ಪ್ರಜಾಪ್ರಭುತ್ವ ಅನ್ವಯ ಸದಸ್ಯರಿಂದಲೇ ದಸಂಸ ಸಂಚಾಲಕರ ಆಯ್ಕೆ : ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ

ಗುಬ್ಬಿ: ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ದಲಿತ ಸಂಘರ್ಷ ಸಮಿತಿಯ ಸಮಿತಿಯ ಪುನರ್ ರಚನೆ ಮಾಡಲಾಗುವುದು. ಈಗ ಸದಸ್ಯತ್ವ ನೋಂದಣಿ ಕಾರ್ಯ ಪೂರೈಸಿ ನಂತರ ಸದಸ್ಯರಿಂದಲೇ ತಾಲ್ಲೂಕು ಸಂಚಾಲಕರು ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಇದೇ ತಿಂಗಳ 14 ರಂದು ಸಮಿತಿಯ ಕಾರ್ಯಕರ್ತರ ಸಭೆ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಲಿತ ಸಂಘರ್ಷ ಸಮಿತಿಯ ಅಧಿಕೃತ ಸಂಘಟನೆ ಎಂ.ಗುರುಮೂರ್ತಿ ಬಣ ಎಂಬುದು ಕೋರ್ಟ್ ಮೂಲಕ ರುಜುವಾತು ಆಗಿದೆ. ಸಾಮಾಜಿಕ ನ್ಯಾಯ ಹೋರಾಟವನ್ನು ನಡೆಸಲು ಹಾದಿ ಮಾಡಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ ಹಾಗೂ ಪ್ರೊ. ಬಿ.ಕೃಷ್ಣಪ್ಪ ಅವರ ಹೋರಾಟದಂತೆ ಸಾಗಲು ಸಮಿತಿಯು ಬಲವರ್ಧನೆ ಆಗಬೇಕು. ಈ ಕಾರ್ಯಕ್ಕೆ ಎಲ್ಲಾ ದಲಿತರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಜಾತ್ಯತೀತ ನಿಲುವು ತಾಳಿರುವ ಸಮಿತಿಗೆ ಜಾತಿ ಬಣ್ಣ ಹಚ್ಚುವುದು ಬೇಡ. ಸಮಾಜದಲ್ಲಿ ತುಳಿತಕ್ಕೆ ಒಳಗಾದವರು, ಶೋಷಿತ ವರ್ಗ ಹಾಗೂ ಅನ್ಯಾಯಕ್ಕೆ ಗುರಿಯಾದವರ ಪರ ನಿಂತು ನ್ಯಾಯಯುತ ಹೋರಾಟ ಮಾಡುವ ಕೆಲಸ ಮಾಡೋಣ ಎಂದ ಅವರು ಈಗಾಗಲೇ 800 ನೋಂದಣಿ ಕಾರ್ಯ ತಾಲ್ಲೂಕಿನಲ್ಲಿ ನಡೆದಿದೆ. ಪಾವಗಡ ತಾಲ್ಲೂಕಿನಲ್ಲಿ ಸಮಿತಿ ರಚನೆ ಮಾಡಿದ್ದು ಗುಬ್ಬಿಯಲ್ಲೂ ಸಹ ಸಮಿತಿ ರಚನೆ ನಡೆಯಲಿದೆ. ನಂತರ ಸಂಘಟನೆಗೆ ಹೋಬಳಿ ಘಟಕ ರಚನೆ ಮತ್ತು ಈಗ ಚಾಲ್ತಿ ಇರುವ 50 ಗ್ರಾಮ ಘಟಕದ ಜೊತೆ ಉಳಿದ ಗ್ರಾಮದಲ್ಲಿ ದಸಂಸ ಘಟಕ ರಚನೆ ಮಾಡಲಾಗುವುದು. ತಾಲ್ಲೂಕಿನಲ್ಲಿ ಒಂದು ಘಟಕ ಕ್ರಿಯಾಶೀಲವಾಗಿರಲು ಯುವಕರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗುವುದು ಎಂದರು.

ಇದೇ ತಿಂಗಳ 14 ರಂದು ನಡೆಯುವ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರ ಸಮಾವೇಶ ಹಾಗೂ ಪದಾಧಿಕಾರಗಳ ಆಯ್ಕೆ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಅದ್ದೂರಿ ಮೆರವಣಿಗೆ ಪ್ರವಾಸಿ ಮಂದಿರದವರೆಗೆ ಬರಲಿದೆ. ನಂತರ ಡಿ ಎಸ್ ಎಸ್ ಅಭಿವೃದ್ಧಿಗೆ ಶ್ರಮಿಸಿ ಮರೆಯಾದ ಹಿರಿಯ ಚೇತನಗಳಿಗೆ ನುಡಿ ನಮನ ಕಾರ್ಯಕ್ರಮ ನಡೆಸಲಾಗುವುದು ಎಂದು ವಿವರಿಸಿದ ಅವರು ವೇದಿಕೆ ಕಾರ್ಯಕ್ರಮಕ್ಕೆ ದಸಂಸ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಪ್ರಗತಿಪರ ಚಿಂತಕರಾದ ಎ.ಜೆ.ಖಾನ್, ದೊರೈರಾಜ್, ರತ್ನಮ್ಮ, ರೈತ ಸಂಘದ ಎ.ಗೋವಿಂದರಾಜ್ ಇತರರು ಭಾಗವಹಿಸಿ ನಮ್ಮ ಸಂಘಟನೆಗೆ ಮಾರ್ಗದರ್ಶನ ನೀಡಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ವಿರೂಪಾಕ್ಷಪ್ಪ, ಗಂಗಾರಾಂ, ಚೇಳೂರು ಶಿವನಂಜಪ್ಪ, ಕೀರ್ತಿ, ನರೇಂದ್ರಕುಮಾರ್, ಮಹದೇವಯ್ಯ, ಲಾವಣ್ಯ, ಸ್ವಾಮಿ, ದೊಡ್ಡಯ್ಯ, ಮಧು ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!