ತಿಪಟೂರು : ಅಜ್ಞಾನವೆಂಬ ಕತ್ತಲನ್ನು ಕಳೆದು ಬದುಕಿನಲ್ಲಿ ಸುಜ್ಞಾನವೆಂಬ ಜ್ಯೋತಿಯನ್ನು ಬೆಳಗಿಸುವ ಹಬ್ಬ ದೀಪಾವಳಿ. ಪ್ರತಿಯೊಬ್ಬರ ಮನಸ್ಸಿನಲ್ಲಿರುವಂಹ ಕೆಟ್ಟ ಭಾವನೆ, ಅಲೋಚನೆಗಳನ್ನು ಹೋಗಲಾಡಿಸಿ ಉತ್ತಮ ಯೋಜನೆಗಳು ಮೂಡಿ ಪ್ರತಿಯೊಬ್ಬರು ಸನ್ಮಾರ್ಗದಲ್ಲಿ ನಡೆಯುವಂತಾಗಬೇಕಿದೆ ಎಂದು ಆದಚುಂಚನಗಿರಿ ಶಾಖಾ ಮಠ ದಸರೀಘಟ್ಟದ ಚೌಡೇಶ್ವರಿ ದೇವಿ ದೇವಾಲಯದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ದಸರೀಘಟ್ಟದ ಆದಚುಂಚನಗಿರಿ ಶಾಖಾ ಮಠದ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ದೀಪಾವಳಿ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿ ಕಾರ್ತಿಕ ದೀಪೋತ್ಸವದ ವಿಶೇಷ ಪೂಜೆಯನ್ನು ನೆರೆವೇರಿಸಿ ಆಶೀರ್ವಚನ ನೀಡಿದ ಸ್ವಾಮೀಜಿ, ದೀಪವು ಜ್ಞಾನ, ಸತ್ಯ, ಶಾಂತಿ, ನೈರ್ಮಲ್ಯ ಹಾಗೂ ಸತ್ವಗಳ ಸಂಕೇತವಾಗಿದೆ. ಪ್ರತಿಯೊಬ್ಬ ಮಾನವನಲ್ಲಿಯೂ ನಾನತ್ವದ ಗುಣ, ದುರಾಸೆಯ ಗುಣ ತನಗೆ ಅರಿವಿಲ್ಲದಂತೆ ಇರುತ್ತದೆ. ಅಂತಹ ದುರ್ಗುಣಗಳನ್ನು ಹೋಗಲಾಡಿಸಿ ಸದ್ಗುಣಗಳನ್ನು ಕರುಣಿಸುವ ಹಬ್ಬವೇ ದೀಪಾವಳಿಯಾಗಿದೆ. ಮಾನವ ವೈಜ್ಞಾನಿಕವಾಗಿ ಪ್ರಗತಿ ಸಾಧಿಸಿದಾಗಿನಿಂದ ಕೆಲವರು ನಾವು ದೇವರನ್ನು ನಂಬುವುದಿಲ್ಲ, ಯಾವುದೇ ಆಚರಣೆಗಳನ್ನು ಮಾಡುವುದಿಲ್ಲ ಎಂದೆಲ್ಲ ಬೊಬ್ಬೆ ಹೊಡೆಯುತ್ತಾರೆ. ಹಬ್ಬವನ್ನು, ಆಚರಣೆಯನ್ನು ನಿರಾಕರಿಸಿದರೆ ಅದರ ಹಿಂದಿನ ಸುಂದರ ಆಶಯ, ಉದಾತ್ತ ಉದ್ದೇಶವನ್ನು ನಿರಾಕರಿಸಿದಂತೆ. ಅದ್ದರಿಂದ ಮೊದಲು ಹಬ್ಬದ ಹಿನ್ನೆಲೆ ಆಚರಣೆ, ವಿಚಾರಗಳನ್ನು ತಿಳಿದು ನಡೆಯುವುದು ಸೂಕ್ತವಾಗಿದೆ. ನಾಡಿನಲ್ಲಿ ಉಂಟಾಗಿರುವ-ಉಂಟಾಗಲಿರುವ ಕೆಟ್ಟ ಶಕ್ತಿಗಳನ್ನು ಮಟ್ಟಹಾಕಿ ಶಾಂತಿ, ನೆಮ್ಮದಿಗಾಗಿ ಇಂತಹ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಭಾರತೀಯ ಪರಂಪರೆಯಲ್ಲಿ ಶತ್ರುಗಳನ್ನು, ಭ್ರಷ್ಟಾಚಾರಿಗಳನ್ನು ಮತ್ತು ದೌರ್ಜನ್ಯ ನಡೆಸುವವರನ್ನು ಸದೆಬಡಿದು ದೇಶಕ್ಕೆ, ಸಮಾಜದ ಒಳತಿಗಾಗಿ ದೇವರು, ದೇವತೆಗಳನ್ನು ಪೂಜಿಸುವ ಮೂಲಕ ಒಳಿತನ್ನು ಆಶಿಸುವ ಈ ಸಂದರ್ಭದಲ್ಲಿ ಮಾನವ ಕುಲಕ್ಕೆ ಯಾವುದೇ ಕೆಡುಕುಂಟಾಗದೆ ಒಳ್ಳೆಯದಾಗಲಿ ಎಂದರು.
ಈ ಸಂದರ್ಭದಲ್ಲಿ ಚೌಡೇಶ್ವರಿ ದೇವಿ ಹಾಗೂ ಕರಿಯಮ್ಮ ದೇವಿಯವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ದೇವಾಲಯದ ಗುಡಿಗೌಡರು ಕುಮಾರಸ್ವಾಮಿ, ಮಾಜಿ ಗ್ರಾ.ಪಂ.ಸದಸ್ಯ ಮೋಹನ್, ಕೃಷ್ಣ ಸ್ವಾಮಿ, ರಂಗಪ್ಪ, ರಂಗಸ್ವಾಮಿ ಸೇರಿದಂತೆ ಗ್ರಾಮಸ್ಥರು, ಭಕ್ತಾಧಿಗಳು ಇದ್ದರು.