ಗುಬ್ಬಿ: ಕೆಎಂಎಫ್ ನಿರ್ದೇಶಕರಾಗಿ ಸಾಗರನಹಳ್ಳಿ ವಿಜಯಕುಮಾರ್ ಅವರನ್ನು ಸರ್ಕಾರ ನಾಮ ನಿರ್ದೇಶನ ಮಾಡಿ ನೇಮಕ ಮಾಡಿದ ಹಿನ್ನಲೆ ತಾಲ್ಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿ ಗೌರವಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಲಿತ ಸಂಘರ್ಷ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸಭೆ ನಡೆಸಿ ನಂತರ ಸನ್ಮಾನ ಕಾರ್ಯಕ್ರಮ ನಡೆಸಿದರು. ರಾಜಕೀಯ ಹೊರತಾದ ವೇದಿಕೆಯಲ್ಲಿ ಅವರನ್ನ ಗೌರವಿಸಿದ ದಲಿತ ಮುಖಂಡರು ವಿಜಯಕುಮಾರ್ ಬಗ್ಗೆ ಇರುವ ತಮ್ಮ ವಿಶ್ವಾಸವನ್ನು ಮಾತುಗಳ ಮೂಲಕ ವ್ಯಕ್ತಪಡಿಸಿದರು.
ದಲಿತ ಮುಖಂಡ ಈಶ್ವರಯ್ಯ ಮಾತನಾಡಿ ವಿಜಯಕುಮಾರ್ ಅವರು ರಾಜಕೀಯ ಕ್ಷೇತ್ರಕ್ಕೆ ಬಂದಾಗಿನಿಂದ ದೀನ ದಲಿತರು, ಬಡವರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಅವರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡು ಹಂತ ಹಂತವಾಗಿ ಪಕ್ಷದಲ್ಲಿ ಬೆಳೆದರು. ಆದರೆ ಸಾಮಾಜಿಕ ಕಾರ್ಯಗಳಿಗೆ ರಾಜಕೀಯೇತರ ನಿಲುವು ತಾಳುತ್ತಿದ್ದರು. ದಲಿತರ ಬಗ್ಗೆ ಹೊಂದಿದ್ದ ಪ್ರೀತಿ ಇಂದು ಅವರನ್ನು ಗುರುತಿಸಿದೆ ಎಂದು ಶ್ಲಾಘಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಗರನಹಳ್ಳಿ ವಿಜಯಕುಮಾರ್ ಮಾತನಾಡಿ ನನ್ನ ಕಳೆದ ಮೂವತ್ತು ವರ್ಷಗಳ ರಾಜಕೀಯದಲ್ಲಿ ಜಾತ್ಯತೀತ ನಿಲುವು ಹೊಂದಿದ್ದ ಕಾರಣ ಇಂದು ದಲಿತ ಮುಖಂಡರು ಗುರುತಿಸಿದ್ದಾರೆ. ಒಂದು ರಾಜಕೀಯ ಪಕ್ಷದಲ್ಲಿ ಇದ್ದರೂ ಸ್ನೇಹ ಸಂಬಂಧಗಳನ್ನು ಸಂಪಾದಿಸಿದ್ದ ಹಿನ್ನಲೆ ಅಪಾರ ಪ್ರೀತಿ ಗೌರವ ತೋರುತ್ತಿದ್ದಾರೆ. ಈ ಹಿನ್ನಲೆ ಕೆಎಂಎಫ್ ಮೂಲಕ ಗ್ರಾಮೀಣ ರೈತರಿಗೆ ಸಿಗುವ ಅನುಕೂಲವನ್ನು ಗುಬ್ಬಿ ತಾಲ್ಲೂಕಿನ ರೈತರಿಗೆ ಒದಗಿಸುವ ಕೆಲಸ ಮಾಡುತ್ತೇನೆ. ಸರ್ಕಾರದ ಮೂಲಕ ವಿಶೇಷ ಅನುದಾನ ತರುವ ಎಲ್ಲಾ ಪ್ರಯತ್ನ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ನಿಟ್ಟೂರು ರಂಗಸ್ವಾಮಿ, ತಾಲ್ಲೂಕು ಸಂಚಾಲಕ ಪಾಂಡುರಂಗಯ್ಯ, ತಾಪಂ ಮಾಜಿ ಸದಸ್ಯ ದಿವಾಕರಯ್ಯ, ಮುಖಂಡರಾದ ಕಲ್ಲೂರು ರವಿಕುಮಾರ್, ಮಹಮದ್ ಯೂಸಫ್, ಪರಮೇಶ್, ಕಲ್ಲೇಶ್, ಶಂಕರಣ್ಣ, ನಟರಾಜು, ಕೃಷ್ಣಪ್ಪ, ಬೆಟ್ಟಸ್ವಾಮಿ, ಮಹೇಶ್, ದೊಡ್ಡಯ್ಯ, ಕುಮಾರ್ ಇತರರು ಇದ್ದರು.