ಆಸ್ಪತ್ರೆಗಳ ವ್ಯವಸ್ಥೆ ಬಿಗಿಗೊಳಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಲಹೆ: ನಾಗಣ್ಣಗೌಡ

ತುಮಕೂರು: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ಅವಳಿ ಶಿಶುಗಳು ಸಾವನ್ನಪ್ಪಿರುವಂತಹ ಪ್ರಕರಣ ನಡೆದಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಜಿಲ್ಲಾ ಆರೋಗ್ಯಾಧಿಕಾರಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳು ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಸಿಬ್ಬಂದಿಗಳಿಗೆ ತಿಂಗಳಿಗೊಮ್ಮೆ ಸಭೆ ನಡೆಸಿ ಜಾಗೃತಿ ಮೂಡಿಸುವ ಜೊತೆಗೆ ವ್ಯವಸ್ಥೆಯನ್ನು ಬಿಗಿಗೊಳಿಸುವ ಅನಿವಾರ್ಯತೆ ಇದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ನಾಗಣ್ಣ ಗೌಡ ಸಲಹೆ ನೀಡಿದ್ದಾರೆ.

ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು ಮೃತ ಬಾಣಂತಿ ಹಾಗೂ ಶಿಶುಗಳ ಶವಗಳನ್ನು ವೀಕ್ಷಿಸಿದ ನಂತರ ಮಕ್ಕಳ ತೀವ್ರ ಘಟಕ, ಮಕ್ಕಳ ಶುಶ್ರೂಷ ಘಟಕಗಳಿಗೂ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ನಾಗಣ್ಣ ಗೌಡ, ತುಮಕೂರು ಜಿಲ್ಲಾಸ್ಪತ್ರೆ ಪ್ರಕರಣ ನ್ಯಾಷನಲ್ ಕಮೀಷನ್‌ಗೂ ಸಹ ಸುದ್ದಿ ಹೋಗಿದೆ. ಒಂದು ತಪ್ಪು ಆಗಿದೆ ಮುಂದೆ ಈ ರೀತಿಯ ತಪ್ಪುಗಳು ಆಗದಂತೆ ತಡೆಯುವುದು ಮುಖ್ಯವಾಗಿದೆ ಎಂದರು.

ಆಸ್ಪತ್ರೆಗಳಿಗೆ ಬರುವವರಲ್ಲಿ ಮೊದಲು ಯಾರಿಗೆ ಚಿಕಿತ್ಸೆ ಆಗಬೇಕು ಅವರನ್ನು ಪರಿಗಣಿಸುವಂತಾಗಬೇಕು ಎಂಬುದನ್ನು ಅರಿತು ಸಿಬ್ಬಂದಿ ಕೆಲಸ ಮಾಡಬೇಕಿದೆ. ಈ ಸಂಬಂಧ ಸರ್ಕಾರ ಸಹ ಸೂಚನೆ ಕೊಟ್ಟಿದೆ, ನಾವೂ ಕೂಡ ಕೊಡುತ್ತೇವೆ ಎಂದರು.

ಈ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆಯಾಗಲಿದೆ. ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು ಯಾವ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಡಿಹೆಚ್‌ಓ ಮತ್ತು ಟಿಹೆಚ್‌ಒಗಳು ಸಿಸ್ಟಮ್‌ನ ಬಿಗಿಗೊಳಿಸಬೇಕಿದೆ ಎಂದು ತಿಳಿಸಿದ ಅವರು, ಸದರಿ ಪ್ರಕರಣದಲ್ಲಿ ಮೃತಪಟ್ಟಿರುವ ಮಹಿಳೆಗೆ ಇರುವ ಹೆಣ್ಣು ಮಗುವಿನ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.

ಶಿಕ್ಷಣ, ವಸತಿ ಮೂಲಭೂತ ಸೌಕರ್ಯಗಳನ್ನು ನೀಡಲು ನಿರಾಶ್ರಿತರ ಕೇಂದ್ರ ಇದೆ. ಅಲ್ಲಿನ ಬಾಲಮಂದಿರದಲ್ಲಿ ಬಾಲಕಿಗೆ ವ್ಯವಸ್ಥೆ ಆಗಲಿದೆ ಎಂದು ತಿಳಿಸಿದ ನಾಗಣ್ಣಗೌಡ, ಮೃತಪಟ್ಟಿರುವ ಮಹಿಳೆ ತಮಿಳುನಾಡು ಮೂಲದವರಾಗಿದ್ದು ಅಲ್ಲಿನ ಅವರ ಸಂಬಂಧಿಕರನ್ನು ಕರೆಸಿಕೊಂಡು ಶವಗಳ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಮಂಜುನಾಥ್, ಜಿಲ್ಲಾ ಸರ್ಜನ್ ಡಾ.ವೀಣಾ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಾದ ಶ್ರೀಧರ್ ಹಾಗೂ ಪವಿತ್ರ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!