ಗುಬ್ಬಿ: ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ಮಾಡುವ ಅಹಿಂದ ವರ್ಗಕ್ಕೆ ಅವಶ್ಯ ರಾಜಕೀಯ ಶಕ್ತಿ ತುಂಬುವ ಕೆಲಸ ಮಾಡಲು ಎಐಎಂಐಎಂ ಸಂಘಟನೆ ಮುಂದಿನ ಎಲ್ಲಾ ಸಾರ್ವತ್ರಿಕ ಚುನಾವಣೆ ಎದುರಿಸಲಿದೆ ಎಂದು ಎಐಎಂಐಎಂ ಶಿವಮೊಗ್ಗ ಜಿಲ್ಲಾಧ್ಯಕ್ಷ ಅಬ್ದುಲ್ ನವೀದ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಧಾರ್ಮಿಕ ಸ್ವತಂತ್ರ ಸೇರಿದಂತೆ ಎಲ್ಲಾ ಮೂಲ ಸವಲತ್ತು ಪಡೆಯುವ ನಿಟ್ಟಿನಲ್ಲಿ ಈ ಸಂಘಟನೆ ಪಕ್ಷವಾಗಿ ಸಮಾಜದ ಬದ್ಧತೆಗೆ ತಕ್ಕಂತೆ ನಡೆದುಕೊಳ್ಳಲಿದೆ ಎಂದರು.
ಶೋಷಿತ ವರ್ಗಗಳ ದನಿಯಾಗಿ ನಿಲ್ಲಬೇಕಾದ ಹಲವು ರಾಜಕೀಯ ಪಕ್ಷಗಳು ತಮ್ಮ ಮತ ಬ್ಯಾಂಕ್ ಉಳಿಸಿಕೊಳ್ಳಲು ಸಾಮಾಜಿಕ ನ್ಯಾಯ ಮತ್ತು ಬದ್ಧತೆ ಮರೆತು ಸಾಗಿದ್ದಾರೆ. ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯಕ್ಕೆ ಸಾಂತ್ವನ ಹೇಳುವ ಕೆಲಸ ಸಹ ಮಾಡದ ಈ ಪರಿಸ್ಥಿತಿಯಲ್ಲಿ ಸಂವಿಧಾನ ಬದ್ಧ ಹೋರಾಟ ನಡೆಸಲು ಪಕ್ಷ ಸಂಘಟನೆ ಅಗತ್ಯವಿತ್ತು. ಹಾಗಾಗಿ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಮೊದಲ ಹೆಜ್ಜೆ ಇಟ್ಟು ಈಗ ರಾಜ್ಯದ ಹಲವು ಜಿಲ್ಲೆಯಲ್ಲಿ ಸಂಘಟನೆ ನಡೆದಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಸಹ ಎಲ್ಲಾ ತಾಲ್ಲೂಕಿನ ಪ್ರವಾಸ ಮಾಡಲಾಗುತ್ತಿದೆ. ಇದೇ ನಿಟ್ಟಿನಲ್ಲಿ ಗುಬ್ಬಿ ತಾಲ್ಲೂಕಿನ ಪಕ್ಷ ಸಂಘಟನೆಗೆ ಇರ್ಫಾನ್ ಎಂಬ ಯುವಕನ ಮೇಲೆ ಜವಾಬ್ದಾರಿ ಹೊರಿಸಲಾಗಿದೆ. ಅಲ್ಪ ಸಂಖ್ಯಾತರ ಜೊತೆಗೆ hindukida ಎಂದು ಮತ್ತು ದಲಿತರನ್ನು ಒಗ್ಗೂಡಿಸಿ ಮುಂದಿನ ಜಿಪಂ ಮತ್ತು ತಾಪಂ ಚುನಾವಣೆ ಎದುರಿಸಲು ಸಜ್ಜಾಗುತ್ತಿದ್ದಾರೆ ಎಂದ ಅವರು ಸದಸ್ಯತ್ವ ನೋಂದಣಿ ಕಾರ್ಯಕ್ಕೂ ಚಾಲನೆ ನೀಡಲಾಗಿದೆ ಎಂದರು.
ಎಐಎಂಐಎಂ ತಾಲ್ಲೂಕು ಅಧ್ಯಕ್ಷ ಮಹಮದ್ ಇರ್ಫಾನ್ ಮಾತನಾಡಿ ಯುವಶಕ್ತಿಯನ್ನು ಒಂದುಗೂಡಿಸಿ ಪಕ್ಷ ಸಂಘಟನೆ ಮಾಡುತ್ತೇನೆ. ತಾಲ್ಲೂಕಿನಲ್ಲಿ ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸುತ್ತಾ ಮುಂದಿನ ಸ್ಥಳೀಯ ಚುನಾವಣೆಗೆ ಸನ್ನಾದ್ದರಾಗುತ್ತೇವೆ. ತಾಲ್ಲೂಕಿನ ಸುಮಾರು 25 ಸಾವಿರ ಅಲ್ಪ ಸಂಖ್ಯಾತರ ಒಮ್ಮತಗೊಳಿಸಿ ಪಕ್ಷ ಬಲವರ್ಧನೆ ಮಾಡುವ ಜೊತೆಗೆ ಹತ್ತು ಸಾವಿರಕ್ಕೂ ಅಧಿಕ ಸದಸ್ಯತ್ವ ನೋಂದಣಿ ಶೀಘ್ರದಲ್ಲಿ ಮಾಡುವ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಿಜ್ವಾನ್ ಪಾಷ, ಇಸ್ಮಾಯಿಲ್ ಕುರೇಶಿ, ಮುನೀರ್, ಮದಿನಿ, ಇನ್ತಿಯಾಜ್ ಪಾಷ, ಗುಬ್ಬಿ ನಗರಾಧ್ಯಕ್ಷ ಮಹಮದ್ ಆಸೀಫ್, ಮೌಲಾನ ಇತರರು ಇದ್ದರು.