ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಂಜಿನಿಯರ್ ಗಳ ಜಗಳ : ಮುಜುಗರ ತಂದ ಪೊಲೀಸ್ ದೂರು ಗುತ್ತಿಗೆದಾರರಿಗೆ ಹೆಚ್ಚು ಆತಂಕ..!?

ಗುಬ್ಬಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಹಾಗೂ ಜೆಇ ನಡುವಿನ ವೈಮನಸ್ಯ ತಾರಕಕ್ಕೇರಿ ಮಾತಿನ ಚಕಮಕಿಯು ಜಗಳ, ನಿಂದನೆ, ಹಲ್ಲೆ ಎಂಬ ಹಂತಕ್ಕೆ ತಲುಪಿಗುಬ್ಬಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ತಾಲ್ಲೂಕಿನ ಉನ್ನತ ಮಟ್ಟದ ಅಧಿಕಾರಿಗಳ ಈ ವರ್ತನೆ ಇಡೀ ತಾಲ್ಲೂಕಿನ ಜನತೆ ಆಲೋಚಿಸುವಂತಾಗಿದೆ.

ಕಳೆದೆರಡು ವರ್ಷದಿಂದ ಕೇಂದ್ರ ಸರ್ಕಾರ ನೀಡಿದ ಬಹು ನಿರೀಕ್ಷೆಯ ಜಲ ಜೀವನ್ ಮಿಷನ್ ಯೋಜನೆ ತಾಲ್ಲೂಕಿನ ಗ್ರಾಮೀಣ ಜನರಿಗೆ ಕುಡಿಯುವ ನೀರು ಒದಗಿಸುವ ದೊಡ್ಡ ಯೋಜನೆಯಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜವಾಬ್ದಾರಿ ನಿರ್ವಹಿಸಬೇಕಿದೆ. ನಮ್ಮ ಗುಬ್ಬಿ ತಾಲ್ಲೂಕಿಗೆ 200 ಕೋಟಿ ರೂಗಳ ಬೃಹತ್ ಯೋಜನೆ ಇದಾಗಿದ್ದು, ಇದರ ಕೆಲಸ ಕಾರ್ಯಗಳ ಪ್ರಕ್ರಿಯೆ ಕಳೆದ ಒಂದು ವರ್ಷದಿಂದ ನಡೆದು ಈಗ ಕಾಮಗಾರಿಗಳು ಆರಂಭವಾಗಿದೆ. ಆದರೆ ಇದರ ಜವಾಬ್ದಾರಿ ಹೊತ್ತ ಇಲಾಖೆಯ ಎಇಇ ಸುರೇಶ್ ಹಾಗೂ ಜೆಇ ಮೇಘನಾಥ್ ಕಳೆದ ಮೂರು ದಿನಗಳ ಹಿಂದೆ ಸಂಜೆ ವೇಳೆ ಜಗಳ ಮಾಡಿಕೊಂಡು ಗುಬ್ಬಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಲ್ಲೆ ಮತ್ತು ನಿಂದನೆ ಪ್ರಕರಣ ದಾಖಲಿಸುವಂತೆ ಜೆಇ ಮೇಘನಾಥ್ ಕೊಟ್ಟ ದೂರು ಮೂರು ದಿನದಿಂದ ಮಾತುಕತೆ ಸಂಧಾನದಲ್ಲೇ ಸಾಗಿದೆ. ಪೊಲೀಸ್ ಅಧಿಕಾರಿಗಳು ಸಹ ಇವರಿಬ್ಬರ ಜಗಳಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಆಗದೇ ಸುಮ್ಮನಾಗಿದ್ದಾರೆ. ಉನ್ನತ ಮಟ್ಟದ ಅಧಿಕಾರಿಗಳ ಈ ವರ್ತನೆ ಇಡೀ ತಾಲ್ಲೂಕಿನ ಜನತೆ ಮುಂದೆ ನಗೆ ಪಾಟಲಾಗಿದೆ. ಈ ಘಟನೆ ಪಂಚಾಯತ್ ರಾಜ್ ಇಲಾಖೆ ಸಿಬ್ಬಂದಿಗಳು ಇರಸು ಮುರುಸುಗೆ ಒಳಗಾಗಿದ್ದಾರೆ.

ಜಗಳಕ್ಕೆ ಜೆಜೆಎಂ ಯೋಜನೆ ಕಾರಣವೇ..?

ತಾಲ್ಲೂಕಿನಲ್ಲಿ ಮನೆ ಮನೆಗೆ ನಳ ಸಂಪರ್ಕ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಕೋಟ್ಯಾಂತರ ರೂಗಳ ಈ ಯೋಜನೆಯಲ್ಲಿ ಗುಬ್ಬಿ ತಾಲ್ಲೂಕಿಗೆ 200 ಕೋಟಿ ಅನುದಾನ ಬಂದಿದೆ. ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮುಂದಾಗಿದ್ದು, ತಾಲ್ಲೂಕಿನಲ್ಲೂ ಸಹ ಈ ಯೋಜನೆ ಕೆಲಸ ಚುರುಕಿನಿಂದ ನಡೆದು ಇಲಾಖೆಯ ಕಚೇರಿಯೇ ಖಾಸಗಿ ಕಟ್ಟಡಕ್ಕೆ ಬಾಡಿಗೆಗೆ ವರ್ಗವಾಗಿದೆ. ಪಂಚಾಯತ್ ರಾಜ್ ಇಲಾಖೆ ಕಚೇರಿಯ ಜೊತೆಯಲ್ಲೇ ಇದ್ದ ಕಚೇರಿ ದಿಢೀರ್ ಬದಲಾಗಿದ್ದು ಯಾಕೆ ಎನ್ನುವ ಹೊತ್ತಿಗೆ ಇಂಜಿನಿಯರ್ ಗಳ ಜಗಳ ಸಾರ್ವಜನಿಕ ಚರ್ಚೆಯಾಗಿರುವುದು ಇಲ್ಲಿನ ಮೇಲಾದಾಯ ಬಗ್ಗೆ ರುಜುವಾತು ಮಾಡುತ್ತಿದೆ. ಜನರೇ ಬಾರದ ಇಲಾಖೆ ಕಚೇರಿಗೆ ಗುತ್ತಿಗೆದಾರರ ದಂಡು ಆಗಮಿಸಿದ್ದು ಎಲ್ಲವೂ ಚರ್ಚಿತ ವಿಚಾರವಾಗಿದೆ.

ಗುತ್ತಿಗೆದಾರರಲ್ಲೇ ಕಂಡ ಹೆಚ್ಚು ಆತಂಕ…!!

ಜಲ ಜೀವನ್ ಮಿಷನ್ ಯೋಜನೆ ಅಪ್ಪಟ ಗ್ರಾಮೀಣ ಜನರ ಕೆಲಸವಾಗಿದೆ. ಮನೆ ಮನೆಗೆ ನಳ ಸಂಪರ್ಕ ಗುತ್ತಿಗೆ ಪಡೆವ ಗುತ್ತಿಗೆದಾರರು ಬಿಲ್ ಗಾಗಿ ಇದೇ ಇಂಜಿನಿಯರ್ ಗಳ ಬಳಿ ದುಂಬಾಲು ಬೀಳುತ್ತಾರೆ. ಆದರೆ ಈ ಅಧಿಕಾರಿಗಳೇ ಜಗಳ ಮಾಡಿಕೊಂಡು ಪೊಲೀಸ್ ಠಾಣೆ ತಲುಪಿರುವುದು ಆತಂಕ ಮೂಡಿಸಿದೆ. ನಾಲ್ಕು ದಿನ ಮುಟ್ಟಿದ ಜಗಳ ಅಂತ್ಯ ಕಾಣುವುದೇ ಎಂದು ಗುತ್ತಿಗೆದಾರರು ಸಹ ಪೊಲೀಸ್ ಠಾಣೆ ಸುತ್ತಲೂ ಕಾಣಿಸುತ್ತಿರುವುದು ಅನಿವಾರ್ಯವೇ ಅಥವಾ ಅಧಿಕಾರಿಗಳ ಪರ ವಿರೋಧ ನಿಲ್ಲುವುದೇ ಎಂಬುದು ತಿಳಿಯದಾಗಿತ್ತು. ಜಗಳ ಮಾಡಿಕೊಂಡ ಇಂಜಿನಿಯರ್ ಗಳಿಗಿಂತ ಗುತ್ತಿಗೆದಾರರ ಆತಂಕವೇ ಪೊಲೀಸ್ ಠಾಣೆ ಸುತ್ತ ಆವರಿಸಿತ್ತು.

ಒಟ್ಟಾರೆ ಗ್ರಾಮೀಣ ಜನರಿಗೆ ಜಲ ಜೀವನ್ ಮಿಷನ್ ಯೋಜನೆ ಮೂಲಕ ನೀರು ಕುಡಿಸುವ ಬದಲು ಇಂಜಿನಿಯರ್ ಗಳು ಪೊಲೀಸ್ ಠಾಣೆಯಲ್ಲಿ ನೀರು ಕುಡಿಯುತ್ತಾ ಇರುವುದು ವಿಪರ್ಯಾಸವೇ ಸರಿ. ಉನ್ನತ ಹುದ್ದೆಗೆ ಅದಕ್ಕಿರುವ ಗೌರವ ಉಳಿಸಿ ಗಳಿಸಿಕೊಳ್ಳುವ ಬದಲು ಹೀಗೆ ಅವಾಚ್ಯ ಶಬ್ದಗಳಿಂದ ಜಗಳ ಆಡಿರುವುದು ಎಷ್ಟು ಸರಿ ಎನ್ನುವ ಬಿಸಿ ಚರ್ಚೆ ನಡೆದಿದೆ. ರಾಜೀ ಸಂಧಾನ ಮಾಡಿದರೂ ಒಡೆದು ಮನಸ್ಸು ಕೆಲಸ ಮಾಡದು. ಇಬ್ಬರನ್ನೂ ವರ್ಗಾಯಿಸಬೇಕು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

: ಪೊಲೀಸ್ ಠಾಣೆ ಮೆಟ್ಟಿಲೇರುವ ಹಂತ ತಲುಪಿರುವ ಇಂಜಿನಿಯರ್ ಗಳ ಜಗಳ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಮೊದಲೇ ವಿಚಾರ ತಿಳಿದಿದ್ದರೆ ಕಚೇರಿ ಹಂತದಲ್ಲೇ ನಿರ್ಧರಿಸುತ್ತಿದ್ದೇವು. ಸರ್ಕಾರಿ ಕೆಲಸಗಳಿಗೆ ಯಾವುದೇ ತೊಂದರೆ ಆಗದಂತೆ ಇಬ್ಬರೂ ಅಧಿಕಾರಿಗಳಿಂದ ಲಿಖಿತ ರೂಪದಲ್ಲಿ ಹೇಳಿಕೆ ಪಡೆದು ಕೂಡಲೇ ತೀರ್ಮಾನ ಕೈಗೊಳ್ಳುತ್ತೇವೆ.

  • ರವೀಶ್, ಕಾರ್ಯ ನಿರ್ವಾಹಕ ಅಭಿಯಂತರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತುಮಕೂರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!