ಗುಬ್ಬಿ: ಪರಿಶುದ್ಧ ರೇಷ್ಮೆ ಸೀರೆಗಳು ನೇಯ್ಗೆಯ ಮೂಲಕ ಕಲ್ಲೂರು ಗ್ರಾಮದಲ್ಲಿ ನೇಕಾರರು ಸಿದ್ದ ಪಡಿಸುವ ‘ಕಲ್ಲೂರು ರೇಷ್ಮೆ ಸೀರೆ’ ದೇಶ ವಿದೇಶದಲ್ಲಿ ಖ್ಯಾತಿ ಪಡೆದಿದೆ. ದೊಡ್ಡ ಅಂಗಡಿಗಳಲ್ಲಿ ಕಂಚಿ ಕಾಂಚೀಪುರಂ ಸೀರೆಗಳ ನಡುವೆ ಬೆರೆತ ಕಲ್ಲೂರು ಸೀರೆಗೆ ಇರುವ ವೈವಿದ್ಯತೆ ವಿಶೇಷತೆ ಗ್ರಾಹಕರ ಮುಂದಿಡಲು ಸ್ವತಃ ಕಲ್ಲೂರು ನೇಕಾರರು ಇಂದು ನೇರ ಗ್ರಾಹಕರಿಗೆ ಸೀರೆ ಮಾರಾಟ ಮಾಡಲು ನಿರ್ಧರಿಸಿ ಶೋ ರೂಂ ತೆರೆದು ಗ್ರಾಹಕರನ್ನು ಕಲ್ಲೂರಿನತ್ತ ಧಾವಿಸುವಂತೆ ಮಾಡಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಕಲ್ಲೂರು ಎಂಬ ಗ್ರಾಮ ಇಂದಿಗೂ ಮಗ್ಗದ ಸದ್ದು ಸ್ವಾಗತಿಸುತ್ತದೆ. ಈ ಪೈಕಿ ಜವಳಿ ಬೀದಿ, ಆಂಜನೇಯಸ್ವಾಮಿ ದೇವಸ್ಥಾನದ ಬೀದಿ ದಾರಿಯುದ್ದಕ್ಕೂ ಮಗ್ಗದ ಕಾಯಕವೇ ಕಾಣುತ್ತದೆ. ಜೊತೆಗೆ 25 ರೇಷ್ಮೆ ಸೀರೆ ಶೋ ರೂಂಗಳು ತಲೆ ಎತ್ತಿವೆ. ಗ್ರಾಹಕರ ಬರುವಿಕೆಗೆ ಕಾದ ನೇಕಾರರು ಅದ್ಬುತ ಸೀರೆಗಳನ್ನು ಕೈಗೆಟಕುವ ಬೆಲೆಯಲ್ಲಿ ಅದು ಹೋಲ್ ಸೇಲ್ ದರದಲ್ಲಿ ನೀಡುತ್ತಿರುವುದು ಸೀರೆ ಪ್ರಿಯ ನೀರೆಯರಿಗೆ ಸಂತಸ ತಂದಿದೆ. ಶುಭ ಕಾರ್ಯಗಳಿಗೆ ಬೇರೆ ಜಿಲ್ಲೆಯ ಗ್ರಾಹಕರು ಧಾವಿಸುತ್ತಿರುವ ಹಿನ್ನಲೆ ನೇಕಾರರು ಸೀರೆಯ ಶೋ ರೂಂ ಆರಂಭಿಸಿದ್ದಾರೆ.

ವಿಶೇಷ ಆಕರ್ಷಣೆಯ ವಿನ್ಯಾಸ
ಇಲ್ಲಿನ ರೇಷ್ಮೆ ಮಹತ್ವ ಅರಿತೇ ಕಲ್ಲೂರು ಸೀರೆ ಹುಡುಕಿ ಬರುವ ಜನರು ವಿವಿಧ ಬಣ್ಣಗಳ ಸಂಯೋಜನೆ ಜೊತೆಗೆ ಮನಸೆಳೆಯುವ ವಿನ್ಯಾಸ ಕಂಡು ಪ್ರತಿ ಶುಭ ಸಮಾರಂಭಗಳಿಗೆ ಇತ್ತ ಕಡೆ ಬರುತ್ತಾರೆ. ಮೈಸೂರು ಹೆಸರು ಉಳಿಸುವ ಬಣ್ಣ ಬಣ್ಣದ ವಿವಿಧ ಚಿತ್ತಾರ ಸೀರೆಗಳು ಯಾವ ರಾಜ್ಯದ ಸೀರೆಗೂ ಸಾಟಿ ಆಗದು ಎಂಬ ಹೆಮ್ಮೆಯ ಮಾತು ಕಲ್ಲೂರು ನೇಕಾರರು ಹೇಳುತ್ತಾರೆ.
ಸುಂದರ ರೇಷ್ಮೆ ಸೀರೆ ತಯಾರಕರು ಕೂಲಿಕಾರರು
ಸುಮಾರು ಐದಾರು ತಲೆಮಾರುಗಳಿಂದ ಕಲ್ಲೂರು ನೇಕಾರರ ಗ್ರಾಮವಾಗಿಯೇ ಉಳಿದಿದೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಪವರ್ ಲೂಮ್ ಹಾಗೂ 400 ಕ್ಕೂ ಹೆಚ್ಚು ಕೈ ಮಗ್ಗ ಪ್ರಸ್ತುತ ಚಾಲ್ತಿಯಲ್ಲಿವೆ. ಸುಮಾರು 1500 ಕ್ಕೂ ಅಧಿಕ ಕುಟುಂಬ ಇಂದಿಗೂ ನೇಕಾರ ವೃತ್ತಿಯನ್ನೇ ನಂಬಿ ಬದುಕು ಕಟ್ಟಿಕೊಂಡಿವೆ. ಕಚ್ಚಾ ರೇಷ್ಮೆ ತಂದು ಬಣ್ಣ ಕಟ್ಟಿ ವಿನ್ಯಾಸದಂತೆ ಸುಂದರ ಸೀರೆ ಸಿದ್ಧಪಡಿಸುವ ನೇಕಾರರು ಸೂಕ್ತ ಮಾರಕಟ್ಟೆ ಕಾಣದೆ ದೊಡ್ಡ ಟೆಕ್ಸ್ ಕಂಪೆನಿಗೆ ಕೂಲಿ ಹಣ ಹುಟ್ಟಿದರೆ ಸಾಕು ಎಂಬಂತೆ ಮಾರಾಟ ಮಾಡುತಿದ್ದರು. ನೇಕಾರರ ಹೆಂಡತಿಗೆ ಹರಕಲು ಸೀರೆ ಎಂಬ ಗಾದೆಯಂತೆ ಸುಂದರ ಸೀರೆ ತಯಾರಕ ನೇಕಾರರು ಇಂದಿಗೂ ಬಿಪಿಎಲ್ ಪಡಿತರದಾರರು ಎಂಬುದೇ ವಿಷಾದ.

ಕೋವಿಡ್ ಸಂಕಷ್ಟ ಪರದಾಡಿದ ನೇಕಾರರು
ಹಬ್ಬಗಳು, ಮದುವೆ, ಗೃಹ ಪ್ರವೇಶ ಇನ್ನಿತರ ಶುಭ ಕಾರ್ಯಕ್ಕೆ ರೇಷ್ಮೆ ಸೀರೆ ಎಂಬ ಸಾಮಾನ್ಯ ಬರಹಗಳು ಕಾಣುವುದು ದೊಡ್ಡ ನಗರ ಪ್ರದೇಶದಲ್ಲಿ ಮಾತ್ರ. ಆದರೆ ಈ ಸಣ್ಣ ಗ್ರಾಮದಲ್ಲೂ ಸಿಟಿಯ ಶೋ ರೂಂ ಗಳ ತಲೆ ಮೇಲೆ ಹೊಡೆದಂತೆ ಕಲ್ಲೂರು ಶೋ ರೂಂ ಕೇವಲ ರೇಷ್ಮೆ ಸೀರೆ ಮಾರಾಟಕ್ಕೆ ಸೀಮಿತವಾಗಿದೆ. ಆದರೆ ವೈಭವದ ವಿನ್ಯಾಸ, ಆಕರ್ಷಣೀಯ ಬಣ್ಣ, ಅಪರೂಪದ ಸಂಯೋಜನೆ ರಾಜ್ಯವನ್ನೇ ಕೈ ಬೀಸಿ ಕರೆದಿದೆ. ಕೋವಿಡ್ ನೀಡಿದ ಸಂಕಷ್ಟದಲ್ಲಿ ಬೆಂದು ಹೋದ ನೇಕಾರರ ಕುಟುಂಬಗಳು ಗುಳೆ ಹೋಗುವ ಸನ್ನಿವೇಶ ಎದುರಾಗಿತ್ತು. ಈ ಸಂದರ್ಭದಲ್ಲಿ ನೇರ ಗ್ರಾಹಕರ ಬಳಿ ವ್ಯವಹರಿಸುವ ಆಲೋಚನೆಯಲ್ಲಿ ಅಂಗಡಿಗಳನ್ನು ತಮ್ಮ ಮನೆಯ ಬಳಿಯಲ್ಲೇ ಆರಂಭಿಸಿ ಇಂದು ಕಲ್ಲೂರು ಗ್ರಾಮವೇ ಸೀರೆಯ ಅಂಗಡಿಗಳ ಸಾಲಿನಲ್ಲಿ ಕಂಗೊಳಿಸುತ್ತಿದೆ. ಗ್ರಾಹಕರ ಮನಗೆದ್ದ ಅಂಗಡಿಗಳ ಸಾಲಿಗೆ ಇಂದು ಕೆ.ಪಿ.ಕೌಶಿಕ್ ಸಿಲ್ಕ್ಸ್, ಎಸ್.ಎಲ್.ಎನ್ ಸಿಲ್ಕ್ಸ್, ಕವಿತಾ ಸಿಲ್ಕ್ಸ್ ಹೌಸ್, ಭಾಗವತ್ ಸಿಲ್ಕ್ ಹೌಸ್, ಧನಲಕ್ಷ್ಮಿ ಸಿಲ್ಕ್ಸ್, ಅಮಲಗಿರಿ ಸಿಲ್ಕ್ಸ್, ಶಿಲ್ಪ ಸಿಲ್ಕ್ಸ್ ಅಂಡ್ ಸ್ಯಾರಿಸ್, ಭಾಗ್ಯಶ್ರೀ ಸಿಲ್ಕ್ಸ್, ಚೌಡೇಶ್ವರಿ ಸಿಲ್ಕ್ಸ್ ಸೇರಿದಂತೆ ಮತ್ತಷ್ಟು ಶೋ ರೂಂ ತಲೆ ಎತ್ತಿವೆ.
ಮೈಸೂರು ಅರಸರ ಮೆಚ್ಚಿಸಿದ ಕಲ್ಲೂರು ಸೀರೆಗಳು
ಕಲ್ಲೂರು ಸೀರೆಗೆ ತನ್ನದೇ ವೈಭವ ಗುರುತಿಸಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. ಮೈಸೂರು ಅರಸರ ಕುಟುಂಬಗಳಿಗೆ ರೇಷ್ಮೆ ಸೀರೆ ಒದಗಿಸುತ್ತಿದ್ದ ಕಲ್ಲೂರು ನೇಕಾರ ಕುಟುಂಬಗಳು ಈಗ ಕೈ ಗೆಟಕುವ ಬೆಲೆಗೆ ನೀಡುತ್ತಿದೆ. ದಿನ ಕಳೆದಂತೆ ತನ್ನತನ ತೋರುತ್ತಿರುವ ಕಲ್ಲೂರು ಸೀರೆಗೆ ಗ್ರಾಹಕರು ಮಾರು ಹೋಗುವುದು ಖಚಿತ. ಪ್ರಖ್ಯಾತ ಸೀರೆಗಳ ಮಧ್ಯೆ ಕಲ್ಲೂರು ಸೀರೆ ಕೂಡಾ ವಿಶೇಷ ಸ್ಥಾನ ಗಳಿಸುವ ಕಾಲ ಸನಿಹಿತವಾಗಿದೆ. ದೇವಾಂಗ ಜನಾಂಗದ ಜೊತೆ ಎಲ್ಲಾ ಜಾತಿ, ವರ್ಗ ಈ ನೇಕಾರ ವೃತ್ತಿ ಅವಲಂಬಿಸಿರುವ ಪುಟ್ಟ ಕಲ್ಲೂರು ಗ್ರಾಮ ಜಾತ್ಯತೀತತೆಯನ್ನು ಎತ್ತಿ ಹಿಡಿದಿದೆ. ಗ್ರಾಹಕರನ್ನು ಆಕರ್ಷಿಸುತ್ತಿರುವ ಕಲ್ಲೂರು ಸೀರೆ ಶೋ ರೂಂ ಗಳಲ್ಲಿ ಮತ್ತೊಂದು ವಿಶೇಷ ಕಾಣಬಹುದಾಗಿದೆ. ಅದು ಕಂಪ್ಯೂಟರ್ ವಿನ್ಯಾಸಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ ಎಂದು ಸ್ಥಳೀಯ ನೇಕಾರರ ಸಹಕಾರ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ ತಿಳಿಸಿದರು.
ಕೈಮಗ್ಗದ ಸೀರೆ ನಂತರದಲ್ಲಿ ವಿದ್ಯುತ್ ಚಾಲಿತ ಮಗ್ಗಗಳು ತಲೆ ಎತ್ತಿದಂತೆ ಆಧುನಿಕ ಸ್ಪರ್ಶ ಕಂಡು ರೇಷ್ಮೆ ಸೀರೆಗೆ ಬೆಳ್ಳಿ ಮತ್ತು ಬಂಗಾರದ ಜರಿ ಅಳವಡಿಸಿ ಸೀರೆಗೆ ಅದ್ದೂರಿತನ ಕಂಪ್ಯೂಟರ್ ಮೂಲಕ ಸಿದ್ದ ಪಡಿಸುತ್ತೇವೆ. ದೊಡ್ಡ ಶೋ ರೂಂಗಳ ಜೊತೆ ಕರಾರು ಮಾಡಿಕೊಳ್ಳುತ್ತಿದ್ದ ನಮ್ಮ ನೇಕಾರರು ಈಗ ತಮ್ಮದೇ ಉದ್ದಿಮೆ ನಡೆಸುತ್ತಿದ್ದಾರೆ. ಸೀರೆಗೆ ಸಿದ್ದ ಪಡಿಸುವ ವಿನ್ಯಾಸ ಯಾರೋ ಕಾಪಿ ಮಾಡದಂತೆ ಎಚ್ಚರಿಕೆ ವಹಿಸುವ ನೇಕಾರರು ನಿತ್ಯ ಹೊಸ ಹೊಸ ಡಿಸೈನ್ ಸಿದ್ಧಪಡಿಸುತ್ತಾರೆ. ಹೊರ ರಾಜ್ಯದ ರೇಷ್ಮೆ ಸೀರೆಗೆ ಮರುಳಾಗುವ ಮುನ್ನ ಸ್ಥಳೀಯ ನೇಕಾರರ ಶ್ರಮಕ್ಕೆ ಫಲ ಸಿಗಬೇಕು. ಗರಿಷ್ಠ ಬೆಲೆ 50 ಸಾವಿರ ರೂಗಳವರೆಗೆ ಕಲ್ಲೂರು ಸೀರೆ ಸಿಗಲಿದೆ. ಇನ್ನೂ ವೈಭವಕ್ಕೆ ಆರ್ಡರ್ ಕೊಟ್ಟು ಸೀರೆ ಸಿದ್ಧಪಡಿಸಿಕೊಳ್ಳಬಹುದು ಎಂದು ಕೆ.ಪಿ.ಕೌಶಿಕ್ ಸಿಲ್ಕ್ಸ್ ಮಾಲೀಕ ಕೆ.ಎನ್. ಪುರುಷೋತ್ತಮ್ ವಿವರಿಸಿದರು.
ಕಲ್ಲೂರು ನೇಕಾರರ ಒಗ್ಗಟ್ಟು ಪ್ರದರ್ಶನಕ್ಕೆ ಸಹಕಾರ ಸಂಘವನ್ನು ಕಟ್ಟಿಕೊಂಡು ಶೈಕ್ಷಣಿಕ ಹಾಗೂ ಆರ್ಥಿಕ ನೆರವು ನೀಡಿ ನೇಕಾರರ ಕುಟುಂಬವನ್ನು ಕಾಪಾಡುವ ಕೆಲಸ ಮಾಡುತ್ತಿದೆ. ಇಲ್ಲಿನ ಎಲ್ಲಾ ನೇಕಾರರು ನೇಯ್ದ ಸೀರೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಗ್ರಾಹಕರು ಕಲ್ಲೂರಿನತ್ತ ಸೆಳೆಯುವ ಕೆಲಸ ಎಲ್ಲರೂ ಒಗ್ಗೂಡಿ ಮಾಡುತ್ತಿರುವುದು ಉದ್ದಿಮೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9483714441, 9036167234, 7760151928, 9740570962, 9741066124, ಸಂಪರ್ಕಿಸಬಹುದಾಗಿದೆ.