ಗುಬ್ಬಿ: ತುಮಕೂರು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಪ್ರಸವ ವೇದನೆಗೆ ಸೂಕ್ತ ಚಿಕಿತ್ಸೆ ಸಿಗದೆ ಅವಳಿ ಮಕ್ಕಳ ಜೊತೆ ತಾಯಿ ಒಟ್ಟು ಮೂರು ಜೀವ ಬಲಿಯಾದ ಘಟನೆ ಖಂಡನೀಯ. ಹೆರಿಗೆಗೆ ಬಂದ ಮಹಿಳೆ ತಾಯಿ ಕಾರ್ಡ್ ಮಾಡಿಸಿಲ್ಲ ಎಂಬ ಕಾರಣಕ್ಕೆ ನಿರ್ದಯವಾಗಿ ನಡೆದುಕೊಂಡಿದ್ದಾರೆ. ಮೂರು ಜೀವಗಳ ಬಲಿಗೆ ಕಾರಣರಾದ ಆಸ್ಪತೆಯ ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಹುದ್ದೆಯಿಂದ ವಜಾಗೊಳಿಸಬೇಕು ಎಂದು ಕನ್ನಡ ಪರ, ದಲಿತ ಪರ ಹಾಗೂ ಪ್ರಗತಿ ಪರ ಸಂಘಟನೆಗಳು ಪ್ರತಿಭಟನೆ ಮೂಲಕ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆ ಬಂದ ಕರುನಾಡು ವಿಜಯಸೇನೆ, ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಕ್ಷಣಾ ವೇದಿಕೆ, ಮಾನವ ಹಕ್ಕುಗಳ ಸಂಘಟನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಆರೋಗ್ಯ ಇಲಾಖೆ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕೂಲಿ ಕಾರ್ಮಿಕ ಕುಟುಂಬದ ಮೃತ ಮಹಿಳೆ ಗರ್ಭಿಣಿ, ಹೆರಿಗೆ ನೋವು ಬಳಲಿರುವ ಬಗ್ಗೆ ತಿಳಿದು ಸಹ ಅಸಹನೆ ತೋರಿದ ಸಿಬ್ಬಂದಿಗಳು ಎಲ್ಲರೂ ಮಹಿಳೆಯರು ಎಂಬುದು ನಾಚಿಕೆ ತರುತ್ತದೆ. ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದು ರುಜುವಾತುಯಾಯಿತು ಎಂದು ಕಿಡಿಕಾರಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್ ಮಾತನಾಡಿ ಸರ್ಕಾರಿ ಆಸ್ಪತ್ರೆಗಳ ದುಸ್ಥಿತಿ ಎಲ್ಲೆಡೆ ಅನಾವರಣ ಆಗಿದೆ. ಈ ಮಟ್ಟದ ಕೀಳು ವರ್ತನೆ ವೈದ್ಯರು ತೋರಿದ್ದು ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತದ್ದು. ವೈದ್ಯೋ ನಾರಾಯಣೋ ಹರಿಃ ಎಂಬ ನಂಬಿಕೆಗೆ ಈ ಘಟನೆ ದಕ್ಕೆ ತಂದಿದೆ. ಯಥಾ ರಾಜ ತಥಾ ಪ್ರಜಾ ಎಂಬಂತೆ ಸರ್ಕಾರಕ್ಕೆ ತಕ್ಕಂತೆ ಇಲಾಖೆಗಳು ಇವೆ. ಈ ನಿಟ್ಟಿನಲ್ಲಿ ಆರೋಗ್ಯ ಸಚಿವರು, ಜಿಲ್ಲಾ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ದಸಂಸ ತಾಲ್ಲೂಕು ಸಂಚಾಲಕ ಚೇಳೂರು ಶಿವನಂಜಪ್ಪ ಮಾತನಾಡಿ ಅಯೋಗ್ಯ ಸರ್ಕಾರ ಎಂಬುದು ಮತ್ತೊಮ್ಮೆ ರುಜುವಾತು ಮಾಡಿದ ಸರ್ಕಾರ. ಈಗಾಗಲೇ ಕೋಟಿ ಕೋಟಿ ಲೂಟಿ ಮಾಡಿದ ಬಿಜೆಪಿ ಸರ್ಕಾರಕ್ಕೆ ಇಂತಹ ಘಟನೆ ಏನೋ ಅನಿಸುತ್ತಿಲ್ಲ. ತಾಯಿ ಮಕ್ಕಳ ಮರಣ ಸಹಜ ಸಾವಲ್ಲ. ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರಿ ಕೊಲೆ ಮಾಡಿದ್ದಾರೆ. ಅವರನ್ನು ಅಮಾನತು ಬೇರೆ ಸ್ಥಳಕ್ಕೆ ನಿಯೋಜಿಸುವ ಕೆಲಸ ಶಿಕ್ಷೆಯಲ್ಲ. ಕರ್ತವ್ಯ ಲೋಪ ತೋರಿದವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಬೇಕು. ಜೊತೆಗೆ ಸರ್ಕಾರ ಈ ಘಟನೆಯ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್. ವೆಂಕಟೇಗೌಡ ಮಾತನಾಡಿ ಬಡವರು, ದೀನ ದಲಿತರು ಹಾಗೂ ರೈತರ ವಿರೋಧಿ ಬಿಜೆಪಿ ಸರ್ಕಾರ ಕೇವಲ ನಾಟಕೀಯ ಆಡಳಿತ ನಡೆಸಿದೆ. ಜನಪರ ಕಾಳಜಿ ಇದ್ದರೆ ಇಂತಹ ದುರ್ಘಟನೆ ಸಂಭವಿಸುತ್ತಿರಲಿಲ್ಲ. ಹೆರಿಗೆಗೆ ಬಂದ ಮಹಿಳೆಯ ಆರೈಕೆ ಮಾಡದ ಆಸ್ಪತ್ರೆ ಸಿಬ್ಬಂದಿಗಳು ರೋಗಿಗಳ ಬಳಿ ಕೆಟ್ಟ ವರ್ತನೆ ತೋರಿದ್ದ ಬಗ್ಗೆ ಈಗಾಗಲೇ ಇಡೀ ಜಿಲ್ಲೆಗೆ ಅಪಮಾನ ತಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಲೇಬೇಕು ಎಂದು ಕಿಡಿಕಾರಿದರು.
ನಂತರ ತಹಶೀಲ್ದಾರ್ ಬಿ.ಆರತಿ ಅವರಿಗೆ ತಮ್ಮ ಸಂಘಟನೆಗಳ ಮೂಲಕ ಕ್ರಿಮಿನಲ್ ಪ್ರಕರಣ ದಾಖಲು ಮಾಡಲು ಒತ್ತಾಯಿಸಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರ ಜಿ.ಎಸ್.ಮಂಜುನಾಥ್ ಕರುನಾಡ ವಿಜಯಸೇನೆಯ ಮಧು, ವಾಸುಗೌಡ, ರವಿಕುಮಾರ್ ಸಾದುತ್ ಪಾಷ, ಚೇತನ್, ದಸಂಸ ಮುಖಂಡರಾದ ನಾಗರಾಜು, ಕೀರ್ತಿ, ರೈತ ಸಂಘದ ಲೋಕೇಶ್, ಗುರುಚನ್ನಬಸಪ್ಪ ಇತರರು ಇದ್ದರು.
ವರದಿ: ಜಿ.ಆರ್.ರಮೇಶ ಗೌಡ, ಗುಬ್ಬಿ.