ಗುಬ್ಬಿ: ಹಣಕಾಸಿನ ವಿಚಾರದಲ್ಲಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಅತ್ತಿಗೆಯನ್ನೇ ಮೈದುನ ಕೊಲೆ ಮಾಡಿದ ಘಟನೆ ತಾಲ್ಲೂಕಿನ ಚೇಳೂರಿನಲ್ಲಿ ನಡೆದಿದೆ.
ಚೇಳೂರು ಗ್ರಾಮದಲ್ಲಿ ಟೆಂಟ್ ಹಾಕಿಕೊಂಡು ಕೂಲಿ ಕೆಲಸ ಮಾಡುವ ಅಲೆಮಾರಿ ಜನಾಂಗದ ತ್ರಿಶಾ (35) ಕೊಲೆಯಾದ ದುರ್ದೈವಿ. ಮೃತಳ ಮೈದುನ ರಘು (25) ಆರೋಪಿ. ಬೆಳಿಗ್ಗೆ ಹಣಕಾಸಿನ ವಿಚಾರಕ್ಕೆ ವಿಜಯಕುಮಾರ್ ಹಾಗೂ ರಘು ಸಹೋದರರ ನಡುವೆ ಜಗಳ ಆರಂಭವಾಗಿತ್ತು.
ವಿಕೋಪಕ್ಕೆ ತಿರುಗಿದ ಜಗಳ ಮಧ್ಯೆ ಪ್ರವೇಶಿಸಿದ ತ್ರಿಶಾ ಅವರ ಮೇಲೆರಗಿದ ರಘು ಚಾಕುವಿನಿಂದ ಕತ್ತು ಸೀಳಿ ತನ್ನ ಅತ್ತಿಗೆಯನ್ನೇ ಹೆಣವಾಗಿಸಿದ. ಮೂಲತಃ ಕೊರಟಗೆರೆ ತಾಲ್ಲೂಕು ಶಿಕಾರಿಪುರ ಗ್ರಾಮದ ನಿವಾಸಿಗಳಾದ ಇವರುಗಳು ಅಲೆಮಾರಿಗಳಾಗಿ ಊರಿನ ಹೊರ ವಲಯದಲ್ಲಿ ಟೆಂಟ್ ಹಾಕಿಕೊಂಡು ಬದುಕು ಸಾಗಿಸುತ್ತಾರೆ.
ನಂತರ ಪರಾರಿಯಾದ ಆರೋಪಿ ರಘುವನ್ನು ಚೇಳೂರು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದರು. ಸ್ಥಳಕ್ಕೆ ಆಗಮಿಸಿದ ಪಿಎಸೈ ನವೀನ್ ಕುಮಾರ್ ಮುಂದಿನ ಕ್ರಮ ಕೈಗೊಂಡಿದ್ದಾರೆ.