ಸ್ಮಾರ್ಟ್‌ಸಿಟಿ ಕಾಮಗಾರಿಗಳ ಖರ್ಚಾದ ಹಣಕಾಸಿನ ಬಗ್ಗೆ ಶ್ವೇತಪತ್ರ ಹೊರಡಿಸಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಗೆ ಜೆಡಿಎಸ್ ಮುಖಂಡ ಎನ್.ಗೋವಿಂದರಾಜು ಒತ್ತಾಯ

ತುಮಕೂರು: ನಗರದಲ್ಲಿ ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಅನುಷ್ಠಾನ, ಪ್ರಗತಿ, ಅನುದಾನ ಬಿಡುಗಡೆ, ಖರ್ಚಾದ ಹಣಕಾಸಿನ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರನ್ನು ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ಒತ್ತಾಯಿಸಿದರು.

ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳಿಂದ ಸಾಕಷ್ಟು ಅದ್ವಾನ ಆಗಿದ್ದು, ಬೀದಿದೀಪ ಅಳವಡಿಕೆಯಲ್ಲಿ ಕಳಪೆ ಗುಣಮಟ್ಟ ಕಂಡು ಬರುತ್ತಿದ್ದು, ದೊಡ್ಡ ಹಗರಣವೇ ನಡೆದಿದೆ. ಈ ಬಗ್ಗೆ ಸಂಸದರು ಮತ್ತು ಶಾಸಕರು ಬಹಿರಂಗ ಚರ್ಚೆಗೆ ದಿನಾಂಕ ಮತ್ತು ಸ್ಥಳವನ್ನು ನಿಗಧಿಪಡಿಸಿದರೆ ಆ ದಿನ ಚರ್ಚೆಗೆ ಬರಲು ನಾನು ಸಿದ್ಧ ಎಂದು ಸವಾಲು ಹಾಕಿದರು.

ಸ್ಮಾರ್ಟ್‌ಸಿಟಿ ಕಳಪೆ ಕಾಮಗಾರಿಗಳ ಬಗ್ಗೆ ನಾಲ್ಕು ಭಾರಿ ಶಾಸಕರಾಗಿ ಎರಡು ಭಾರಿ ಸಚಿವರಾಗಿದ್ದ ಅವರದ್ದೇ ಪಕ್ಷದ ಸೊಗಡು ಶಿವಣ್ಣ ಅವರೇ ಆರೋಪಿಸಿದ್ದಾರೆ. ಹೀಗಿರುವಾಗ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂಬುದು ನಮ್ಮ ಒತ್ತಾಯವಾಗಿದೆ ಎಂದರು.

ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ನಗರ ವ್ಯಾಪ್ತಿಯಲ್ಲಿ 12 ರಿಂದ 15 ಸಾವಿರ ಮನೆಗಳಿಗೆ ನೀರು ನುಗ್ಗಿದ್ದು, ಗೃಹೋಪಯೋಗಿ ವಸ್ತುಗಳು, ದವಸ ಧಾನ್ಯಗಳು, ಮನೆ ಬಳಕೆಗೆ ಬಳಸುತ್ತಿದ್ದ ವಾಹನಗಳು ನಾಶವಾಗಿದ್ದು, ಇದರಿಂದ ಸುಮಾರು 270 ಕೋಟಿ ರೂ. ನಷ್ಟವಾಗಿದ್ದು, ಈ ಬಗ್ಗೆ ಅಪ್ಪ, ಮಗನಿಗೆ ಯಾವುದೆ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಸಂತ್ರಸ್ಥರಿಗೆ ಯಾವುದೆ ರೀತಿಯ ಪರಿಹಾರವನ್ನು ಇದುವರೆಗೂ ನೀಡಿಲ್ಲ ಎಂದು ಆರೋಪಿಸಿದರು.

ಇಲ್ಲಿನ ಭಾರತೀನಗರ ಬಡಾವಣೆಯ ನಿವಾಸಿ ತುಂಬು ಗರ್ಭಿಣಿಯೊಬ್ಬರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗ ದಾಖಲೆಗಳ ನೆಪ ಹೇಳಿ ಚಿಕಿತ್ಸೆ ನಿರಾಕರಿಸಿದ್ದ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮನೆಗೆ ತೆರಳಿದ ಮಹಿಳೆ ಮತ್ತು ಆಕೆಯ ಅವಳಿ ಮಕ್ಕಳು ಸಾವನ್ನಪ್ಪಿದ್ದು, ತುಮಕೂರು ಇತಿಹಾಸದಲ್ಲಿ ಇಂತಹ ಅಮಾನವೀಯ ಘಟನೆ ಎಂದೂ ಸಂಭವಿಸಿಲ್ಲ ಎಂದು ದೂರಿದರು.

ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ನ ಜನಪ್ರಿಯ ಪ್ರಣಾಳಿಕೆಯಾದ ಪಂಚರತ್ನ ಯೋಜನೆ ಬಗ್ಗೆ ಹಾಗೂ ನಗರದ ಸಮಗ್ರ ಅಭಿವೃದ್ಧಿ ಬಗ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಗೋವಿಂದರಾಜು ಅವರು ನಗರವನ್ನು ಶ್ರೀಲಂಕ ಮಾಡಲು ಹೊರಟಿದ್ದಾರೆ ಎಂದು ನನ್ನ ಬಗ್ಗೆ ನಗರ ಶಾಸಕರು ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದರು.

ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಜನಸಂಪರ್ಕದಲ್ಲಿರುವ ತನ್ನ ಬಗ್ಗೆ ಅಮಾವಾಸ್ಯೆ ಹಾಗೂ ಹುಣ್ಣಿಮೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ನನ್ನ ಬಗ್ಗೆ ನಗರ ಶಾಸಕರು ಹಗುರವಾಗಿ ಮಾತನಾಡಿದ್ದು ಖಂಡನೀಯ ಎಂದರು.

ಕೋವಿಡ್ ಸಂದರ್ಭದಲ್ಲಿ ಸಾವಿರಾರು ಬಡ ಜನರು ಸಾವನ್ನಪ್ಪಿದರೂ ಅಪ್ಪ ಮಗ ಇಬ್ಬರೂ ಆಚೆ ಬರಲಿಲ್ಲ, ನಾನು ಖುದ್ದು ಮನೆ ಮನೆಗೆ ಊಟ, ತಿಂಡಿ ವಿತರಿಸುವುದರ ಜೊತೆಗೆ ಎರಡು ಪ್ರತ್ಯೇಕವಾಗಿ ಆಂಬ್ಯುಲೆನ್ಸ್‌ಗಳನ್ನು ಬಿಟ್ಟು ಜನರ ಆರೋಗ್ಯ ರಕ್ಷಣೆಗೆ ಮುಂದಾಗಿದ್ದೇನೆ. ಹೀಗಿರುವಾಗ ನನ್ನ ಬಗ್ಗೆ ಕೇವಲವಾಗಿ ಮಾತನಾಡುವುದನ್ನು ಬಿಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬೆಳ್ಳಿ ಲೋಕೇಶ್, ಜಿಲ್ಲಾ ಹಾಪ್ ಕಾಮ್ಸ್ ಅಧ್ಯಕ್ಷ ಕೆ.ಟಿ.ವಿಜಯ್‌ಗೌಡ, ಜಿಲ್ಲಾ ವಕ್ತಾರ ಮಧುಸೂಧನ್, ಮುಖಂಡರಾದ ಇಸ್ಮಾಯಿಲ್, ಲೋಕೇಶಗೌಡ, ದೇವರಾಜು, ಗುರುಪ್ರಕಾಶ್ ಬಳ್ಳುಕರಾಯ ಮುಂತಾದವರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!