ಗುಬ್ಬಿ: ದೇಶದ ಅಭಿವೃದ್ಧಿಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಗಮನ ನೀಡುವ ಕೆಲಸ ಸರ್ಕಾರ ಮಾಡಬೇಕಿದೆ. ಸೇವೆಗೆ ನಿಜ ಅರ್ಥ ನೀಡುವ ಈ ಎರಡೂ ಕ್ಷೇತ್ರಕ್ಕೆ ಮಹತ್ವ ನೀಡಿದರೆ ಮಾತ್ರ ಅಭಿವೃದ್ಧಿಗೆ ಅರ್ಥ ಸಿಗಲಿದೆ ಎಂದು ಶಾಸಕ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಗುದ್ದಲಿಪೂಜೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ವರ್ಷವೂ ಶಿಕ್ಷಣ ಇಲಾಖೆಗೆ ಬಜೆಟ್ ನಲ್ಲಿ ಕೇವಲ 23 ಸಾವಿರ ಕೋಟಿ ರೂಗಳು ಮೀಸಲಿಡಲಾಗಿದೆ. ಈ ಹಣ ಶಿಕ್ಷಣ ಇಲಾಖೆಯ ಶಿಕ್ಷಕರ ವೇತನ ಹಾಗೂ ಬಿಸಿಯೂಟ ಯೋಜನೆಗೆ ಸಾಲುತ್ತದೆ. ಕೇವಲ ಇಲಾಖೆ ನಿರ್ವಹಣೆಗೆ ಬಳಸಿದರೆ ಕಟ್ಟಡ ಇನ್ನಿತರ ಕೆಲಸಗಳಿಗೆ ಕೊರತೆ ಕಾಣುತ್ತಿದೆ ಎಂದು ವಿಷಾದಿಸಿದರು.
ದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಬಹಳ ಅದ್ಬುತವಾಗಿ ನಿರ್ಮಿಸಲಾಗಿದೆ. ಅಲ್ಲಿನ ಅತ್ಯಾಧುನಿಕ ಸ್ಪರ್ಶದ ಶಾಲೆಗಳು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿವೆ. ಶಿಕ್ಷಣ ರಂಗಕ್ಕೆ ಅಲ್ಲಿ ಶೇಕಡಾ 40 ರಷ್ಟು ಹಣ ಮೀಸಲಿಟ್ಟಿದೆ. ಇದೇ ಮಾದರಿ ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ರಾಜ್ಯದ ಇತಿಹಾಸದಲ್ಲಿ ಈ ವರ್ಷ ಮಾತ್ರ 500 ಕೋಟಿ ವಿಶೇಷ ಅನುದಾನ ಒದಗಿಸಿರುವುದು ಸಾರ್ಥಕ ಎನಿಸಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಕಟ್ಟಡಕ್ಕೆ ಕಾಯಕಲ್ಪ ಸಿಗಲಿದೆ ಎಂದರು.
ಗುಣಮಟ್ಟದ ಶಿಕ್ಷಣ ಸಿಗುವುದು ಕೇವಲ ಸರ್ಕಾರಿ ಶಾಲೆಯಲ್ಲಿ ಮಾತ್ರ ಎನ್ನುವ ಅಂಶ ಪೋಷಕರು ಮನದಟ್ಟು ಮಾಡಿಕೊಳ್ಳಬೇಕು. ಅರ್ಹ ಶಿಕ್ಷಣ ಪಡೆದ ಶಿಕ್ಷಕರನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿ ಆಯ್ಕೆ ಮಾಡುವ ಇಲಾಖೆ ಗುಣಮಟ್ಟ ಶಿಕ್ಷಣಕ್ಕೆ ಒತ್ತು ನೀಡಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕೂ ಸರ್ಕಾರ ಹೆಚ್ಚು ನಿಗಾವಹಿಸಿದೆ. ಬಡ ಮಕ್ಕಳೇ ಹೆಚ್ಚು ವಿದ್ಯಾಭ್ಯಾಸ ಮಾಡುವ ಸರ್ಕಾರಿ ಶಾಲೆಗೆ ಅವಶ್ಯ ಕಟ್ಟಡ ತರಲು ನಾನು ಶಿಕ್ಷಣ ಸಚಿವನಾಗಿದ್ದ ಕೊಂಚ ಅವಧಿಯಲ್ಲಿ ಅನುದಾನ ಮಂಜೂರು ಮಾಡಿದೆ. ನಮ್ಮ ತಾಲ್ಲೂಕಿನಲ್ಲೂ 255 ಶಾಲೆಯ ಕಟ್ಟಡಗಳು ಮರು ಜೀವ ಪಡೆಯುತ್ತಿವೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಲ್ಲಿ ತಾಲ್ಲೂಕಿನ ಎಲ್ಲಾ ಶಾಲೆಯ ವಾತಾವರಣ ಸರಿಪಡಿಸುವ ಕೆಲಸ ಮಾಡಲಾಗಿದೆ. ಶಾಲೆಗಳ 18.38 ಕೋಟಿ ಅನುದಾನ ಬಳಕೆ ಮಾಡಲಾಗಿದೆ. 137 ಹೊಸ ಕೊಠಡಿ ನಿರ್ಮಾಣ 292 ಶಾಲೆಗಳ ದುರಸ್ಥಿ ಮಾಡಲಾಗಿದೆ. ಈ ಜೊತೆಗೆ ಗುಬ್ಬಿಯ ದೊಡ್ಡ ಈ ಶಾಲೆಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿವೇಕ ಯೋಜನೆಯ ಹೊಸ ಕೊಠಡಿ ಉದ್ಘಾಟನೆ ಹಾಗೂ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಲಾಯಿತು. ನಂತರ ಲ್ಯಾಬ್ ಉದ್ಘಾಟನೆ ಹಾಗೂ ವಸ್ತು ಪ್ರದರ್ಶನ ಕೂಡಾ ನಡೆಸಲಾಯಿತು.
ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಸಿ.ಮೋಹನ್, ಜಿ.ಆರ್.ಶಿವಕುಮಾರ್, ಶೋಕತ್ ಆಲಿ, ಬಸವರಾಜು, ಜಿ.ಆರ್.ಪ್ರಕಾಶ್, ಎಸ್ ಡಿ ಎಂಸಿ ಅಧ್ಯಕ್ಷೆ ಮಮತಾ, ಕ್ರೀಡಾ ಪ್ರೋತ್ಸಾಹಕ ಸಿ.ಆರ್.ಶಂಕರ್ ಕುಮಾರ್, ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯಕುಮಾರ್, ಪಂಚಾಯತ್ ರಾಜ್ ಇಲಾಖೆ ಎ ಇ ಇ ನಟರಾಜು, ಉಪ ಪ್ರಾಶುಪಾಲ ಭವ್ಯ ಇತರರು ಇದ್ದರು.