ಗುಬ್ಬಿ: ತಾಲ್ಲೂಕಿನ ಹಾಗಲವಾಡಿ ಹೋಬಳಿ ಹೊಸಕೆರೆ ಗ್ರಾಪಂ ವ್ಯಾಪ್ತಿಯ ಹೊಸಕೆರೆ-2 ಕ್ಷೇತ್ರದ ಸಾಮಾನ್ಯ ಮೀಸಲಿನ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಫಲಿತಾಂಶ ಅಕ್ರಮವಾಗಿದೆ ಎಂದು ಪ್ರಶ್ನಿಸಿ ನ್ಯಾಯಾಲಯ ಮೆಟ್ಟಿಲೇರಿದ್ದ ಅರೇಹಳ್ಳಿ ನಟರಾಜು ಅವರ ಪರ ನ್ಯಾಯಾಲಯ ತೀರ್ಪು ನೀಡಿದ್ದು ಚುನಾವಣಾ ಶಾಖೆಯು ನಟರಾಜು ಅವರನ್ನು ಚುನಾಯಿತ ಸದಸ್ಯ ಎಂದು ಘೋಷಿಸಿ ಪ್ರಮಾಣ ಪತ್ರ ನೀಡಿದೆ.
ಹೊಸಕೆರೆ ಗ್ರಾಪಂ ವ್ಯಾಪ್ತಿಯ ಚುನಾವಣಾ ಸಂದರ್ಭದಲ್ಲಿ ಒಂದು ಮತದ ಅಂತರದಲ್ಲಿ ನಟರಾಜು ಸೋಲು ಕಂಡಿದ್ದರು. ಗೆಲುವು ಸಾಧಿಸಿದ್ದ ಎ.ಎನ್.ಅಜಯ್ ಕುಮಾರ್ ಅವರ ವಿಜಯ ಸರಿಯಿಲ್ಲ. ತಿರಸ್ಕೃತ ಮತಗಳನ್ನು ಎಣಿಕೆ ಮಾಡಿರುವ ಬಗ್ಗೆ ಪ್ರಶ್ನಿಸಿದ ಅರೇಹಳ್ಳಿ ನಟರಾಜು ಗುಬ್ಬಿ ಕೋರ್ಟ್ ನಲ್ಲಿ ಕಾನೂನು ಹೋರಾಟ ಮುಂದುವರೆಸಿ ಎರಡು ವರ್ಷದ ನಂತರ ನಟರಾಜು ಪರ ತೀರ್ಪು ಪ್ರಕಟಿಸಿದೆ. ನಂತರ ಜಿಲ್ಲಾ ನ್ಯಾಯಾಲಯದಲ್ಲಿ ತಡೆಯಾಜ್ಞೆ ಕೋರಿ ಎ.ಎನ್.ಅಜಯ್ ಕುಮಾರ್ ಸಲ್ಲಿಸಿದ ಅರ್ಜಿ ಸಹ ತಿರಸ್ಕೃತಗೊಂಡು ಅರೇಹಳ್ಳಿ ನಟರಾಜು ಅವರ ಗೆಲುವು ನ್ಯಾಯಯುತ ಎಂದು ಆದೇಶ ಹೊರಡಿಸಿತು. ಈ ಆದೇಶದ ಅನ್ವಯ ಚುನಾವಣಾ ಶಾಖೆ ಪ್ರಮಾಣಪತ್ರ ನೀಡಿದೆ.
ಇದೇ ಸಂದರ್ಭದಲ್ಲಿ ಆದೇಶ ಪ್ರತಿಯೊಂದಿಗೆ ಗ್ರಾಮಕ್ಕೆ ಆಗಮಿಸಿದ ಅರೇಹಳ್ಳಿ ನಟರಾಜು ಅವರನ್ನು ಪಟಾಕಿ ಸಿಡಿಸಿ ಸ್ವಾಗತಿಸಿದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಜಯಣ್ಣ, ಪಲ್ಲಕ್ಕಿ ರುದ್ರೇಶ್, ರಮೇಶ್, ಜಗದೀಶ್ ಬಳ್ಳಾರಿ ಇತರರು ಇದ್ದರು.
ವರದಿ: ಜಿ.ಆರ್.ರಮೇಶ್ ಗೌಡ, ಗುಬ್ಬಿ.