ಗುಬ್ಬಿ: ಕಸಬಾ ಹೋಬಳಿ ಎಸ್. ಕೊಡಗೀಹಳ್ಳಿ ಗ್ರಾಮದ ಸರ್ವೆ ನಂಬರ್ 229 ರಲ್ಲಿ ಇರುವ ಸರ್ಕಾರಿ ಜಾಗ ಒತ್ತುವರಿ ಮಾಡಿ ತೆಂಗು ಅಡಕೆ ಬೆಳೆದಿದ್ದು ಅಲ್ಲದೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್. ಕೊಡಗೀಹಳ್ಳಿ ಗ್ರಾಮಸ್ಥರು ತಹಶೀಲ್ದಾರ್ ಬಿ.ಆರತಿ ಅವರಿಗೆ ಮನವಿ ಸಲ್ಲಿಸಿದರು.
ಐತಿಹಾಸಿಕ ಸ್ಥಳ ಗಾಣಗಿತ್ತಿ ಕಲ್ಲು ಪ್ರದೇಶದ ಆಜುಬಾಜು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ತೆಂಗು ಅಡಕೆ ತೋಟ ಮಾಡಿದ್ದಾರೆ. ಸಮೃದ್ದ ಜಲಮೂಲದ ಸ್ಥಳಗಳನ್ನು ಒತ್ತುವರಿ ಮಾಡಲಾಗಿದೆ. ಬಲಾಢ್ಯರ ಹಿನ್ನಲೆಯಲ್ಲಿ ನಡೆದಿರುವ ಒತ್ತುವರಿ ತೆರವು ತಾಲ್ಲೂಕು ಆಡಳಿತ ಮಾಡಬೇಕು. ಗ್ರಾಮದ ಕೆರೆಯ ರಾಜಕಾಲುವೆ ಸಹ ಒತ್ತುವರಿ ಆಗಿದೆ. ಕೆರೆಯ ನೀರಿನ ಮೂಲವೇ ಇಲ್ಲವಾಗಿದೆ. ಕೆರೆ ಸಂರಕ್ಷಣೆ ಮಾಡಿ ಕೆರೆಯ ಅಸ್ತಿತ್ವ ಉಳಿಸಬೇಕು. ಗ್ರಾಮಸ್ಥರಿಗೆ ಕುಡಿಯುವ ನೀರಿನ ಹಾಗೂ ಕೃಷಿಯ ಮೂಲದ ಕೆರೆ ಉಳಿಸಿ ಎಂದು ಸ್ಥಳೀಯ ಮುಖಂಡ ರಘು ನಂದನ್ ಆಗ್ರಹಿಸಿದರು.
ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಗಂಭೀರ ಕ್ರಮ ತಾಲ್ಲೂಕು ಆಡಳಿತ ಕೈಗೊಳ್ಳಬೇಕು. ಎಸ್. ಕೊಡಗೀಹಳ್ಳಿ ಗ್ರಾಮದ ಕೆರೆಯ ಎರಡೂ ಇಕ್ಕಲಿನಲ್ಲಿನ ರಾಜಕಾಲುವೆ ಒತ್ತುವರಿಯಾಗಿದೆ. ಇದರ ರಕ್ಷಣೆ ಮಾಡದಿದ್ದರೆ ಕೆರೆಗೆ ನೀರಿನ ಸೆಲೆಯೇ ಇಲ್ಲವಾಗುತ್ತದೆ. ಮೂಲತಃ ಸರ್ಕಾರಿ ಜಾಗವನ್ನು ಹುಡುಕಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಬೇಕು. ಈ ಬಗ್ಗೆ ಸ್ಥಳೀಯ ಗ್ರಾಮಸ್ಥರು ಒಮ್ಮತದ ನಿರ್ಣಯ ಕೈಗೊಂಡು ತಾಲ್ಲೂಕು ಆಡಳಿತವನ್ನು ಆಗ್ರಹಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳ ಮೂಲಕ ಸರ್ಕಾರದ ಗಮನಕ್ಕೂ ತರಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಬಸವರಾಜು, ಗಂಗಾಧರ್, ರಾಜಣ್ಣ, ಗಂಗಣ್ಣ, ಮಾಲಮ್ಮ, ಗಂಗಲಕ್ಷ್ಮಿ, ರಂಗಸ್ವಾಮಿ, ನಾರಾಯಣ, ದೊಡ್ಡನರಸಯ್ಯ, ಶಿವಕುಮಾರ್, ನಾಗರಾಜು ಇತರರು ಇದ್ದರು.