ದಲಿತರ ಮೇಲಿನ ದೌರ್ಜನ್ಯವನ್ನು ಸಂಘಟನೆ ಮೂಲಕ ಖಂಡಿಸಿ ಹೋರಾಡಿ : ಎಂ.ಗುರುಮೂರ್ತಿ ಕರೆ

ಗುಬ್ಬಿ: ದಲಿತರ ಮೇಲಿನ ದೌರ್ಜನ್ಯ ಹಾಗೂ ಹಲ್ಲೆ ವಿರುದ್ಧ ದನಿಯೆತ್ತಿ ಹೋರಾಟ ನಡೆಸಲು ಸಂಘಟನೆ ಸದಾ ಮುಂದಾಗಿರಬೇಕು. ರಾಜ್ಯದಲ್ಲಿ ಹೆಚ್ಚಾಗಿರುವ ದಲಿತರ ಮೇಲಿನ ಶೋಷಣೆಗೆ ತಕ್ಕ ಉತ್ತರ ಕೊಡಲು ಬದ್ಧವಾದ ದಸಂಸ ಬಲವರ್ಧನೆ ಕೆಲಸ ಎಲ್ಲಾ ಸದಸ್ಯರು ಮಾಡುವಂತೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರ ಸಭೆ ಹಾಗೂ ಪದಾಧಿಕಾರಿಗಳ ನೇಮಕ ಮತ್ತು ಸಮಿತಿಗೆ ದುಡಿದ ಮುಖಂಡರಿಗೆ ನುಡಿ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಪ್ರೊ.ಬಿ.ಕೃಷ್ಣಪ್ಪ ಅವರು ಕಣ್ಣಾರೆ ಕಂಡ ದಲಿತರ ಮೇಲಿನ ಶೋಷಣೆಗೆ ಸಿಡಿದು ಸಂಸ್ಥಾಪನೆ ಮಾಡಿದ ಈ ಸಮಿತಿ ಇಡೀ ರಾಜ್ಯದಲ್ಲಿ ವೇಗವಾಗಿ ಬೆಳೆದು ಶಕ್ತಿಯುತಗೊಂಡಿದೆ. ನಂತರದ ದಶಕಗಳಲ್ಲಿ ಸಮಿತಿಯ ಚುರುಕಿನ ಕೆಲಸಕ್ಕೆ ಮಾರು ಹೋದ ಕೆಲವರು ದುರುಪಯೋಗ ಪಡಿಸಿಕೊಳ್ಳುವ ಕೆಲಸ ಮಾಡಿದ್ದಾರೆ. ಇಂತಹ ಕೃತ್ಯಕ್ಕೆ ಅನುವು ಮಾಡದೆ ಇಡೀ ರಾಜ್ಯದಲ್ಲಿ ಸಮಿತಿ ಮೂಲಕ ದಲಿತ ಹೋರಾಟ ಚುರುಕು ಗೊಳಿಸುತ್ತೇವೆ ಎಂದರು.

ಮನುವಾದಿಗಳ ವಜ್ರ ಮುಷ್ಠಿಯಲ್ಲಿ ಸಿಲುಕಿದ ದಲಿತರು ವರ್ಣ ಬೇದದಿಂದ ನಲುಗಿದ್ದಾರೆ. ಕಲ್ಲಿನ ಮೇಲೆ ಹಾಲು ಸುರಿಯುವ ಹಾಗೂ ಹಸುವಿನ ಗಂಜಲು ಕುಡಿಯುವ ಏಕೈಕ ದೇಶ ನಮ್ಮದು. ಈ ರೀತಿಯ ಮನುವಾದಿಗಳ ಧರ್ಮಕ್ಕೆ ವಿರೋಧ ವ್ಯಕ್ತ ಪಡಿಸಿದ ಅಂಬೇಡ್ಕರ್ ಅವರ ಸಂವಿಧಾನ ರಚನೆ ನಂತರ ದಲಿತರು ಒಗ್ಗೂಡುವ ಕೆಲಸ ಮಾಡಿದರು. ಅಸ್ಪೃಶ್ಯತೆ ಆಚರಣೆ ಜೊತೆಗೆ ಸಾಮಾಜಿಕ ಅಸಮಾನತೆ ಆಲಿಸಿದ ಬಿ.ಕೃಷ್ಣಪ್ಪ ಅವರು 1974 ರಲ್ಲಿ ಸ್ಥಾಪಿಸಿದ ದಲಿತ ಸಂಘರ್ಷ ಸಮಿತಿ ಸಮಾಜದಲ್ಲಿ ತುಳಿತಕ್ಕೆ ಒಳಗಾದವರ ಪರ ನಿಂತಿದೆ ಎಂದ ಅವರು ಚಂದ್ರ, ಮಂಗಳ ಗ್ರಹಕ್ಕೆ ಹೋಗುವ ಮನುಷ್ಯರನ್ನು ಕಂಡರೂ ಸಹ ನಮ್ಮಲ್ಲಿ ಆಳವಾಗಿ ಜಾತಿಯ ಬೇರು ಬಿಟ್ಟಿರುವುದು ವಿಪರ್ಯಾಸವೇ ಸರಿ. ಈ ಹಿಂದೆ ಅಂಬೇಡ್ಕರ್ ಅವರು ಹೇಳಿದ ಭವಿಷ್ಯ ನಿಜವಾಗಿದೆ. ಓರ್ವ ಮಾರ್ವಾಡಿ ಹಾಗೂ ಓರ್ವ ಚಹಾ ಮಾರುವವ ಇಡೀ ದೇಶ ಹಾಳು ಮಾಡುವರು ಎಂದು ಹೇಳಿದ್ದು ಇಂದು ಎಲ್ಲವೂ ಸತ್ಯ ಎನಿಸಿದೆ ಎಂದು ಮಾರ್ಮಿಕವಾಗಿ ಬಿಜೆಪಿ ಸರ್ಕಾರದ ಮೇಲೆ ತಿರುಗಿ ಬಿದ್ದರು.

ಪ್ರಗತಿಪರ ಚಿಂತಕ ದೊರೈರಾಜ್ ಮಾತನಾಡಿ ದಲಿತ ಚಳವಳಿ ಬಗ್ಗೆ ಮೊದಲು ತಿಳಿದು ಯುವಕರು ಮುಂದುವರೆಯಬೇಕು. ಸಮಿತಿಯ ಮೂಲಕ ಹೋರಾಟಕ್ಕೆ ರೂಪುರೇಷೆ ಹಾಕಿಕೊಳ್ಳಬೇಕು. ಈ ಹಿಂದೆ ಸಮಿತಿಯು ಆರಂಭಿಸಿದ ಹೋರಾಟ ಈಗ ದಿಕ್ಕು ತಪ್ಪುವ ಸಾಧ್ಯತೆಗಳು ಹೆಚ್ಚಾಗಿವೆ. ನೂರಾರು ಸಂಘಟನೆಗಳು ತಲೆ ಎತ್ತಿ ಯಾರು ಎಲ್ಲಿ ಹೇಗೆ ಹೋರಾಟ ತಿಳಿಯೋದಿಲ್ಲ ಎಂದ ಅವರು ಚಳವಳಿಯ ಯಶಸ್ವಿಗೆ ಅಂಬೇಡ್ಕರ್ ಅವರು ಹಾಕಿಕೊಟ್ಟ ಮಹತ್ವ ದಾರಿಯಾದ ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಅಳವಡಿಸಿಕೊಂಡ ಸಂಘಟನೆ ಮಾತ್ರ ಯಶಸ್ವಿ ಆಗಲಿದೆ ಎಂದರು.

ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಪಟ್ಟಣದ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಾಲಯದಿಂದ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ನಂತರ ಸಮಿತಿಯ ಸಂಘಟನೆಗೆ ದುಡಿದು ಮೃತಪಟ್ಟ ದಲಿತ ಮುಖಂಡರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ ಎ.ಜೆ.ಖಾನ್, ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ, ಶಿವಬಸಪ್ಪ, ಗಾಣಗೆರೆ ವಿರೂಪಾಕ್ಷ, ರಾಮಚಂದ್ರಪ್ಪ, ಲಕ್ಷ್ಮಿದೇವಮ್ಮ, ಬಸವರಾಜು, ಡಾ.ಕೃಷ್ಣಮೂರ್ತಿ, ನಾರಾಯಣಮೂರ್ತಿ, ಗಂಗಾರಾಮ್, ಲಾವಣ್ಯ, ಪಾವಗಡ ನಾರಾಯಣಪ್ಪ, ಮನು ಕುರಿ, ಕೀರ್ತಿ, ಶಿವನಂಜಪ್ಪ, ನರೇಂದ್ರಕುಮಾರ್ ಇತರರು ಇದ್ದರು.

ಟಿ ಎಸ್ ಕೃಷ್ಣಮೂರ್ತಿ

ಸಂಪಾದಕ ತುಮಕೂರು 9743340694

You May Also Like

error: Content is protected !!