ಗುಬ್ಬಿ: ತಾಲ್ಲೂಕಿನ ಕಸಬಾ ಹೋಬಳಿ ಚಿಕ್ಕೋನಹಳ್ಳಿ ಗ್ರಾಮದಿಂದ ನಡುವಲಪಾಳ್ಯವರೆಗೆ ಸುಮಾರು ಎರಡು ಕಿಮೀ ರಸ್ತೆ ಸಂಪೂರ್ಣ ಹಾಳಾಗಿದ್ದು, ದುರಸ್ಥಿಗೆ ಹಲವು ಬಾರಿ ಮನವಿ ಮಾಡಿದ್ದರೂ ಕಿಂಚಿತ್ತೂ ಕಾಳಜಿ ವಹಿಸದ ಅಧಿಕಾರಿಗಳು ಯಾವುದೇ ಅನುದಾನ ಸದ್ಯಕ್ಕಿಲ್ಲ ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ಈ ಹಿನ್ನಲೆ ಗ್ರಾಮಸ್ಥರು ಚಂದಾ ಎತ್ತಿ ಹಣ ಸಂಗ್ರಹಿಸಿ ಸರ್ಕಾರಕ್ಕೆ ಒಪ್ಪಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಚಿಕ್ಕೋನಹಳ್ಳಿಪಾಳ್ಯ, ನಡುವಲಪಾಳ್ಯ ಹಾಗೂ ಕಡೇಪಾಳ್ಯ ಮೂರು ಪಾಳ್ಯದ ಗ್ರಾಮಸ್ಥರು ಸೇರಿ ಚಿಕ್ಕೋನಹಳ್ಳಿಯಿಂದ ಹಾಳಾದ ರಸ್ತೆಯಲ್ಲಿ ಮೆರವಣಿಗೆ ನಡೆದು ರಸ್ತೆ ಬಳಸುವ ವಾಹನ ಸವಾರರು, ಚಾಲಕರು ಹಾಗೂ ಗ್ರಾಮಸ್ಥರ ಬಳಿ ಚಂದಾ ಎತ್ತಿ ಮುಂದೆ ಸಾಗಿದರು. ನಂತರ ನಡುವಲಪಾಳ್ಯದಲ್ಲಿ ಕುಳಿತು ರಸ್ತೆ ತಡೆ ಮೂಲಕ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಧಾವಿಸಿದ ಕಂದಾಯ ನಿರೀಕ್ಷಕ ರಮೇಶ್ ಅವರಿಗೆ ಚಂದಾ ಹಣ ಹಾಗೂ ಮನವಿಪತ್ರ ನೀಡಿ ಕೂಡಲೇ ರಸ್ತೆ ದುರಸ್ಥಿ ಮಾಡಿ ಎಂದು ಒತ್ತಾಯಿಸಿದರು.
ರೈತಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸಿ.ಜಿ.ಲೋಕೇಶ್ ಮಾತನಾಡಿ ಹದಿನೈದು ಗ್ರಾಮಗಳಿಗೆ ಸಂಪರ್ಕಿಸುವ ಈ ಪ್ರಮುಖ ರಸ್ತೆಯಲ್ಲಿ ನಿತ್ಯ ಸಾವಿರಾರು ಮಂದಿ ಓಡಾಡುತ್ತಾರೆ. ನೂರಾರು ವಾಹನಗಳು ಸಂಚರಿಸುತ್ತವೆ. ಮಳೆ ಹೆಚ್ಚಾದಂತೆ ಎರಡು ವರ್ಷದಿಂದ ಡಾಂಬರ್ ಕಿತ್ತು ಗುಂಡಿಗಳ ಸಾಮ್ರಾಜ್ಯವಾಗಿದೆ. ರಿಪೇರಿ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾರಿಕೆ ಉತ್ತರ ನೀಡುತ್ತಾ ಯಾವುದೇ ಹಣವಿಲ್ಲ ಎನ್ನುತ್ತಾ ಕಾಲಹರಣ ಮಾಡುತ್ತಿದ್ದಾರೆ. ಈ ಬೇಜವಾಬ್ದಾರಿತನ ಕಂಡು ಮೂರು ಪಾಳ್ಯ ಗ್ರಾಮಸ್ಥರು ಒಗ್ಗೂಡಿ ರಸ್ತೆಯಲ್ಲೇ ಚಂದಾ ಎತ್ತಿ ಸರ್ಕಾರಕ್ಕೆ ಹಣ ನೀಡುವ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಈಗಲಾದರೂ ರಸ್ತೆ ಸರಿಪಡಿಸಿ ಎಂದು ಒತ್ತಾಯಿಸಿದರು.
ಹೇರೂರು ಗ್ರಾಪಂ ಅಧ್ಯಕ್ಷ ಸೋಮಶೇಖರ್ ಮಾತನಾಡಿ ದುರಸ್ಥಿ ಮಾಡಲು ಮೀನಾಮೇಷ ಎಣಿಸುವ ಅಧಿಕಾರಿಗಳು ರೈತರ ಮನವಿಗೆ ಬೆಲೆ ಕೊಟ್ಟಿಲ್ಲ. ಅನುದಾನವಿಲ್ಲ ಎಂಬ ಉತ್ತರ ಕೇಳಿ ಗ್ರಾಮಸ್ಥರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈಗಾಗಲೇ ಈ ರಸ್ತೆಯಲ್ಲಿ ಬೈಕ್ ಸವಾರರು ಬಿದ್ದು ಎದ್ದು ಹೋಗಿದ್ದಾರೆ. ವಾಹನಗಳು ಗುಂಡಿಯಲ್ಲಿ ಸಿಲುಕಿದ ನಿದರ್ಶನ ಸಾಕಷ್ಟಿದೆ. ಅನುದಾನಕ್ಕೆ ಚಂದಾವನ್ನು ಸಾಂಕೇತಿಕವಾಗಿ ಸಂಗ್ರಹಿಸಿದ್ದೇವೆ. ಹಣ ಇಲ್ಲ ಎನ್ನುವ ಮಾತು ಅಧಿಕಾರಿಗಳು ಹೇಳುವುದಾದರೆ ಪ್ರತಿ ಮನೆಯಿಂದ ಚಂದಾ ಎತ್ತಿ ದುರಸ್ಥಿಗೆ ಅವಶ್ಯ ಹಣವನ್ನು ನಾವೇ ಸರ್ಕಾರಕ್ಕೆ ನೀಡುತ್ತೇವೆ ಎಂದು ಕಿಡಿಕಾರಿದರು
ಗ್ರಾಪಂ ಮಾಜಿ ಸದಸ್ಯ ರಾಜಣ್ಣ ಮಾತನಾಡಿ ಬಾರಿ ಮಳೆಯಿಂದ ರಸ್ತೆಯಲ್ಲಿ ಕಾಣಿಸಿಕೊಂಡ ಗುಂಡಿಗಳ ಮೇಲೆ ಬಾರಿ ವಾಹನಗಳ ಸಂಚಾರ ಹೆಚ್ಚಾಗಿದೆ. ತೊರೇಹಳ್ಳಿ ಬಳಿಯ ಕೋಡಿ ತುಂಬಿ ಹರಿದ ಸಮಯದಲ್ಲಿ ಎಲ್ಲಾ ವಾಹನಗಳು ನಮ್ಮ ಗ್ರಾಮದತ್ತ ಬರುತ್ತಿವೆ. ದಟ್ಟಣೆ ಹೆಚ್ಚಾಗಿ ಗುಂಡಿಗಳ ಆಳ ಅಗಲ ಹೆಚ್ಚಾಗಿದೆ. ರಸ್ತೆಯ ಸಾಮರ್ಥ್ಯ ಕಡಿಮೆ ಇದೆ ಆದರೆ ಟನ್ ಗಟ್ಟಲೇ ತೂಕದ ಟಿಪ್ಪರ್ ಲಾರಿ ಓಡಾಟ ಮೊದಲು ನಿಲ್ಲಿಸಿದರೆ ಮಾತ್ರ ರಸ್ತೆ ಉಳಿಯಲಿದೆ. ಕೂಡಲೇ ರಸ್ತೆ ಸರಿಪಡಿಸಿ ಟಿಪ್ಪರ್ ಲಾರಿ ಇತ್ತ ಕಡೆ ಬರದಂತೆ ನಿರ್ದೇಶನ ನೀಡಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ರೇಣುಕಪ್ಪ, ಕೆ.ಎಸ್.ಮಂಜು, ಜಯಣ್ಣ, ಮೂರ್ತಪ್ಪ, ರೈತ ಸಂಘದ ಜಿಲ್ಲಾ ಸಂಚಾಲಕ ಹುಚ್ಚೇಗೌಡ, ಗ್ರಾಪಂ ಮಾಜಿ ಸದಸ್ಯ ಬಸವರಾಜು ಸೇರಿದಂತೆ ಸ್ಥಳೀಯ ಗ್ರಾಮಸ್ಥರ ಪ್ರತಿಭಟನೆ ಬೆಂಬಲಿಸಿ ಮಡೇನಹಳ್ಳಿ, ಬ್ಯಾಡಿಗೆರೆ, ಜವರೇಗೌಡಪಾಳ್ಯ, ತೋರೆಹಳ್ಳಿ ಹಾಗೂ ಇನ್ನಿತರ ಗ್ರಾಮದವರು ಭಾಗವಹಿಸಿದ್ದರು.