ಗುಬ್ಬಿ: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪನೆ ಹಿನ್ನಲೆ ರಾಜ್ಯದಲ್ಲೆಡೆ ಪವಿತ್ರ ಮೃತಿಕೆ ಸಂಗ್ರಹ ಯಾತ್ರೆ ನವಂಬರ್ 2 ರಿಂದ 4 ವರೆಗೆ ಮೂರು ದಿನಗಳ ಕಾಲ ಗುಬ್ಬಿ ತಾಲ್ಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಮುಟ್ಟಲಿದೆ. ಈ ಹಿನ್ನಲೆ ಎಲ್ಲಾ ಗ್ರಾಮ ಪಂಚಾಯಿತಿ ಪಿಡಿಒಗಳು ಸಕಲ ಸಿದ್ದತೆ ಮಾಡುವಂತೆ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ತಹಶೀಲ್ದಾರ್ ಬಿ.ಆರತಿ ಹಾಗೂ ತಾಪಂ ಇಓ ಶಿವಪ್ರಕಾಶ್ ಅವರ ನೇತೃತ್ವದಲ್ಲಿ ತಾಲ್ಲೂಕು ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆ ನಡೆಯಿತು. ನವಂಬರ್ 2 ರಂದು ಕೊಂಡ್ಲಿ ಗ್ರಾಮ ಪಂಚಾಯಿತಿ ಮೂಲಕ ತಾಲ್ಲೂಕಿಗೆ ಸ್ವಾಗತ ಕೋರಲಾಗುವುದು. ನಂತರ ದೊಡ್ಡಗುಣಿ, ಮಾರಶೆಟ್ಟಿಹಳ್ಳಿ, ತ್ಯಾಗಟೂರು, ಎಂ.ಎನ್.ಕೋಟೆ, ಅಳಿಲುಘಟ್ಟ, ಹೊಸಕೆರೆ, ಶಿವಪುರ, ಹಾಗಲವಾಡಿ, ಮಂಚಲದೊರೆ, ಅಂಕಸಂದ್ರ, ನಲ್ಲೂರು ಮೂಲಕ ಚೇಳೂರು ತಲುಪಿ ಅಲ್ಲಿಯೇ ರಾತ್ರಿ ತಂಗಲಿದೆ. ನವಂಬರ್ 3 ರಂದು ಬೆಳಿಗ್ಗೆ 8 ಕ್ಕೆ ಇರಕಸಂದ್ರ, ಬಿದರೆ, ನಿಟ್ಟೂರು, ಬೆಲವತ್ತ, ಹೇರೂರು, ಗುಬ್ಬಿ ಪಟ್ಟಣ, ಅಮ್ಮನಘಟ್ಟ, ಎಂ.ಎಚ್.ಪಟ್ಟಣ, ಅಡಗೂರು, ಜಿ.ಹೊಸಹಳ್ಳಿ, ಎಸ್. ಕೊಡಗೀಹಳ್ಳಿ, ಕೊಪ್ಪ, ಕುನ್ನಾಲ ಪಂಚಾಯಿತಿ ಮುಗಿಸಿ ಕೆ.ಜಿ.ಟೆಂಪಲ್ ದೇವಾಲಯದ ಬಳಿ ರಾತ್ರಿ ತಂಗುವುದು ಎಂದು ವಿವರಿಸಿದರು.
ನವಂಬರ್ 4 ರಂದು ಬೆಳಿಗ್ಗೆ 8 ಕ್ಕೆ ಬ್ಯಾಡಿಗೆರೆ, ಕಡಬ, ಪೆದ್ದನಹಳ್ಳಿ, ಕಲ್ಲೂರು, ಸಿ.ಎಸ್.ಪುರ, ಹಿಂಡಿಸಿಗೆರೆ, ಮಾವಿನಹಳ್ಳಿ, ಚಂಗಾವಿ, ಇಡಗೂರು ಮೂಲಕ ಕುಣಿಗಲ್ ತಾಲ್ಲೂಕಿಗೆ ಬೀಳ್ಕೊಡುವ ಕಾರ್ಯ ನಡೆಯಲಿದೆ. ಈ ಸಂದರ್ಭದಲ್ಲಿ ಐತಿಹಾಸಿಕ ಪ್ರಸಿದ್ಧ ಕ್ಷೇತ್ರದಿಂದ ಮಣ್ಣು ಸಂಗ್ರಹಿಸಿ ಯಾತ್ರೆಗೆ ಸಮರ್ಪಿಸಲಾಗುವುದು. ಈ ರಥ ಸಮಯದಲ್ಲಿ ಆಯಾ ಪಂಚಾಯಿತಿಯಲ್ಲಿ ಪೂರ್ಣ ಕುಂಭ ಸ್ವಾಗತ ಮಾಡುವ ಜೊತೆಗೆ ಮೆರವಣಿಗೆಯಲ್ಲಿ ಕಲಾ ತಂಡಗಳ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಯಿತು. ಸ್ಥಳೀಯ ಚುನಾಯಿತ ಪ್ರತಿನಿಧಿಗಳ ಆಹ್ವಾನ ಮಾಡುವ ಕೆಲಸ ಮಾಡುವಂತೆ ಸಹ ತಿಳಿಸಲಾಯಿತು.
ಸಭೆಯಲ್ಲಿ ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಸಿಡಿಪಿಓ ಮಂಜುನಾಥ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ ಸೇರಿದಂತೆ ಎಲ್ಲಾ ಪಿಡಿಓಗಳು ಇದ್ದರು.