ಡಾ.ರಫೀಕ್ ಅಹಮದ್ ರವರೆ, ಐದು ವರ್ಷ ಅವಧಿಯಲ್ಲಿ ನಿಮ್ಮ ಕೊಡುಗೆ ಏನು? ದಾಖಲೆ ಸಮೇತ ಬಹಿರಂಗ ಚರ್ಚೆಗೆ ಬನ್ನಿ: ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು

ತುಮಕೂರು : ನಗರ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದರೂ ಜನಸೇವೆ ಮಾಡೋದನ್ನ ಮರೆಯಲಿಲ್ಲ ಎಂದು ಜೆಡಿಎಸ್ ಅಭ್ಯರ್ಥಿ ಎನ್‌.ಗೋವಿಂದರಾಜು ಹೇಳಿದ್ದಾರೆ. ಕಾಂಗ್ರೆಸ್ ಮಾಜಿ ಶಾಸಕ ಡಾ.ರಫೀಕ್ ಅಹಮ್ಮದ್ ಅವರು ತುಮಕೂರು ನಗರಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು ಇದಕ್ಕೆ ಪ್ರತ್ಯುತ್ತರವಾಗಿ ನಗರದಲ್ಲಿ 2013 ರಿಂದ 2018ರವರೆಗೆ ನಿರಂತರ ಐದು ವರ್ಷಗಳ ಕಾಲ ಶಾಸಕರಾಗಿದ್ದಾಗ, ತುಮಕೂರು ನಗರಕ್ಕೆ ತಮ್ಮ ಕೊಡುಗೆ ಏನು ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಿ ಎಂದು ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಪ್ರತಿ ಸವಾಲು ಹಾಕಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಎನ್.ಗೋವಿಂದರಾಜು ನಗರದ ಜನತೆಗೆ ಕಳೆದ 11 ವರ್ಷದಿಂದ ಶುದ್ದ ಕುಡಿಯುವ ನೀರನ್ನು ನೀಡುತ್ತಾ ಬಂದಿದ್ದೇನೆ‌. ಕೋವಿಡ್ ಸಂದರ್ಭದಲ್ಲಿ ನಿರಂತರವಾಗಿ ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಿದ್ದೇನೆ. ಕೋವಿಡ್ ನಿಂದ ಸಾರ್ವಜನಿಕರಿಗೆ ಆಂಬ್ಯುಲೆನ್ಸ್ ಕೊರತೆ ಉಂಟಾದಾಗ ಎರಡು ಖಾಸಗಿ‌ ಆಂಬ್ಯುಲೆನ್ಸ್ ಗಳನ್ನು ಒದಗಿಸಿ ಜನರಿಗೆ ವೈದ್ಯಕೀಯ ಸೇವೆ ನೀಡಿದ್ದೇನೆ. 2010 ಸೆಪ್ಟಂಬರ್ 10 ರಿಂದ ಇಂದಿನವರೆಗೂ ಸತತವಾಗಿ ಮೂರು ಟ್ಯಾಂಕರ್‌ಗಳ ಮೂಲಕ ದಿನಕ್ಕೆ 18 ಟ್ರಿಪ್‌ನಂತೆ ಜಾತಿ, ಧರ್ಮ, ಮೇಲು, ಕೀಳು ಎಂಬುದನ್ನೂ ನೋಡದೆ ತುಮಕೂರಿನ ಜನತೆಗೆ ಕುಡಿಯುವ ನೀರಿನ ದಾಹ ತೀರಿಸಿದ್ದೇನೆ.ಇದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಹಾಲಿ ಶಾಸಕರೇ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಗೆಳೆಯರ ಬಳಗ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರೊಂದಿಗೆ ಸೇರಿ ಅಗತ್ಯ ಇರುವವರ ಮನೆಗೆ ಮೂರು ಹೊತ್ತು ಊಟವನ್ನು ತಲುಪಿಸಿದ್ದೇನೆ. ಸಾರ್ವಜನಿಕ ಸ್ಥಳಗಳಲ್ಲಿಯೂ ಊಟದ ವ್ಯವಸ್ಥೆ ಮಾಡಿ ಜನರ ಹಸಿವನ್ನು ನೀಗಿಸಿದ್ದೇನೆ.
ತುಮಕೂರು ನಗರವನ್ನು ಕಾರ್ಯಕ್ಷೇತ್ರವಾಗಿಸಿಕೊಂಡು 2010 ರಿಂದಲೂ ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್,ಅಶಕ್ತ ಮಕ್ಕಳಿಗೆ ಶಾಲಾ ಶುಲ್ಕ,ಬಡಮಕ್ಕಳಿಗೆ ಸಮವಸ್ತ್ರ ವಿತರಣೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದೇನೆ. ಜನರು ಅಧಿಕಾರ ನೀಡಿದರೆ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡಲಿದ್ದೇನೆ.

ಮಾಜಿ ಶಾಸಕರೇ, 2013 ರಿಂದ 2018ರವರೆಗೆ ತುಮಕೂರು ನಗರದ ಶಾಸಕರಾಗಿದ್ದ ತಾವು ನಗರಕ್ಕೆ ನೀಡಿರುವ ಕೊಡುಗೆ ಏನು? 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಿ, ತುಮಕೂರು ನಗರಕ್ಕೆ ಮಂಜೂರು ಮಾಡಿದ್ದ ಮೆಡಿಕಲ್ ಕಾಲೇಜು ಎಲ್ಲಿ ಹೋಯಿತು? ಮೆಡಿಕಲ್ ಕಾಲೇಜಿಗಾಗಿ ನೀಡಿದ 6 ಎಕರೆ ಜಮೀನು ಮತ್ತು 620 ಕೋಟಿ ಹಣ ಯಾರ ಪಾಲಾಯಿತು. ತುಮಕೂರು ನಗರ ಶಾಸಕರಾಗಿ ಮೆಡಿಕಲ್ ನಿರ್ಮಾಣಕ್ಕೆ ನೀವು ಯಾವ ರೀತಿ ಕ್ರಮ ಕೈಗೊಂಡಿದ್ದೀರಾ? ಎಂಬುದನ್ನು ದಾಖಲೆಗಳ ಸಮೇತ ತುಮಕೂರು ನಗರದ ಜನತೆಯ ಮುಂದಿಡಬೇಕೆಂದು ಜೆಡಿಎಸ್ ಅಭ್ಯರ್ಥಿ ಎನ್.ಗೋವಿಂದರಾಜು ಅವರು ಒತ್ತಾಯಿಸಿದ್ದಾರೆ.

ತುಮಕೂರು ನಗರದ ಜನತೆ ಐದು ವರ್ಷಗಳ ಕಾಲ ನಿಮಗೆ ಶಾಸಕರನ್ನಾಗಿ ಅಧಿಕಾರ ನೀಡಿದ್ದರು. ಈ ಸಮಯದಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ ಎಷ್ಟು ಹಾಸ್ಟಲ್ ನಿರ್ಮಾಣ ಮಾಡಿದ್ದೀರಾ? ಯಾವ ಯಾವ ವಸತಿ ಯೋಜನೆಗಳ ಮೂಲಕ ಎಷ್ಟು ಜನ ಬಡವರಿಗೆ, ನಿರ್ಗತಿಕರಿಗೆ ಮನೆ ನಿರ್ಮಿಸಿದ್ದೀರಾ? ಅಲ್ಪಸಂಖ್ಯಾತರ ಅಭಿವೃದ್ದಿಗೆ ನೀವು ಸರಕಾರದಿಂದ ಎಷ್ಟು ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದ್ದೀರಾ? ದಲಿತ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಅಭಿವೃದ್ದಿಗೆ ನೀವು ತಂದ ಅನುದಾನ ಎಷ್ಟು? ಎಂಬುದನ್ನು ದಾಖಲೆಗಳ ಸಮೇತ ಸಾರ್ವಜನಿಕವಾಗಿ ತಿಳಿಸಿ,ಇಲ್ಲವೇ ಬಹಿರಂಗ ಚರ್ಚೆಗೆ ಬನ್ನಿ ಎಂಬುದು ನನ್ನ ಸವಾಲಾಗಿದೆ ಎಂದು ಎನ್.ಗೋವಿಂದರಾಜು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!