ಚಿಕ್ಕನಾಯಕನಹಳ್ಳಿ:
ಸಮಾಜವನ್ನು ಹಾಗೂ ದೇಶವನ್ನು ಒಡೆಯುವ ವಿಚ್ಛಿದ್ರಕಾರಿ ಶಕ್ತಿಗಳ ವಿರುಧ್ದ ಬಗ್ಗು ಬಡಿಯುವ ನಿಟ್ಟಿನಲ್ಲಿ ಸಾರ್ವಜನಿಕರು, ಪೊಲೀಸ್ ಸಿಬ್ಬಂದಿ ಗಳಿಗೆ, ಎಲ್ಲಾ ಸಹಕಾರ ನೀಡಬೇಕು, ಎಂದು, ಗೃಹ ಸಚಿವರೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶ್ರೀ ಆರಗ ಜ್ಞಾನೇಂದ್ರ ರವರು, ಇಂದಿಲ್ಲಿ ಕರೆ ನೀಡಿದರು.
ಸಚಿವರು ಇಂದು, ಚಿಕ್ಕನಾಯಕನಹಳ್ಳಿ ತಾಲ್ಲೂಕು ನೂತನ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು, ಉದ್ಘಾಟಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, “ದೇಶದ ಐಕ್ಯತೆ ಹಾಗೂ ಸಮಗ್ರತೆ” ಕಾಪಾಡಲು ಹಗಲಿರುಳು ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗಳ ಜತೆ ಎಲ್ಲರೂ ಕೈ ಜೋಡಿಸಬೇಕು, ಎಂದರು.
ರಾಜ್ಯದ ಪೊಲೀಸ್, ರಾಷ್ಟ್ರದಲ್ಲಿಯೇ ಅತ್ಯಂತ ದಕ್ಷ ಹಾಗೂ ಶಿಸ್ತಿನ ಪಡೆಗಳಲ್ಲಿ ಒಂದು, ಎಂಬ ಹಿರಿಮೆಯನ್ನು ಹೊಂದಿದ್ದು, ಸಿಬ್ಬಂದಿಗಳ ಮನೋಸ್ಥೈರ್ಯ ಹಾಗೂ ಕಾರ್ಯ ದಕ್ಷತೆ ಹೆಚ್ಚಿಸಲು ಆದ್ಯ ಗಮನ ನೀಡಲಾಗುತ್ತಿದೆ, ಎಂದರು.
ಮತಾಂಧ ಶಕ್ತಿಗಳು ಹಾಗೂ ಮಾದಕ ದ್ರವ್ಯ ವಸ್ತುಗಳ ಸೇವನೆ, ಸಾಗಾಟ ಹಾಗೂ ಇನ್ನಿತರ ಸಮಾಜ ವಿಧ್ರೋಹಿ ಕೃತ್ಯಗಳ ವಿರುದ್ಧ ಪೊಲೀಸರು ಹಗಲಿರುಳು ಕಣ್ಗಾವಲು ವಹಿಸಿದ್ದು, ಅವರಿಗೆ ನಮ್ಮೆಲ್ಲರ ಸಹಕಾರವೂ ಬೇಕು, ಎಂದು ಹೇಳಿದರು.

ಕಾನೂನು ಸಚಿವ ಶ್ರೀ ಮಾಧೂ ಸ್ವಾಮಿ ಯವರೂ, ಸಮಾರಂಭದಲ್ಲಿ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಾರ್ವಜನಿಕರ ಪಾತ್ರವೂ ಅತಿ ದೊಡ್ಡದು ಎಂದರು.
ಪೊಲೀಸ್ ಠಾಣೆಗಳು, ಸಾರ್ವಜನಿಕ ಸ್ನೇಹಿ ಆಗಿರಬೇಕು ಹಾಗೂ ಸೌಜನ್ಯ ಪೂರಿತ ಸೇವೆ ನೀಡುವ ಕೇಂದ್ರ ಗಳಾಗಬೇಕು ಎಂದು ಕಿವಿ ಮಾತು ಹೇಳಿದರು.
ಕೋವಿದ್ ಸಂಬಂಧಿತ ದಾಖಲಾದ ದೂರುಗಳ ಹಿಂತೆಗೆತ.
ಇದೇ ಸಂಧರ್ಬದಲ್ಲಿ, ಕಾನೂನು ಸಚಿವರು ಮಾತನಾಡುತ್ತ, ಕೊವಿಡ್ ನಿರ್ಭಂದ ಗಳನ್ನು ಉಲ್ಲಂಘನೆ ವಿರುದ್ಧ ಸಾರ್ವಜನಿಕರ ವಿರುದ್ಧ ದಾಖಲಿಸಲಾಗಿದ್ದ ಮೊಕದ್ದಮೆಗಳನ್ನು ಹಿಂತೆಗೆಯುವ ಅಗತ್ಯವಿದೆ ಎಂದು, ಪ್ರತಿಪಾದಿಸಿದರು.
ಇದರಿಂದ, ಪೊಲೀಸ್ ಇಲಾಖೆ, ಸಾರ್ವಜನಿಕರೂ ಮತ್ತು ನ್ಯಾಯಾಲಯಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದೂ ಹೇಳಿದರು.
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಾಹುಲ್ ಕುಮಾರ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.