ಎಂ ಎಲ್ ಸಿ ರಾಜೇಂದ್ರ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲದವರು ಹೇಳಿಕೆ ನೀಡುವುದು ಹಾಸ್ಯಾಸ್ಪದ: ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಭರತ್ ಗೌಡ

ಗುಬ್ಬಿ: ಯಾವುದೇ ಚುನಾವಣೆಯಲ್ಲೂ ಪಕ್ಷ ನಿಷ್ಠೆ ತೋರಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅರ್ಹತೆ ಇಲ್ಲದವರು, ಪಕ್ಷದ ಟಿಕೆಟ್ ಆಕಾಂಕ್ಷಿಗಳು ಎಂದು ಬಿಂಬಿಸಿಕೊಳ್ಳವ ಗುಬ್ಬಿ ಕ್ಷೇತ್ರದ ಕೆಲವರು ಎಂ ಎಲ್ ಸಿ ರಾಜೇಂದ್ರ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಐವತ್ತು ಮಂದಿ ಹಿಂಬಾಲಕರನ್ನು ಹೊಂದಿಲ್ಲದ ಈ ಇಬ್ಬರು ಮುಖಂಡರು ಮಾತಿಗೆ ಬೆಲೆ ಇಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಬಿ.ಆರ್.ಭರತ್ ಗೌಡ ಟೀಕಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜೇಂದ್ರ ಅವರ ಮಾತುಗಳನ್ನು ತಿರುಚಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಗುಬ್ಬಿ ಶಾಸಕರು ಬಂದರೆ ಅವರಿಗೆ ಋಣ ತೀರಿಸುವ ಕೆಲಸ ಮಾಡಬೇಕಿದೆ ಎಂದಿದ್ದಾರೆ. ಸರಿಯಾಗಿ ಅರ್ಥೈಸಿ ಕೊಳ್ಳದ ಈ ಮುಖಂಡರು ಸಲ್ಲದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸಹ ಕೆ.ಎನ್.ರಾಜಣ್ಣ ಅವರ ಮಾತುಗಳನ್ನು ಹೀಗೆಯೇ ಬಿಂಬಿಸಿದ್ದರು ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಸಂಘಟನೆ ಬಲವಾಗಿದೆ. ಈ ಬಾರಿ ಸದೃಢಗೊಂಡ ಕಾಂಗ್ರೆಸ್ ಪಕ್ಷ ಹಾಳು ಮಾಡುವ ಗುಂಪು ಇದಾಗಿದೆ. ಆಕಾಂಕ್ಷಿಗಳೆಂದು ಹೇಳುವ ಇವರಲ್ಲಿ ಒಬ್ಬರು ಈಗಾಗಲೇ ಠೇವಣಿ ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಚುನಾವಣಾ ಸಮಯದಲ್ಲಿ ಉದ್ಭವವಾಗುತ್ತಾರೆ. ಎಂ ಎಲ್ ಸಿ ರಾಜೇಂದ್ರ ಅವರ ಗೆಲುವಿಗೆ ಈ ಮುಖಂಡರ ಸಹಕಾರ ಸಿಕ್ಕಿಲ್ಲ. ಯಾವುದೇ ಕೊಡುಗೆ ನೀಡಲಾಗದ ಇವರುಗಳು ಈ ಹಿಂದೆ 28 ಸಾವಿರ ಮತಗಳು ಕಂಡಿದ್ದ ಕಾಂಗ್ರೆಸ್ ತದ ನಂತರದಲ್ಲಿ ಹಂತ ಹಂತವಾಗಿ 18, 14 ಹೀಗೆ ಕುಸಿದಿದೆ. ಈ ಬಾರಿ ಸಂಘಟನೆ ಬಲವರ್ಧನೆಯಾಗಲಿದೆ ಎಂಬುದು ತಿಳಿದು ಈಗ ಸಲ್ಲದ ಹೇಳಿಕೆ ನೀಡುತ್ತಾ ಓಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಮುಖಂಡ ಇರಕಸಂದ್ರ ಪ್ರಭಣ್ಣ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಬರುವವರಿಗೆ ಸ್ವಾಗತ ಕೋರುವುದು ಪಕ್ಷದ ಮುಖಂಡರ ಕರ್ತವ್ಯ. ಈ ಹಿನ್ನಲೆ ಸ್ವಾಗತ ಕೋರುವ ಕೆಲಸ ಅಷ್ಟೇ ಮಾಡಿದ್ದಾರೆ. ಮುಂದಿನ ತೀರ್ಮಾನ ಹೈಕಮಾಂಡ್ ಮಾಡುತ್ತದೆ. ಪಕ್ಷದ ಸಿದ್ಧಾಂತ ತಿಳಿದು ಹೀಗೆ ಎಲ್ಲರ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ. ಪ್ರಸನ್ನ ಕುಮಾರ್ ಅವರು ರಾಜೇಂದ್ರ ಅವರ ಬಗ್ಗೆ ಮಾತನಾಡಿದ್ದು ಸರಿಯಲ್ಲ ಎಂದು ನೇರ ಟೀಕೆ ಮಾಡಿದರು.

ಈ ಸಂದರ್ಭದಲ್ಲಿ ನಿಟ್ಟೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭು, ಮಡೇನಹಳ್ಳಿ ದೊಡ್ಡಯ್ಯ, ಬೆಣಚಿಗೆರೆ ಕಾಂತರಾಜು, ಹಾಗಲವಾಡಿ ಫಣಿರಾಜ್, ಹೇರೂರು ಗುರು ಪ್ರಸಾದ್, ಯೂತ್ ಕಾಂಗ್ರೆಸ್ ನ ಸಾದಿಕ್, ಖಾದರ್, ಎಸ್ಟಿ ಸೆಲ್ ಜಿಲ್ಲಾ ಕಾರ್ಯದರ್ಶಿ ಪುರುಷೋತ್ತಮ್, ಎಸ್ಟಿ ಘಟಕದ ಮಾಜಿ ಅಧ್ಯಕ್ಷ ಹೇರೂರು ನಾಗರಾಜು, ರಾಮಚಂದ್ರಯ್ಯ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!