ಗುಬ್ಬಿ: ಪುನೀತ್ ರಾಜಕುಮಾರ್ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಗುಬ್ಬಿಯ ಶಾಂತ ಮೋಟಾರ್ಸ್ ಬೈಕ್ ಶೋ ರೂಂ ಮಾಲೀಕ ನಾಗೇಶ್ ಕ್ಯಾಂಡಲ್ ಹಚ್ಚಿ ಅನ್ನದಾನ ಮಾಡುವ ಮೂಲಕ ತಮ್ಮ ಅಭಿಮಾನ ವ್ಯಕ್ತಡಿಸಿದರು.
ಸಂಜೆ ಶೋ ರೂಂ ನಲ್ಲಿ ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು. ಈ ಪುಷ್ಪ ನಮನ ಕಾರ್ಯಕ್ರಮದಲ್ಲಿ ಗುಬ್ಬಿ ಪೊಲೀಸ್ ಠಾಣೆ ಸಿಬ್ಬಂದಿ ಕೂಡಾ ಪಾಲ್ಗೊಂಡಿದ್ದರು. ನಂತರ ಅನ್ನದಾನ ಸೇವೆ ಕೂಡಾ ಆಯೋಜಿಸಿ ಅಪ್ಪು ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶೋ ರೂಂ ಮಾಲೀಕ ನಾಗೇಶ್, ಅಪ್ಪು ಅವರ ಸಮಾಜ ಸೇವೆ ಶ್ಲಾಘನೀಯ. ಬಲಗೈನಲ್ಲಿ ಮಾಡಿದ ದಾನ ಎಡಗೈಗೆ ತಿಳಿಯಬಾರದು ಎನ್ನುವ ರೀತಿ ಬಡವರು, ದೀನ ದಲಿತರಿಗೆ ದಾನಧರ್ಮ ಮಾಡಿದ್ದಾರೆ. ಅನ್ನದಾನ ಜೊತೆ ವಿದ್ಯಾದಾನ ಶ್ರೇಷ್ಠ ಎನಿಸಿದೆ. ಕೋಟ್ಯಾಂತರ ಮಂದಿ ಅಭಿಮಾನಿ ಸಂಪಾದಿಸಿದ ಅಪ್ಪು ಅಮರರಾದ ಬಳಿಕ ದೇವರಾದರು ಎಂದರು.
ಪಪಂ ಸದಸ್ಯ ಶೋಕತ್ ಆಲಿ ಮಾತನಾಡಿ ಜಾತಿ ಧರ್ಮ ನೋಡದೆ ಎಲ್ಲಾ ಬಡ ಮಕ್ಕಳಿಗೆ ಶಿಕ್ಷಣ ನೀಡಿದ ಹೆಗ್ಗಳಿಕೆ ಪಡೆದ ಪುನೀತ್ ಅವರ ಸೇವೆ ಸ್ಮರಣೀಯ. ರಾಜ್ ಕುಮಾರ್ ಅವರ ವಂಶದಲ್ಲಿ ರಾಜನಂತೆ ಜನಮನ ಗೆದ್ದ ಅಪ್ಪು ಮೇಲಿನ ಅಭಿಮಾನ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಅವರ ಅಗಲಿಕೆ ಕೋಟ್ಯಾಂತರ ಮಂದಿಗೆ ನೋವು ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಕ್ಯಾಂಡಲ್ ಹಚ್ಚುವ ಮೂಲಕ ಬೆಳಕಿನ ಅರ್ಪಣೆ ಹಾಗೂ ಪುಷ್ಪ ನಮನ ಕಾರ್ಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗುಬ್ಬಿ ಪಿಎಸೈ ಮುತ್ತುರಾಜ್, ಪಿಎಸೈ ಬಾಬು.ಎಂ.ಕಿಲಾರಿ ಇನ್ನಿತರರು ಉಪಸ್ಥಿತರಿದ್ದರು.