ನ.1 ರಿಂದ ರೈತರಿಗೆ ಪ್ರತಿ ಲೀ. ಹಾಲಿಗೆ 2.50 ರೂ.ಗಳ ವಿಶೇಷ ಪ್ರೋತ್ಸಾಹ ಧನ ಹೆಚ್ಚಳ

ತುಮಕೂರುವ: ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ರೈತರ ಬೇಡಿಕೆಗೆ ಸ್ಪಂದಿಸಿ ನವೆಂಬರ್ 1 ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ಪ್ರೋತ್ಸಾಹ ಧನವಾಗಿ 2.50 ರೂ.ಗಳನ್ನು ಹೆಚ್ಚಳ ಮಾಡಲು ನಿರ್ಧರಿಸಿದೆ.

ನಗರದ ಹೊರವಲಯದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಕಚೇರಿಯಲ್ಲಿ ತುಮುಲ್ ನಿರ್ದೇಶಕರುಗಳಾದ ಎಂ.ಕೆ. ಪ್ರಕಾಶ್, ಕೊಂಡವಾಡಿ ಚಂದ್ರಶೇಖರ್. ಹೆಚ್.ಬಿ. ಶಿವನಂಜಪ್ಪ, ಜಿ. ಚಂದ್ರಶೇಖರ್, ಹೆಚ್.ಕೆ. ರೇಣುಕಪ್ರಸಾದ್, ಎಸ್.ಆರ್. ಗೌಡ, ಚನ್ನಮಲ್ಲಪ್ಪ, ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ರಜನಿ ಬಿ ತ್ರಿಪಾಠಿ, ಹೆಚ್.ಕೆ. ರಾಘವೇಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಪಿ. ಸುರೇಶ್ ಅವರೊಂದಿಗೆ ಗುರುವಾರ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.

ಸಭೆಯ ನಂತರ ಪತ್ರಿಕಾ ಹೇಳಿಕೆ ನೀಡಿರುವ ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ ಅವರು, ಜಿಲ್ಲೆಯಲ್ಲಿ ಅತಿವೃಷ್ಠಿ, ಮೇವಿನ ಕೊರತೆ, ಜಾನುವಾರುಗಳಲ್ಲಿ ಕಂಡು ಬಂದಿರುವ ಚರ್ಮದ ಗಂಟು ರೋಗದಿಂದ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡ ಒಕ್ಕೂಟವು ನವೆಂಬರ್ 1 ರಿಂದ ಹಾಲಿನ ದರ ಹೆಚ್ಚಿಸಿ ಉತ್ಪಾದಕರಿಗೆ ನೇರವಾಗಿ ಪ್ರತಿ ಲೀಟರ್ ಹಾಲಿಗೆ 2.50 ರೂ.ನಂತೆ ವಿಶೇಷ ಪ್ರೋತ್ಸಾಹ ಧನ ನೀಡಲು ತೀರ್ಮಾನ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಆದರೆ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚುವರಿ ಇರುವುದಿಲ್ಲ. 3.5 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 30 ರೂ., ಸಂಘಗಳಿಗೆ 30.93 ರೂ. ಹಾಗೂ 41 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 31.54 ರೂ., ಸಂಘಗಳಿಗೆ 32.47 ರೂ.ಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

ತುಮಕೂರು ಸಹಕಾರಿ ಹಾಲು ಒಕ್ಕೂಟವು 1299 ಸಂಘಗಳಿಂದ 2022-23ನೇ ಸಾಲಿನಲ್ಲಿ ದಿನವಹಿ ಸರಾಸರಿ (26ನೇ ಅಕ್ಟೋಬರ್-2022ರ ಅಂತ್ಯಕ್ಕೆ) 8,15,568 ಕೆ.ಜಿ. ಹಾಲನ್ನು ಶೇಖರಣೆ ಮಾಡಲಾಗಿದ್ದು, 2022ರ ಜೂನ್ 29ರಂದು 9,31,684 ಕೆ.ಜಿ. ಹಾಲು ಶೇಖರಿಸಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಈಗಾಗಲೇ ಹಾಲು ಶೇಖರಣೆ ದಿನೇ ದಿನೇ ಕುಂಠಿತವಾಗುತ್ತಿದ್ದು, 26ನೇ ಅಕ್ಟೋಬರ್ 2022ರ ಅಂತ್ಯಕ್ಕೆ ಸರಾಸರಿ 7,41,435 ಕೆ.ಜಿ ಹಾಲು ಶೇಖರಣೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 1299 ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು, ವ್ಯಾಪ್ತಿಯ ಸಂಘಗಳಲ್ಲಿ ಒಟ್ಟು 2,86,712 ಜನ ಸದಸ್ಯರಿರುತ್ತಾರೆ. ಇದರಲ್ಲಿ ಪ್ರತಿದಿನ 71,703 ಸಕ್ರಿಯ ಸದಸ್ಯರು ಹಾಲು ಸರಬರಾಜು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಒಕ್ಕೂಟದಲ್ಲಿ 2022 ಅಕ್ಟೋಬರ್ 26ರ ಅಂತ್ಯಕ್ಕೆ 167.42 ಮೆಟ್ರಿಕ್ ಟನ್ ಬೆಣ್ಣೆ, 243 ಮೆಟ್ರಿಕ್ ಟನ್ ಕೆನೆ ರಹಿತ ಹಾಲಿನ ಪುಡಿ ಹಾಗೂ 72.40 ಮೆಟ್ರಿಕ್ ಟನ್‌ಗಳಷ್ಟು ಕೆನೆಭರಿತ ಹಾಲಿನ ಪುಡಿ ದಾಸ್ತಾನು ಇದ್ದು, ಇದರ ಅಂದಾಜು ದಾಸ್ತಾನು ಮೌಲ್ಯ 13.69 ಕೋಟಿ ರೂ.ಗಳಷ್ಟಾಗಲಿದೆ ಎಂದರು.

2021-22ನೇ ಸಾಲಿನಲ್ಲಿ ಷೇರು ಡಿವಿಡೆಂಟ್ ಮೊತ್ತ 2,01,59,357.89 ರೂ.ಮತ್ತು ಬೋನಸ್ ಮೊತ್ತ 36,65,338 ರೂ. ಸೇರಿದಂತೆ ಒಟ್ಟು 2,38,24,695,89 ರೂ. ಮೊತ್ತವನ್ನು ಸಂಘಗಳಿಗೆ ಪಾವತಿಸಲಾಗುವುದು. ಕೇಂದ್ರ ಸರ್ಕಾರದ ದುಡಿಯುವ ಬಂಡವಾಳ ಯೋಜನೆಯಡಿ ಒಕ್ಕೂಟವು 90 ಕೋಟಿ ರೂ. ಮೊತ್ತವನ್ನು ಶೇ.5.7ರ ಬಡ್ಡಿದರದಲ್ಲಿ ಸಾಲ ಪಡೆದಿದ್ದು, ರೈತರಿಗೆ ಕಾಲಕಾಲಕ್ಕೆ ಬಟವಾಡೆ ಪಾವತಿಸಲಾಗುತ್ತಿದೆ. ಏಪ್ರಿಲ್ 2021ರ ಪ್ರಾರಂಭಿಕ ಸಾಲ 5.85 ಕೋಟಿ ರೂ. ಇದ್ದು, 2021-22ನೇ ಸಾಲಿನಲ್ಲಿ 143.55 ಕೋಟಿ ರೂ. ಸಾಲ ಪಡೆಯಲಾಗಿದ್ದು, 2021-22 ಮತ್ತು 2022-23ನೇ ಸಾಲಿನಲ್ಲಿ ಸಂಪೂರ್ಣ ಸಾಲವನ್ನು ತೀರುವಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಒಕ್ಕೂಟದಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಿಕೊಂಡಿರುವುದರಿಂದ ಮತ್ತು ಮಾರುಕಟ್ಟೆ ವಿಸ್ತರಣೆಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಅಧಿಕ ಹಾಲು ಶೇಖರಣೆಯಾದರೂ ಸಹ ಡೇರಿಯ ನಿರ್ವಹಣೆಗೆ ಯಾವುದೇ ತೊಂದರೆಯಾಗಿಲ್ಲ. ಹಾಲು ಉತ್ಪಾದಕರಿಗೆ ಕಾಲಕಾಲಕ್ಕೆ ಬಟವಾಡೆ, ದೊರೆಯಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಹಾಲು ಉತ್ಪಾದಕರು ಈ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ತಾವು ಸಹ ಆರ್ಥಿಕವಾಗಿ ಸದೃಢವಾಗುವುದಲ್ಲದೇ ಒಕ್ಕೂಟದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ವಿವರಿಸಿದ್ದಾರೆ.

ಒಕ್ಕೂಟವು ನೀಡುತ್ತಿರುವ ಹಾಲಿನ ದರದ ಜತೆಗೆ ಸರ್ಕಾರದ ೫ ರೂ.ಗಳ ಪ್ರೋತ್ಸಾಹ ಧನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಹಾಲು ಉತ್ಪಾದನೆ ಮಾಡಲು ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲು ಸರಬರಾಜು ಮಾಡಲು ಜಿಲ್ಲೆಯ ರೈತರಲ್ಲಿ ಮನವಿ ಮಾಡುವುದಾಗಿ ಹೇಳಿದ್ದಾರೆ.

ಒಕ್ಕೂಟದಲ್ಲಿ ಮಾರಾಟದ ಜಾಲವನ್ನು ವಿಸ್ತರಿಸಲಾಗಿದ್ದು, ತುಮಕೂರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ 2022-23ನೇ ಸಾಲಿನ ಅಕ್ಟೋಬರ್ 26ರ ಅಂತ್ಯಕ್ಕೆ 286812 ಲೀ. ಮತ್ತು ಆಗಸ್ಟ್ ೪ರಂದು 313816 ಲೀ. ಹಾಲನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಅದೇ ರೀತಿ ಮುಂಬೈ ಮಹಾನಗರದಲ್ಲಿ ಪ್ರಸ್ತುತ ದಿನವಹಿ ಸರಾಸರಿ 200800 ಲೀ. ಹಾಲು ಮಾರಾಟವಾಗುತ್ತಿದ್ದು, ಆಗಸ್ಟ್ ೮ರಂದು ಅತಿ ಹೆಚ್ಚು ಅಂದರೆ 239020 ಲೀ.ಹಾಲು ಮಾರಾಟವಾಗಿದೆ. 2022ರ ಸೆಪ್ಟೆಂಬರ್ ಮಾಹೆಯಲ್ಲಿ ಲಾಭ-ನಷ್ಟದ ತಃಖ್ತೆ ಪ್ರಕಾರ 2.20ಕೋಟಿ ರೂ. ಲಾಭವನ್ನು ಹೊಂದಿದ್ದು, 2022-23ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ 3.48 ಕೋಟಿ ರೂ. ಗಳ ಕ್ರೋಢೀಕೃತ ನಿವ್ವಳ ಲಾಭವನ್ನು ಒಕ್ಕೂಟ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!