಕಾರ ಯುವ ನೌಕರರಿಗೆ ಪಿಂಚಣಿ ರಹಿತ ನೇಮಕ ಮಾಡಿದ್ದು ಸರಿಯಲ್ಲ. ನಿವೃತ್ತಿ ನಂತರ ಈ ನೌಕರರ ಬದುಕು ಬೀದಿಗೆ ಬೀಳಲಿದೆ. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಿ ಎನ್ ಪಿ ಎಸ್ ತೊಲಗಿಸಿ ಓ ಪಿ ಎಸ್ ಅಳವಡಿಸಬೇಕು ಎಂದು ಎನ್ ಪಿ ಎಸ್ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತಾರಾಮ್ ಆಗ್ರಹಿಸಿದರು.

ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದ ಬಳಿ ಆಗಮಿಸಿದ ಎನ್ ಪಿ ಎಸ್ ತೊಲಗಿಸಿ ಓ ಪಿ ಎಸ್ ಅಳವಡಿಸಿ, ಮಾಡು ಇಲ್ಲವೇ ಮಡಿ ಹೋರಾಟದ ಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು ಖಾಸಗಿ ವಲಯಕ್ಕಿಂತ ಭಿನ್ನವಾಗಿ ನಮ್ಮನ್ನು ಬಿಂಬಿಸಿ ಜೀವನ ಭದ್ರತೆಗೆ ಅಡ್ಡಪಡಿಸುವ ನಿಯಮ ಜಾರಿಗೆ ತಂದು ಸರ್ಕಾರಿ ನೌಕರರಿಗೆ ಪಿಂಚಣಿ ರಹಿತರು ಎಂದು ಹೇಳುವ ಈ ಯೋಜನೆಗೆ ಎಲ್ಲಾ ನೌಕರರ ವಿರೋಧವಿದೆ. ಕೂಡಲೇ ಸರ್ಕಾರ ಕ್ರಮವಾಗಿ ಪಿಂಚಣಿ ಸಹಿತ ನೌಕರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ನಮ್ಮಗಳ ಸೇವಾವಧಿಯಲ್ಲಿ ಬರುವ ಸಂಬಳ ಕೇವಲ ಎನಿಸಿದೆ. ಖಾಸಗಿ ವಲಯದಲ್ಲಿ ನಮ್ಮಷ್ಟು ವಿದ್ಯಾರ್ಹತೆ ಇರುವವರಿಗೆ ಲಕ್ಷ ರೂ ವೇತನ ನೀಡಿದರೆ, ಸರ್ಕಾರ ನಮಗೆ 35 ಸಾವಿರ ರೂ ಅಷ್ಟೇ ನೀಡುತ್ತದೆ. ನಿವೃತ್ತಿ ನಂತರ ನಮ್ಮಗಳ ಜೀವನ ಕೇಳುವವರಿಲ್ಲ. ಪಿಂಚಣಿ ಇಲ್ಲ, ಮೃತಪಟ್ಟರೆ ನಮ್ಮ ಕುಟುಂಬಕ್ಕೆ ಆಧಾರವೇ ಇಲ್ಲ. ಹೀಗೆ ನಮ್ಮನ್ನು ನಿಕೃಷ್ಟವಾಗಿ ಕಾಣುವ ಸರ್ಕಾರ ನಿವೃತ್ತಿ ನಂತರ ಸೇವೆ ಮುಂದುವರೆಯುವ ಬೂಟಾಟಿಕೆ ಮಾತು ಹೇಳುತ್ತದೆ. ಎಲ್ಲರಂತೆ ನಮ್ಮನ್ನು ಗುರುತಿಸಿ ನಮ್ಮಗಳಿಗೆ ನೀಡಬೇಕಾದ ಎಲ್ಲಾ ಸವಲತ್ತು ನೀಡಬೇಕು ಎಂದು ಒತ್ತಾಯಿಸಿದರು.

ಪಿಂಚಣಿ ನಮ್ಮ ಹಕ್ಕು. ಸೇವೆಗೆ ದೊರೆಯುವ ಗೌರವ ನಂತರವೂ ಸಿಗಬೇಕು. ಸರ್ಕಾರಿ ನೌಕರರು ಹೋರಾಟದ ಮೂಲಕ ಹಕ್ಕು ಕೇಳುವ ಈ ದುಸ್ಥಿತಿ ಹಲವು ರಾಜ್ಯದಲ್ಲಿಲ್ಲ. ನಮ್ಮಲ್ಲೇ ಈ ತಾರತಮ್ಯ ನೀತಿ ಅನುಸರಿಸಲಾಗಿದೆ. ಈ ಬಗ್ಗೆ ಒಗ್ಗೂಡಿ ಹೋರಾಟ ಮಾಡಲು ಇದೇ ತಿಂಗಳಿಂದ 16 ಜಿಲ್ಲೆ ಪ್ರವಾಸ ಮಾಡಿ ಎನ್ ಪಿ ಎಸ್ ನೌಕರರ ಸಂಘಟನೆ ಮಾಡಲಾಗಿದೆ. ಯಾತ್ರೆ ಮೂಲಕ ಎಲ್ಲರನ್ನೂ ಜಾಗೃತಿಗೊಳಿಸಿ ಡಿಸೆಂಬರ್ ಮಾಹೆ 19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಹೋರಾಟ ಅನಿರ್ಧಿಷ್ಟಾವಧಿ ನಡೆಯಲಿದೆ. ಈ ಧರಣಿಗೆ ಬೆಂಬಲಿಸಿ ಜಿಲ್ಲೆಯ ಎಲ್ಲಾ ನೌಕರರು ಬೆಂಬಲ ಸೂಚಿಸಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಬೈಕ್ ಜಾಥಾ ಹಾಗೂ ಪಂಜಿನ ಮೆರವಣಿಗೆ ನಡೆಸಲಾಯಿತು. ಸಂಘದ ಬಾವುಟ, ಕಿರು ಹೊತ್ತಿಗೆ, ಕರಪತ್ರ ನೀಡಿ ಎಲ್ಲಾ ನೌಕರರನ್ನು ಹುರಿದುಂಬಿಸಲಾಯಿತು.

ಯಾತ್ರೆಯಲ್ಲಿ ಎನ್ ಪಿ ಎಸ್ ಸರ್ಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗನಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ವಿ.ಮಂಜುನಾಥ್, ಜಿಲ್ಲಾಧ್ಯಕ್ಷ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ಕಾರ್ಯದರ್ಶಿ ರವಿಕುಮಾರ್, ಸರ್ಕಾರಿ ನೌಕರರ ಸಂಘದ ಶ್ರೀನಿವಾಸಮೂರ್ತಿ, ಗಂಗಾಧರ್, ಶಿಕ್ಷಕರ ಸಂಘದ ದಯಾನಂದ್ ಸರಸ್ವತಿ, ಕೋಮಲ, ಶಿವಮ್ಮ, ಸರೋಜಮ್ಮ, ಯಶೋಧಮ್ಮ, ಅರುಣ್ ಕುಮಾರ್, ಶಶಿಧರ್, ಕಾಂತರಾಜ್, ಮಂಜುಶ್ರೀ ಸೇರಿದಂತೆ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ ನೌಕರರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!