ಮಧುಗಿರಿ: ಕಸಬಾ ಹೋಬಳಿಯ ಹರಿಹರಪುರ ಗೇಟ್ ಬಳಿ ಇನ್ನೋವಾ ಕಾರು ಮತ್ತು ಹೊಂಡಾ ಆಕ್ಟಿವಾ ಬೈಕ್ ನಡುವೆ ನಡೆದ ಅಪಘಾತದಲ್ಲಿ ಹೊಂಡಾ ಆಕ್ಟಿವಾ ಚಲಾಯಿಸುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಸರಿ ಸುಮಾರು ೫.೪೫ರಲ್ಲಿ ನಡೆದಿದೆ.
ಮಧುಗಿರಿ ಪಟ್ಟಣದಲ್ಲಿರುವ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಬೆಲ್ಲದ ಮಡಗು ಗ್ರಾಮದ ರಮೇಶ್ ಅವರ ಪತ್ನಿ ಪೂರ್ಣಿಮಾ ಅವರು ಸಾಯಂಕಾಲ ಕಚೇರಿ ಕಾರ್ಯ ಮುಗಿಸಿಕೊಂಡು ತಮ್ಮ ಊರಾದ ಬೆಲ್ಲದ ಮಡಗುಗೆ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಇನ್ನೋವಾ ಕಾರು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಬಡವನಹಳ್ಳಿ ಪೊಲೀಸ್ ಸ್ಟೇಷನ್ ಎಎಸ್‌ಐ ಸುರೇಶ್, ಶ್ರೀರಂಗಯ್ಯ, ಶಿವಕುಮಾರ್ ನಾರಾಯಣಸ್ವಾಮಿ, ಸತೀಶ್ ಗೌಡ್ರು,ಭೇಟಿ ನೀಡಿ ಮೃತದೇಹವನ್ನು ಮಧುಗಿರಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
ಕಾರು ತಡೆದ ಗ್ರಾಮಸ್ಥರು: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗುತ್ತಿದ್ದ ಇನ್ನೋವಾ ಕಾರಿನ ಮಾಹಿತಿಯನ್ನು ಪೊಲೀಸರು ನೇರಳೆಕೆರೆ ಗ್ರಾಮದ ಜನತೆಗೆ ಕೂಡಲೇ ತಿಳಿಸಿದ್ದು ಗ್ರಾಮಸ್ಥರು ಕಾರನ್ನು ತಡೆದು ನಿಲ್ಲಿಸಿದ್ದು. ಈ ವೇಳೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಕಾನೂನು ರೀತ್ಯ ಕ್ರಮ ಕೈಗೊಂಡಿದ್ದಾರೆ.
ವರದಿ ರಘುನಾಥ್ ಮಧುಗಿರಿ