ಗುಬ್ಬಿ: ಕನ್ನಡ ರಾಜ್ಯೋತ್ಸವ ಹಿನ್ನಲೆ ಸರ್ಕಾರ ಆದೇಶದಂತೆ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಆಯೋಜನೆ ಮಾಡಲಾಗಿತ್ತು.
ಎರಡು ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮಕ್ಕೆ ನೊಂದಾಯಿಸಿಕೊಂಡು ನಡೆದ ಸಾಮೂಹಿಕ ಗಾಯನಕ್ಕೆ ತಹಶೀಲ್ದಾರ್ ಬಿ.ಆರತಿ ಚಾಲನೆ ನೀಡಿ ಕನ್ನಡ ನಾಡ ಪ್ರೇಮ ಬಿಂಬಿಸುವ ಜೊತೆಗೆ ಮಾತೃಭಾಷೆ ಅಭಿಮಾನ ವ್ಯಕ್ತ ಪಡಿಸುವ ಆರು ಹಾಡುಗಳು ಇಂದು ಎಲ್ಲರೂ ಹಾಡಲಿದ್ದಾರೆ. ಸಾರ್ವಜನಿಕರು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚು ಭಾಗವಹಿಸಿ ನಾಡ ಪ್ರೇಮ ವ್ಯಕ್ತಪಡಿಸಬಹುದು ಎಂದರು.
ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ ಮಾತನಾಡಿ ಸಾಮೂಹಿಕ ಗಾಯನದಲ್ಲಿ ಹಾಡುವ ಗೀತೆಗಳು ನಾಡು ಕಂಡ ಪ್ರಸಿದ್ದ ಕವಿಗಳು ಬರೆದ ಹಾಡುಗಳಾಗಿವೆ. ಮಾತೃ ಭಾಷೆ ಮೇಲಿನ ಅಭಿಮಾನ ಹೆಚ್ಚಿಸುವ ಈ ಹಾಡುಗಳು ನಮ್ಮ ಜೀವನದಲ್ಲಿ ಹಾಸುಹೊಕ್ಕಗಿ ಇರಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ ಕನ್ನಡ ಭಾಷಾಭಿಮಾನ ವ್ಯಕ್ತ ಪಡಿಸಲು ಮಕ್ಕಳಿಗೆ ಈ ವೇದಿಕೆ ಸೂಕ್ತವಾಗಿದೆ. ಈ ನಿಟ್ಟಿನಲ್ಲಿ ಪಟ್ಟಣದ ಎಲ್ಲಾ ಶಾಲೆಯ ವಿದ್ಯಾರ್ಥಿಗಳನ್ನು ಗಾಯನಕ್ಕೆ ಸಿದ್ದಪಡಿಸಿ ಕರೆ ತಂದಿರುವುದಾಗಿ ತಿಳಿಸಿದರು.
ಪಪಂ ಸದಸ್ಯರಾದ ಜಿ.ಆರ್.ಶಿವಕುಮಾರ್, ಮಹಮದ್ ಸಾದಿಕ್, ಜಿ.ಸಿ.ಕೃಷ್ಣಮೂರ್ತಿ, ಸವಿತಾ.ಎಸ್.ಗೌಡ, ಪ್ರಕಾಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿಂದುಮಾಧವ, ಬೆಸ್ಕಾಂ ಎಇಇ ಕರಿಯಪ್ಪ, ಸಿಡಿಪಿಓ ಮಂಜುನಾಥ್, ಗುಬ್ಬಿ ಹಿತ ರಕ್ಷಣಾ ಸಮಿತಿಯ ಎಚ್.ಡಿ.ಯಲ್ಲಪ್ಪ, ಸಿ.ಆರ್.ಶಂಕರ್ ಕುಮಾರ್ ಇತರರು ಇದ್ದರು.