ಗುಬ್ಬಿ : ಐತಿಹಾಸಿಕ ಪ್ರಸಿದ್ಧ ಗುಬ್ಬಿಯ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಮೊದಲಿಂದಲೂ ನಡೆದುಕೊಂಡು ಬಂದ ಸಂಪ್ರದಾಯದಂತೆ ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ. ಪ್ರತಿ ಧಾರ್ಮಿಕ ಆಚರಣೆಗೆ ಹದಿನೆಂಟು ಕೋಮಿನ ಮುಖಂಡರ ಗಮನಕ್ಕೆ ತಂದು ನಡೆಯುತಿತ್ತು. ಆದರೆ ಅಲ್ಲಿನ ಕಾರ್ಯ ನಿರ್ವಹಣಾಧಿಕಾರಿ ಶ್ವೇತಾ ಎಂಬಾಕೆ ಎಲ್ಲಾ ನಿಯಮ ಗಾಳಿಗೆ ತೂರಿ ಏಕಮುಖಿ ನಿರ್ಧಾರ ಕೈಗೊಂಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಕೂಡಲೇ ಕ್ರಮ ವಹಿಸಿ ಸರಿಪಡಿಸಿದಿದ್ದಲ್ಲಿ ಮುಂದಿನ ಸೋಮವಾರ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾರ್ತಿಕ ಮಾಸದಲ್ಲಿ ಬರುವ ಹೂವಿನ ವಾಹನ ಇಡೀ ರಾಜ್ಯದಲ್ಲೇ ಪ್ರಖ್ಯಾತಿ ಹೊಂದಿದೆ. ಸಾವಿರಾರು ಭಕ್ತರು ಬರುವ ಈ ಉತ್ಸವ ಹಿಂದಿನಿಂದಲೂ ಹದಿನೆಂಟು ಕೋಮಿನ ನೇತೃತ್ವದಲ್ಲಿ ನಡೆಯುತ್ತದೆ. ಆಹ್ವಾನ ಪತ್ರಿಕೆ ಮುದ್ರಣಕ್ಕೆ ಮುನ್ನ ಒಂದು ಪೂರ್ವಭಾವಿ ಸಭೆ ನಡೆಸಿ ಸಲಹೆ ಸೂಚನೆಗಳನ್ನು ಪಡೆಯುವುದು ವಾಡಿಕೆ. ಆದರೆ ಆಡಳಿತ ಮಂಡಳಿಯ ಇಓ ಅದ ಶ್ವೇತಾ ಅವರು ಯಾವುದೇ ಮುಖಂಡರಿಗೂ ತಿಳಿಸದೆ ಆಹ್ವಾನ ಪತ್ರಿಕೆ ಮುದ್ರಿಸಿ ಎಲ್ಲಾ ಕೋಮಿನ ಮುಖಂಡರಿಗೆ ಅಪಮಾನಿಸಿದ್ದಾರೆ. ಎಂದು ಕಿಡಿಕಾರಿದರು.
ಒಂದು ಪೂರ್ವಭಾವಿ ಸಭೆ ನಡೆಸಲು ತಿಳಿಸಿದರೂ ನಿರ್ಲಕ್ಷ್ಯ ಮಾತನಾಡಿ ಬೇಕಾಬಿಟ್ಟಿ ಉತ್ತರ ನೀಡಿದ್ದಾರೆ. ಎ ದರ್ಜೆಯ ಈ ದೇವಾಲಯದ ಆಡಳಿತ ಹೀಗೆ ಹದಗೆಟ್ಟು ಅಲ್ಲಿಗೆ ಬರುವ ಮುಖಂಡರು, ಭಕ್ತರ ಜೊತೆ ಸಹ ಅನುಚಿತವಾಗಿ ಮಾತನಾಡುತ್ತಾರೆ. ಹೂವಿನ ವಾಹನ ಇಡೀ ಊರಿನ ಎಲ್ಲಾ ಭಕ್ತರು ಸೇರಿ ನಡೆಸುವ ದೊಡ್ಡ ಜಾತ್ರೆ. ಈ ತಿಂಗಳ 24 ರಂದು ನಡೆಯುವ ಈ ಉತ್ಸವದ ತಯಾರಿ ಮಾಡುವುದು ಎಲ್ಲಾ ಕೋಮಿನ ಜನರು ಎಂಬುದು ತಿಳಿದೂ ಈ ರೀತಿಯ ದೌರ್ಜನ್ಯದ ಮಾತು ಎಲ್ಲರನ್ನೂ ಕೆರಳಿಸಿದೆ. ಅವರ ಬೇಜವಾಬ್ದಾರಿತನಕ್ಕೆ ಕ್ರಮ ಕೈಗೊಳ್ಳಲು ಉಪವಿಭಾಗಾಧಿಕಾರಿಗಳ ಗಮನಕ್ಕೆ ತಂದರೆ ಯಾವುದೇ ಪ್ರಯೋಜನವಾಗಿಲ್ಲ ಎಂದ ಅವರು ಈಗಾಗಲೇ ಸಮಯ ಸಮೀಪಿಸಿದೆ. ವಾಹನದ ಎಲ್ಲಾ ತಯಾರಿ ಮಾಡುವುದು ಕಷ್ಟವಾಗಿದೆ. ಈಗ 15 ರಂದು ಪೂರ್ವಭಾವಿ ಸಭೆ ಸರಿಯಲ್ಲ. ಕೂಡಲೇ ಎರಡು ದಿನದಲ್ಲಿ ಸಭೆ ಆಯೋಜಿಸಿ ನಮ್ಮ ಪ್ರಶ್ನೆಗೆ ಉತ್ತರ ನೀಡಿ. ಮಹಿಳಾ ಅಧಿಕಾರಿ ಶ್ವೇತಾ ಸಹ ಸಭೆಯಲ್ಲಿ ಇರಬೇಕು ಎಂದು ಒತ್ತಾಯಿಸಿದರು.
ಯಜಮಾನ್ ಕುಮಾರಯ್ಯ ಮಾತನಾಡಿ ಕಳೆದ ಎರಡು ವರ್ಷದಿಂದ ದೇವಾಲಯದ ಆಡಳಿತ ವ್ಯವಸ್ಥೆ ಕುಸಿಯುತ್ತಿದೆ. ಶ್ವೇತಾ ಎಂಬ ಮಹಿಳಾ ಅಧಿಕಾರಿ ಕೆಲಸವೇ ತಿಳಿದಿಲ್ಲ. ಮನಬಂದಂತೆ ವರ್ತಿಸುತ್ತಾ ನಿಯಮಗಳನ್ನು ಮುರಿಯುತ್ತಿದೆ. ದೇವಾಲಯದ ಚಾರ್ಚ್ ನನಗೆ ಕೊಟ್ಟಿಲ್ಲ ಎನ್ನುವ ಹಾರಿಕೆ ಉತ್ತರ ನೀಡುತ್ತಾ ಮನಸ್ಸೋ ಇಚ್ಚೆ ವರ್ತಿಸುತ್ತಿದ್ದಾರೆ. ಪ್ರತಿ ತಿಂಗಳು ಹುಂಡಿ ಹಣ ಎಣಿಕೆ ನಡೆಯುತ್ತದೆ. ಈ ಸಮಯದಲ್ಲಿ ಶಿಷ್ಟಾಚಾರ ಪಾಲಿಸಿಲ್ಲ. ಬ್ಯಾಂಕ್, ಪೊಲೀಸ್ ಸಿಬ್ಬಂದಿ ಇಲ್ಲದೆ ಯಾವುದೇ ವಿಡಿಯೋ ಮಾಡಿಸದೆ ಹಣ ಎಣಿಕೆ ನಡೆದರೆ ಹೇಗೆ. ಈ ಬಗ್ಗೆ ಉಪ ವಿಭಾಗಾಧಿಕಾರಿಗಳ ಗಮನಕ್ಕೆ ತಂದರೂ ಮಹಿಳಾ ಅಧಿಕಾರಿಯ ಪರ ಮಾತನಾಡುತ್ತಾರೆ. ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನೇರ ಆರೋಪ ಮಾಡಿದರು.
ಪಪಂ ಸದಸ್ಯ ರೇಣುಕಾ ಪ್ರಸಾದ್ ಮಾತನಾಡಿ ಗುಬ್ಬಿಯಪ್ಪನ ಜಾತ್ರೆ ಹಾಗೂ ಹೂವಿನ ವಾಹನ ರಾಜ್ಯದಲ್ಲೇ ಪ್ರಸಿದ್ದಿಗೊಂಡಿದೆ. ಈ ಜಾತ್ರೆ ಹದಿನೆಂಟು ಕೋಮಿನ ನೇತೃತ್ವದಲ್ಲಿ ನಡೆಯಲಿದೆ. ಈ ಬಗ್ಗೆ ತಿಳಿದೂ ಎಲ್ಲಾ ಕೋಮಿನ ಬಗ್ಗೆ ತಾತ್ಸಾರ ತೋರಿ ಏಕಮುಖ ನಿರ್ಧಾರ ಮಾಡಿದ ದೇವಾಲಯದ ಇಓ ಶ್ವೇತಾ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಧಾರ್ಮಿಕ ಆಚರಣೆಯ ತಕ್ಕಂತೆ ದೇವಾಲಯ ನಡೆಯಬೇಕು. ಆದರೆ ಇಲ್ಲಿ ಕೇವಲವಾಗಿ ನಡೆದುಕೊಂಡು ಆಡಳಿತ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಹೂವಿನ ವಾಹನ ಪೂರ್ವಭಾವಿ ಸಭೆ ಕೂಡಲೇ ನಡೆಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಆಹ್ವಾನ ಪತ್ರಿಕೆಯಲ್ಲಿ ಪ್ರತಿ ಬಾರಿ ಶಾಸಕರು, ಸಂಸದರ ಹೆಸರು ಮುದ್ರಿತವಾಗುತಿತ್ತು. ಈ ಬಾರಿ ಅವರ ಹೆಸರು ಕೈಬಿಟ್ಟು ಆಡಳಿತ ಮಂಡಳಿಯ ಬೇಜವಾಬ್ದಾರಿ ಪ್ರದರ್ಶನವಾಗಿದೆ ಎಂದು ಪಪಂ ನಾಮಿನಿ ಸದಸ್ಯ ಬಸವರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಪಪಂ ನಾಮಿನಿ ಸದಸ್ಯ ಪ್ರಕಾಶ್, ಪಣಗಾರ ನಿಜಗುಣಯ್ಯ, ಸೋಮಶೇಖರಯ್ಯ, ಬಲರಾಮಯ್ಯ, ಶಿವಕುಮಾರ್, ನಾಗರಾಜು, ಅರ್ಜುನ್, ಅನಿಲ್ ಇತರರು ಇದ್ದರು.