ಗುಬ್ಬಿ: ಸಾಮಾಜಿಕ ನ್ಯಾಯಕ್ಕಾಗಿ ತುಳಿತಕ್ಕೆ ಒಳಗಾದ ದಲಿತರಲ್ಲಿ ಒಳಮೀಸಲಾತಿ ಜಾರಿಗೆ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿಯಾಗಬೇಕಿದೆ. ಈ ನಿಟ್ಟಿನಲ್ಲಿ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ವರದಿ ಜಾರಿಗೆ ಶಿಫಾರಸ್ಸು ಮಾಡಲು ಆಗ್ರಹಿಸಿ ಡಿಸೆಂಬರ್ ತಿಂಗಳ 11 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಆಟೋ ಶಿವರಾಜ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ತುಳಿತಕ್ಕೆ ಒಳಗಾದ ಜಾತಿ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡುವ ಅಂಬೇಡ್ಕರ್ ಅವರ ಕನಸಿನಂತೆ ಮೀಸಲಾತಿಗೆ ಸಂವಿಧಾನಬದ್ಧ ರಕ್ಷಣೆಯ ಅಗತ್ಯವಿದೆ. ಎಲ್ಲವೂ ತಿಳಿದ ಸರ್ಕಾರ ಜಾಣ ಮೌನ ಅನುಸರಿಸಿದೆ. ಸದಾಶಿವ ಆಯೋಗ ನೀಡಿದ ವರದಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ. ಈ ನಿಟ್ಟಿನಲ್ಲಿ ಉಗ್ರ ಹೋರಾಟವನ್ನು ಹತ್ತು ಲಕ್ಷ ದಲಿತರ ಜೊತೆ ನಡೆಯಲಿದೆ ಎಂದರು.
1997 ರಿಂದ ಆರಂಭವಾದ ಈ ಚಳವಳಿ ನಿರಂತರವಾಗಿ ನಡೆದಿದೆ. ನಮ್ಮ ಹಕ್ಕೊತ್ತಾಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಭರವಸೆ ನೀಡಿ ಮಾತು ತಪ್ಪಿವೆ. ಈ ನಿಟ್ಟಿನಲ್ಲಿ ಈ ತಿಂಗಳ 18 ರಂದು ಹರಿಹರದಲ್ಲಿನ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಯಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿದ್ದು, ಡಿಸೆಂಬರ್ 11 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಯದಲ್ಲಿ ವರದಿ ಜಾರಿಗೆ ಶಿಫಾರಸ್ಸು ಮಾಡಲು ರಾಜ್ಯ ಸರ್ಕಾರ ಮುಂದಾಗದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಉಗ್ರ ಹೋರಾಟ ಹಾಗೂ ಮುಂದಿನ ಚುನಾವಣೆಯಲ್ಲಿ ರಾಜಕೀಯ ನಿರ್ಣಯ ಕೈಗೊಂಡು ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.
ಮಾದಿಗ ದಂಡೋರ ಸಮಿತಿಯ ತಾಲ್ಲೂಕು ಅಧ್ಯಕ್ಷ ಜಿ.ಎನ್.ಮನೋಹರ್ ಮಾತನಾಡಿ ಈ ಒಳ ಮೀಸಲಾತಿ ಹೋರಾಟ ಜೊತೆಗೆ ನಾಗಮೋಹನದಾಸ್ ಹಾಗೂ ಕಾಂತರಾಜ ವರದಿಯನ್ನು ಬಹಿರಂಗ ಪಡಿಸಿ ಜಾರಿ ಮಾಡಬೇಕು. ಮಾದಿಗ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ ಕನಿಷ್ಠ 15 ಸ್ಥಾನ ನೀಡುವ ಕೆಲಸ ಎಲ್ಲಾ ರಾಜಕೀಯ ಪಕ್ಷಗಳು ಮಾಡಬೇಕು. ರಾಜ್ಯದ 43 ಸಾವಿರ ಪೌರ ಕಾರ್ಮಿಕರ ಕೆಲಸ ಖಾಯಂ ಮಾಡಬೇಕು ಎಂದು ಒತ್ತಾಯಿಸುವ ಹಕ್ಕೋತ್ತಾಯ ಮಾಡುತ್ತೇವೆ ಎಂದರು.
ಸಮಿತಿಯ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಲಕ್ಷ್ಮಿದೇವಮ್ಮ ಮಾತನಾಡಿ ಸಮಾಜದ ಅತೀ ಹಿಂದುಳಿದ ಹಾಗೂ ಸಾಮಾಜಿಕ ಅನ್ಯಾಯಕ್ಕೆ ಗುರಿಯಾದ ದಲಿತ ಸಮುದಾಯವನ್ನು ಕೇವಲ ಮತಗಳ ಬ್ಯಾಂಕ್ ಮಾಡಿಕೊಂಡ ರಾಜಕೀಯ ಪಕ್ಷಗಳು ಕೇವಲ ಆಶ್ವಾಸನೆ ನೀಡುತ್ತಾ ಮೂಗಿಗೆ ತುಪ್ಪ ಸವರಿದೆ. ನಮ್ಮಗಳ ಏಳಿಗೆಗೆ ಸಹಕರಿಸದ ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ಈ ಅಸಡ್ಡೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಬೆಂಗಳೂರು ನಗರ ಅಧ್ಯಕ್ಷ ರಾಪಟೆ ನರಸಿಂಹ, ಜಿಲ್ಲಾಧ್ಯಕ್ಷೆ ವಿಜಯಮ್ಮ, ಮುಖಂಡರಾದ ಗಂಗರಾಜು, ಶಿವಪ್ಪ, ಮಂಜೇಶ, ಜಗದೀಶ್, ಚೇಳೂರು ಶಿವನಂಜಪ್ಪ, ರಾಜಪ್ಪ, ಗಂಗಣ್ಣ, ಸ್ವಾಮಿ, ಬಸವರಾಜು ಇತರರು ಇದ್ದರು.