ಗುಬ್ಬಿ: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಹಿನ್ನಲೆ ಇಡೀ ರಾಜ್ಯದಲ್ಲಿ ಪವಿತ್ರ ಮೃತಿಕೆ ಸಂಗ್ರಹ ಮಾಡುವ ಭವ್ಯ ರಥ ಯಾತ್ರೆ ತಾಲ್ಲೂಕಿನಲ್ಲಿ ಎರಡನೇ ದಿನ ಸಂಚರಿಸುತ್ತಿದ್ದು ಅಮ್ಮನಘಟ್ಟ ಗ್ರಾಮ ಪಂಚಾಯಿತಿಗೆ ಆಗಮಿಸಿದ ವೇಳೆ ಗ್ರಾಮಸ್ಥರು ಪೂರ್ಣ ಕುಂಭ ಸ್ವಾಗತ ಕೋರಿದರು.
ಗ್ರಾಮ ಪಂಚಾಯಿತಿ ಕಚೇರಿಗೆ ಬಂದ ರಥವನ್ನು ಭವ್ಯ ಮೆರವಣಿಗೆಯಲ್ಲಿ ಶ್ರೀ ಕೆಂಪಮ್ಮದೇವಿ, ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ವೀರಭದ್ರಸ್ವಾಮಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ಊರಿನ ಪ್ರಮುಖರು, ಚುನಾಯಿತ ಪ್ರತಿನಿಧಿಗಳು ಎಲ್ಲರೂ ಸೇರಿ ಪವಿತ್ರ ಮೃತಿಕೆ ಯಾತ್ರಾ ರಥಕ್ಕೆ ಅರ್ಪಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ ಮಹದೇವಯ್ಯ, ಬೆಂಗಳೂರು ಕಟ್ಟಿ ಇಡೀ ಅದ್ಬುತ ಆಡಳಿತ ನಡೆಸಿದ ಕೆಂಪೇಗೌಡರು ತೋರಿದ್ದ ಸಾಮಾಜಿಕ ಕಳಕಳಿ, ದೂರದೃಷ್ಟಿ ಇಂದಿನ ರಾಜಕಾರಣಿಗಳಿಗೆ ಮಾದರಿ. ಈ ಮಹನೀಯರ ಬೃಹತ್ ಪ್ರತಿಮೆ ಬೆಂಗಳೂರಿನಲ್ಲಿ ಅನಾವರಣಗೊಳ್ಳುವುದು ಸಾರ್ಥಕ ಕೆಲಸ. ನಮ್ಮ ಗ್ರಾಮ ಪಂಚಾಯಿತಿ ಮೂಲಕ ಪವಿತ್ರ ಮಣ್ಣು ಈ ಕೆಲಸಕ್ಕೆ ಹೋಗಿರುವುದು ನಮ್ಮೂರಿಗೆ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಎಂ.ಬಿ.ದಿನೇಶ್, ಸದಸ್ಯರಾದ ರಮೇಶ್, ಶ್ರೀನಿವಾಸಮೂರ್ತಿ, ಲೀಲಾ ನಟರಾಜ್, ಶಿವನಂಜಪ್ಪ, ಮಮ್ತಾಜ್ ಬೇಗಂ, ಊರಿನ ಪ್ರಮುಖರಾದ ಸಿದ್ದರಾಜು, ಸಿದ್ದರಾಮಣ್ಣ, ಕಂದಾಯ ನಿರೀಕ್ಷಕ ರಮೇಶ್, ತಾಪಂ ಯೋಜನಾಧಿಕಾರಿ ಜಗನ್ನಾಥಗೌಡ ಇತರರು ಇದ್ದರು.
ವರದಿ: ಜಿ.ಅರ್.ರಮೇಶ ಗೌಡ, ಗುಬ್ಬಿ.