ಗುಬ್ಬಿ: ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಅಚ್ಚುಕಟ್ಟಾದ ಆಳ್ವಿಕೆ ನೀಡಿದೆ. ಒಟ್ಟಾರೆ ಬಿಜೆಪಿ ಸರ್ಕಾರ ಜನ ಮಾನಸದಲ್ಲಿ ನೆಲೆಸಿದೆ. ಮತ್ತೊಮ್ಮೆ ಬಿಜೆಪಿ ಸರ್ಕಾರ ಶತಸಿದ್ಧ ಎಂದು ಮಾಜಿ ಸಿಎಂ ಜಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯದ ಜನತೆ ಅತ್ಯಧಿಕ ಸ್ಥಾನ ನೀಡಿ ಆಶೀರ್ವದಿಸಲಿದ್ದಾರೆ. ಸ್ಪಷ್ಟ ಬಹುಮತಕ್ಕಿಂತ ಅತ್ಯಧಿಕ ಸ್ಥಾನ ಬಿಜೆಪಿ ಗಳಿಸಲಿದೆ ಎಂದು ವಿಶ್ವಾಸದಲ್ಲಿ ಪುನರುಚ್ಚರಿಸಿದರು.

ನನ್ನ ಅಧಿಕಾರಾವಧಿಯ ನಂತರದಲ್ಲಿ ಸಲ್ಲದ ಊಹಾಪೋಹ ಹಬ್ಬುವ ಕೆಲಸ ಆಗಿತ್ತು. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲರೂ ಒಗ್ಗೂಡಿ ಬಿಜೆಪಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದ ಅವರು ಗುಬ್ಬಿ ಕ್ಷೇತ್ರದಲ್ಲಿ ಸಹ ಯಾವ ಗೊಂದಲಕ್ಕೆ ಆಸ್ಪದ ನೀಡದೆ ಒಗ್ಗೂಡಿ ಕೆಲಸ ಮಾಡುವ ನಿರ್ಧಾರ ಕೈಗೊಳ್ಳಲಿದ್ದಾರೆ. ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ದುಡಿಯಲಿದ್ದಾರೆ ಎಂದು ಸ್ಥಳೀಯ ಟಿಕೆಟ್ ಗೊಂದಲಕ್ಕೆ ಸೂಕ್ಷ್ಮವಾಗಿ ಉತ್ತರಿಸಿ ಪಕ್ಷ ಕಟ್ಟಲು ಕಾರ್ಯಕರ್ತರಿಗೆ ಕರೆ ನೀಡಿದರು.
ಶಾಸಕ ಜ್ಯೋತಿ ಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿ, ಮಾಜಿ ಜಿಪಂ ಸದಸ್ಯರಾದ ಪಿ.ಬಿ.ಚಂದ್ರಶೇಖರಬಾಬು, ಡಾ.ನವ್ಯಾಬಾಬು, ಜಿ.ಎನ್.ಬೆಟ್ಟಸ್ವಾಮಿ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ ಇತರರು ಇದ್ದರು.