ತುಮಕೂರು: ಲಿಂಗಾಯಿತ ಧರ್ಮಕ್ಕಾಗಿ ಮುಂದಿನ ದಿನಗಳಲ್ಲಿ ಹೋರಾಟಗಳು ಹೆಚ್ಚಲಿವೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಯುವ ಘಟಕದ ರಾಜ್ಯಾಧ್ಯಕ್ಷರಾದ ಮನೋಹರ್ ಅಬ್ಬಿಗೆರೆ ತಿಳಿಸಿದರು.
ನಗರದ ಸಿದ್ದಗಂಗಾ ಮಠದ ವಸ್ತುಪ್ರದರ್ಶನದ ಆವರಣದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯಿತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಬೆಂಗಳೂರು ವಿಭಾಗೀಯ ಮಟ್ಟದ ಮಹಿಳಾ ಮತ್ತು ಯುವ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಕೊನೆಯ ದಿನವಾದ ಭಾನುವಾರ ಮಾತನಾಡಿ, ವೀರಶೈವ ಲಿಂಗಾಯಿತ ಧರ್ಮ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ನಮ್ಮ ಹೋರಾಟ ಮುಂದುವರೆಯಲಿದೆ. ಆ ಮೂಲಕ ತಮ್ಮ ಹಕ್ಕನ್ನು ಕೇಳುವ ಕೆಲಸವನ್ನು ಮುಂದುವರಿಸುವುದಾಗಿ ಹೇಳಿದರು.
ಮುಂದಿನ ದಿನದಲ್ಲಿ ವೀರಶೈವ ಲಿಂಗಾಯಿತರ ಶಕ್ತಿ ಪ್ರದರ್ಶನ ಮತ್ತಷ್ಟು ಜೋರಾಗಲಿದೆ ಎಂದ ಅವರು, ತುಮಕೂರಿನಲ್ಲಿ ಎರಡು ದಿನಗಳ ಕಾಲ ಬೆಂಗಳೂರು ವಿಭಾಗೀಯ ಮಟ್ಟದ ಕಾರ್ಯಕ್ರಮ ಲಿಂ.ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಮಹಾಸ್ವಾಮೀಜಿ ಮತ್ತು ನಾಡಿನ ಹರಗುರುಚರ ಮೂರ್ತಿಗಳ ಆಶೀರ್ವಾದದಿಂದ ಸಂಪೂರ್ಣ ಯಶಸ್ವಿಯಾಗಿದ್ದು ಈ ಮೂಲಕ ಸಾಮಾಜಿಕ ಕನಸಿನೊಂದಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಬಿತ್ತಿದ ಬಸವಣ್ಣನವರ ಸಮುದಾಯ ನಡೆಯಲಿದೆ ಎಂದರು.
ತುಮಕೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮುದಾಯಕ್ಕೆ ಮುಖ್ಯವಾಗಿ ಯುವ ಪೀಳಿಗೆಗೆ ಹಾಗೂ ಮಹಿಳೆಯರಿಗೆ ಒಂದು ಒಳ್ಳೆಯ ಸಂದೇಶ ರವಾನೆಯಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವನ್ನು ವೀರಶೈವ ಲಿಂಗಾಯಿತ ಎಂದು ಅಜೆಂಡಾದಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸಮಾಜದಲ್ಲಿರುವ ೧೦೮ ಉಪಪಂಗಡಗಳನ್ನು ಒಟ್ಟುಗೂಡಿಸಿ ಎಲ್ಲರೂ ಒಂದೇ ಎನ್ನುವ ಸಂದೇಶ ಸಾರುವ ಮೂಲಕ ನಮ್ಮ ನಮ್ಮ ಶಕ್ತಿ ಪ್ರದರ್ಶನ ನಡೆಯುತ್ತದೆ. ಮುಂದಿನ ದಿನದಲ್ಲಿ ಯುವ ಸಮುದಾಯವನ್ನು ಮತ್ತಷ್ಟು ಜಾಗೃತಗೊಳಿಸಲು ಬೃಹತ್ ಸಮಾವೇಶವನ್ನು ಆಯೋಜಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಮುಕ್ತಾಂಬ ಬಿ, ಯುವ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್ ಕುಮಾರ್ ಪಟೇಲ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.