ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿ ಕಲ್ಲೂರು ಕೆರೆಯ ಕೋಡಿಯಲ್ಲಿ ಕೈಕಾಲು ತೊಳೆಯಲು ಹೋದ ಇಬ್ಬರು ವ್ಯಕ್ತಿಗಳು ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿ ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಗಳ ಸರ್ಕಾರದ ಪರಿಹಾರ ಆದೇಶವನ್ನು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ವಿತರಿಸಿದರು.
ಕಳೆದ ಹದಿಮೂರು ದಿನದ ಹಿಂದೆ ಸುರಿದ ಬಾರಿ ಮಳೆಗೆ ಕಲ್ಲೂರು ಕೆರೆಯ ಕೋಡಿ ತುಂಬಾ ರಭಸವಾಗಿ ಹರಿಯುತ್ತಿತ್ತು. ಕಲ್ಲೂರು ನಿವಾಸಿಗಳಾದ ಹನುಮಂತರಾಜು ಹಾಗೂ ನಟರಾಜು ಕೋಡಿಯಲ್ಲಿ ಕೈಕಾಲು ತೊಳೆಯಲು ಹೋಗಿ ಕೊಚ್ಚಿ ಹೋಗಿದ್ದು ಎರಡು ದಿನಗಳ ಬಳಿಕ ಇಬ್ಬರ ಶವ ಬಿಳಿನಂದಿ ಗ್ರಾಮದ ಬಳಿ ದೊರಕಿತ್ತು. ಮೃತರ ಕುಟಂಬಸ್ಥರಿಗೆ ಸಾಂತ್ವನ ಹೇಳಿದ್ದ ಶಾಸಕರು ತುರ್ತು ಪರಿಹಾರ ಒದಗಿಸುವ ಭರವಸೆ ನೀಡಿ ಸರ್ಕಾರದ ಜೊತೆ ಮಾತನಾಡಿ ತಲಾ ಐದು ಲಕ್ಷ ಚೆಕ್ ಆದೇಶ ಪ್ರತಿಯನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತುರುವೇಕೆರೆ ಕ್ಷೇತ್ರದ ಎಲ್ಲಾ ಕೆರೆಕಟ್ಟೆಗಳು ತುಂಬಿದ್ದು, ಸಾರ್ವಜನಿಕರ ನಿರ್ಬಂಧ ಹೇರಿ ಹಲವೆಡೆ ಬ್ಯಾನರ್, ಬ್ಯಾರಿಗೇಟ್ ಅಳವಡಿಸುವ ಕೆಲಸ ನಡೆದಿದೆ. ಕಲ್ಲೂರು ಕೆರೆಯ ಕೋಡಿಗೆ ತಡೆಗೋಡೆ ನಿರ್ಮಾಣಕ್ಕೆ ಮೃತರ ಕುಟುಂಬ ಆಗ್ರಹಿಸಿದ ಹಿನ್ನಲೆ ಶೀಘ್ರದಲ್ಲಿ ತಡೆ ಗೋಡೆ ಕಾರ್ಯ ನಡೆಯಲಿದೆ ಎಂದರು.
ಆರೋಗ್ಯ ಸಚಿವರೊಟ್ಟಿಗೆ ಚರ್ಚಿಸಿ ಕಲ್ಲೂರು ಆರೋಗ್ಯ ಕೇಂದ್ರ ಕಟ್ಟಡಕ್ಕೆ 3.5 ಕೋಟಿ ರುಗಳ ವಿಶೇಷ ಅನುದಾನಕ್ಕೆ ರೂಗಳ ಬೇಡಿಕೆ ಇಟ್ಟಿದ್ದು, ಶೀಘ್ರದಲ್ಲಿ ಅನುದಾನ ಬರಲಿದೆ. ಸದ್ಯ ಬಂದಿರುವ 40 ಲಕ್ಷ ರೂಗಳ ಕೆಲಸ ಚಾಲನೆ ಆಗಲಿದೆ. ಈ ಜೊತೆಗೆ ಸಿ.ಎಸ್.ಪುರ ನಾಡ ಕಚೇರಿ ಕಟ್ಟಡಕ್ಕೆ 8 ಲಕ್ಷ ರೂಗಳನ್ನು ಸಿದ್ಧವಿದೆ. ಈ ಕೆಲಸ ಸಹ ಶೀಘ್ರದಲ್ಲಿ ಆರಂಭವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಆರತಿ, ಗ್ರಾಪಂ ಅಧ್ಯಕ್ಷೆ ಸುಮಿತ್ರಾ, ಮುಖಂಡರಾದ ಸದಯ್ಯ, ರಾಜೇಗೌಡ, ಮೋಹನ್, ನಾಗರಾಜು, ಗಿರೀಶ್, ಪಿಡಿಓ ಗಂಗಹನುಮಯ್ಯ ಇತರರು ಇದ್ದರು.