ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ: ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ

ತುಮಕೂರು:ತುಮಕೂರು ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾಧಿಕಾರಿ ಚುನಾವಣಾ ವಿಚಾರದಲ್ಲಿ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದು,ಕೂಡಲೇ ಅವರನ್ನು ವಜಾ ಮಾಡಬೇಕು ಹಾಗೂ ಷೇರು ಹಣ ಕಟ್ಟಿರುವ ಎಲ್ಲರಿಗೂ ಸದಸ್ಯತ್ವ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಇಂದು ವಕ್ಕಲಿಗ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ತುಮಕೂರು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಕ್ಕಲಿಗ ಮುಖಂಡರ ಬ್ಯಾಟರಂಗೇಗೌಡ ಮಾತನಾಡಿ,ತುಮಕೂರು ಜಿಲ್ಲಾ ವಕ್ಕಲಿಗರ ಸಂಘದ ಆಡಳಿತಾವಧಿ ೨೦೨೨ರ ಮಾರ್ಚ ೩೧ಕ್ಕೆ ಪೂರ್ಣಗೊಂಡಿದ್ದು,ಸಹಕಾರ ಇಲಾಖೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿದೆ.ಆದರೆ ನಿಗಧಿತ ಅವಧಿಯೊಳಗೆ ಚುನಾವಣೆ ನಡೆಸದ ಕಾರಣ ಕರ್ನಾಟಕ ಹೈಕೋರ್ಟು ಸದರಿ ಆಡಳಿತಾಧಿಕಾರಿಗಳಿಗೆ ನಿಗಧಿತ ಅವಧಿಯೊಳಗೆ ಚುನಾವಣೆ ನಡೆಸುವಂತೆ ಆದೇಶ ಮಾಡಿದೆ ಎಂದರು.

ಹೈಕೋರ್ಟಿನ ಆದೇಶವನ್ನು ನೆಪವಾಗಿಟ್ಟುಕೊಂಡು ೨೦೦೮-೦೯ನೇ ಸಾಲಿನಿಂದಲೂ ಸುಮಾರು ೨೨ ಸಾವಿರ ಜನರು ಷೇರು ಹಣ ಹೂಡಿಕೆ ಮಾಡಿ, ಸದಸ್ಯತ್ವಕ್ಕಾಗಿ ಕಾಯುತಿದ್ದರು, ಅವರಿಗೆ ಸದಸ್ಯತ್ವ ನೀಡದೆ.ಕೆಲವು ವ್ಯಕ್ತಿಗಳ ಕಡೆಯಿಂದ ಶಿಫಾರಸ್ಸಾಗಿ ಇತ್ತೀಚಗೆ ಷೇರು ಶುಲ್ಕ ತುಂಬಿರುವ ೫೦೦ ಜನರಿಗೆ ಮಾತ್ರ ಸದಸ್ಯತ್ವ ನೀಡಿ, ಅವರನ್ನೇ ಮತದಾರರೆಂದು ಘೋಷಿಸಿ,ಚುನಾವಣೆ ನಡೆಸಲು ಮುಂದಾಗಿದ್ದಾರೆ. ಆಡಳಿತಾಧಿಕಾರಿ ನಡೆ ಪಕ್ಷಪಾತದಿಂದ ಕೂಡಿದೆ. ಈ ಬಗ್ಗೆ ಸಹಕಾರ ಇಲಾಖೆಯ ಪ್ರಭಂಧಕರಿಗೆ ಮನವಿ ಮಾಡಿದ್ದರೂ ಅವರು ಸಹ ಯಾವುದೇ ಕ್ರಮ ಕೈಗೊಂಡಿಲ್ಲ.ಬದಲಾಗಿ ನಿಯಮ ಮೀರಿ ಚುನಾವಣೆ ನಡೆಸಲು ಒಕ್ಕಲಿಗರ ಸಂಘದ ಆಡಳಿತಾಧಿಕಾರಿಗೆ ಅವಕಾಶ ನೀಡಲಾಗಿದೆ. ಹಾಗಾಗಿ ಕೂಡಲೇ ಚುನಾವಣಾ ಪ್ರಕ್ರಿಯೆ ಸ್ಥಗಿತಗೊಳಿಸಿ, ಈಗಾಗಲೇ ಷೇರು ಬಂಡವಾಳ ಹೂಡಿ, ಸದಸ್ಯತ್ವಕ್ಕೆ ಕಾಯುತ್ತಿರುವ ೨೨ ಸಾವಿರ ಜನರಿಗೂ ಸದಸ್ಯತ್ವ ನೀಡಿ, ಮತದಾರರಾಗಿ ಪರಿಗಣಿಸಿ ಚುನಾವಣೆ ನಡೆಸಬೇಕೆಂದು ಬ್ಯಾಟರಂಗೇಗೌಡ ಆಗ್ರಹಿಸಿದರು.

ಬೆಳ್ಳಿ ಬ್ಲಡ್ ಬ್ಯಾಂಕ್‌ನ ಬೆಳ್ಳಿ ಲೋಕೇಶ್ ಮಾತನಾಡಿ,ವಕ್ಕಲಿಗರ ಸಂಘದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ವ್ಯಕ್ತಿ ಕೆಲವರ ಕೈಗೊಂಬೆಯಂತೆ ವರ್ತಿಸುತ್ತಿದ್ದು,ಮತದಾರರ ಕರಡು ಪಟ್ಟಿಗೆ ಸುಮಾರು ೧೨೫ಕ್ಕೂ ಹೆಚ್ಚು ಅಕ್ಷೇಪಣೆಗಳನ್ನು ಸಲ್ಲಿಸಿದ್ದರೂ ಒಂದಕ್ಕೂ ಉತ್ತರ ನೀಡಿಲ್ಲ.ನ್ಯಾಯಾಲಯದ ನಿಗಧಿ ಪಡಿಸಿದ್ದ ಅವಧಿ ಮುಗಿಯುತ್ತಾ ಬಂದಿದ್ದರೂ, ನ್ಯಾಯಲಯಕ್ಕೆ ಹೆಚ್ಚಿನ ಕಾಲಾವಕಾಶಕ್ಕೆ ಅರ್ಜಿ ಸಲ್ಲಿಸದೆ ಮೀನಾಮೇಷ ಎಣಿಸುತ್ತಿದ್ದಾರೆ. ಇದರಿಂದ ಕಳೆದ ೧೦-೧೨ ವರ್ಷಗಳಿಂದ ಸದಸ್ಯತ್ವಕ್ಕಾಗಿ ಷೇರು ಹಾಕಿ ಕಾಯುತ್ತಿರುವ ಆರ್ಹ ಒಕ್ಕಲಿಗ ಜನಾಂಗದ ವ್ಯಕ್ತಿಗಳಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಆಡಳಿತಾಧಿಕಾರಿಯನ್ನು ವಜಾ ಮಾಡಿ, ಬೇರೊಬ್ಬರನ್ನು ನೇಮಕ ಮಾಡಿ, ಚುನಾವಣಾ ಪ್ರಕ್ರಿಯೆಯನ್ನು ಮೊದಲಿನಿಂದ ಪ್ರಾರಂಭಿಸಬೇಕು. ಆರ್ಹರಿಗೆ ಸದಸ್ಯತ್ವ ನೀಡಿ, ಅವರಿಗೂ ಮತ ಹಾಕುವ ಹಕ್ಕು ನೀಡಿದ ನಂತರವೇ ಚುನಾವಣೆ ಪ್ರಕ್ರಿಯೆ ಆರಂಭಿಸಬೇಕೆಂದು ಆಗ್ರಹಿಸಿದರು.

ಡಿ.ಆರ್. ಮತ್ತು ಒಕ್ಕಲಿಗ ಮುಖಂಡರ ನಡುವೆ ವಾಗ್ವಾದ:ವಕ್ಕಲಿಗ ಮುಖಂಡರ ಒತ್ತಾಯದಂತೆ ಮನವಿ ಸ್ವೀಕರಿಸಲು ತುಮಕೂರು ಉಪವಿಭಾಗಾಧಿಕಾರಿ ಅಜಯ್ ಅವರೊಂದಿಗೆ ಆಗಮಿಸಿದ, ಸಹಕಾರ ಇಲಾಖೆಯ ಡಿ.ಆರ್. ಎನ್.ವೆಂಕಟೇಶ್ ಅವರೊಂದಿಗೆ ವಾಗ್ವಾದಕ್ಕೆ ಇಳಿದ ವಕ್ಕಲಿಗ ಮುಖಂಡರು, ಆಡಳಿತಾಧಿಕಾರಿಗಳೊಂದಿಗೆ ನೀವು ಸಹ ಸೇರಿ ಆರ್ಹರಿಗೆ ಸದಸ್ಯತ್ವ ನೀಡದೆ ಅನ್ಯಾಯ ಮಾಡುತ್ತಿದ್ದೀರಿ,ಮೊದಲು ಆಡಳಿತಾಧಿಕಾರಿಯನ್ನು ವಜಾಗೊಳಿಸಿ ಎಂದು ಒತ್ತಾಯಿಸಿದರು. ಈ ವೇಳೆ ಕೆಲ ಕಾಲ ಅಧಿಕಾರಿಯೊಂದಿಗೆ ಜೋರು ಮಾತಿನಲ್ಲಿಯೇ ವಾಗ್ವಾಧಕ್ಕಿಳಿದರು. ಉಪವಿಭಾಗಾಧಿಕಾರಿ ಅಜಯ್ ಪ್ರತಿಭಟನಾ ನಿರತರನ್ನು ಸಮಾಧಾನ ಪಡಿಸಿ,ಮುಂದಿನ ಎರಡು ದಿನದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳು ಮತ್ತು ವಕ್ಕಲಿಗ ಮುಖಂಡರು ಸಭೆ ಕರೆದು ಚರ್ಚೆ ನಡೆಸಿ,ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಭರವಸೆ ನೀಡಿದರು.

ಉಪವಿಭಾಗಾಧಿಕಾರಿಗಳ ಭರವಸೆಯ ನಂತರ ಪ್ರತಿಭಟನೆಯನ್ನು ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ದೇವಪ್ರಕಾಶ್,ವಕೀಲರಾದ ರವಿಗೌಡ,ಚಿಕ್ಕರಂಗಣ್ಣ,ಕೆಂಪರಾಜು,ಕೈದಾಳ ರಮೇಶ್,ಸತ್ಯಪ್ಪ,ವಿಜಯಕುಮಾರ್,ಮಂಜುನಾಥಗೌಡ, ಪಾಲಿಕೆ ದಸ್ಯರಾದ ಧರಣೇಂದ್ರಕುಮಾರ್, ಶ್ರೀನಿವಾಸಕುಮಾರ್, ಮನೋಹರಗೌಡ, ಲಕ್ಕೇಗೌಡ, ಕುಣಿಗಲ್ ಶ್ರೀನಿವಾಸಗೌಡ, ಚಿಕ್ಕಸಾರಂಗಿ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!