ಎಸ್.ಕೊಡಗೀಹಳ್ಳಿ ಗ್ರಾಪಂ ಉಪಾಧ್ಯಕ್ಷೆಯಾಗಿ ಅಂಬುಜಮ್ಮ ಅವಿರೋಧ ಆಯ್ಕೆ

ಗುಬ್ಬಿ: ತಾಲ್ಲೂಕಿನ ಎಸ್.ಕೊಡಗೀಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುರಿಗೇನಹಳ್ಳಿ ಅಂಬುಜಮ್ಮ ಅವಿರೋಧ ಆಯ್ಕೆಯಾದರು.

ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಶೀಲ್ದಾರ್ ಬಿ.ಆರತಿ ನಡೆಸಿಕೊಟ್ಟರು. ಒಬಿಸಿ(ಅ) ಮಹಿಳೆ ಮೀಸಲಿನ ಉಪಾಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಧನಲಕ್ಷ್ಮೀ ರಾಜೀನಾಮೆ ನೀಡಿ ತೆರವಾಗಿದ್ದ ಕಾರಣ ನಡೆದ ಈ ಚುನಾವಣೆಯಲ್ಲಿ ಅಂಬುಜಮ್ಮ ಏಕೈಕ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಒಟ್ಟು 19 ಮಂದಿ ಸದಸ್ಯರ ಸಮ್ಮುಖದಲ್ಲಿ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು.

ನೂತನ ಅಧ್ಯಕ್ಷೆ ಸುರಿಗೇನಹಳ್ಳಿ ಅಂಬುಜಮ್ಮ ಸುದ್ದಿಗಾರರ ಜತೆ ಮಾತನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು ಮತ್ತು ರಸ್ತೆ ಒದಗಿಸುವ ಜೊತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ಸದಸ್ಯರ ಒಮ್ಮತ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ಸು.ಮುನಿಯಪ್ಪ ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಸಾಲುತ್ತಿಲ್ಲ. ಈ ಹಿಂದೆ ಇದ್ದ ಪಂಚಾಯಿತಿಗಳನ್ನು ಹೆಚ್ಚಿಸಿ ಅಧಿಕಾರ ವಿಕೇಂದ್ರೀಕರಣ ಮಾಡಿದ ಸರ್ಕಾರ ಅದರಂತೆ ಅನುದಾನ ನೀಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಗ್ರಾಪಂ ಅಧ್ಯಕ್ಷೆ ಗಂಗನರಸಮ್ಮ, ಮುಖಂಡರಾದ ಗಂಗಣ್ಣ, ರಾಮು, ಗಿರೀಶ್, ದಿವಾಕರ್, ಪಾಂಡುರಂಗಯ್ಯ ಸೇರಿದಂತೆ ಎಲ್ಲಾ ಗ್ರಾಪಂ ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!